ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಮೋದಿ ಸೇರಿದಂತೆ ಯಾರಿಗೂ ಇಲ್ಲ: ಮಾಜಿ ಸಿಎಂ. ಕುಮಾರಸ್ವಾಮಿ

ಉಮೇಶ ಗೌರಿ (ಯರಡಾಲ)

ಬೆಂಗಳೂರ: ಪರ್ಸೆಂಟೇಜ್ ಯಾಕೆ ಕೊಡುತ್ತೀರಿ? ಕಮಿಷನ್ ಕೇಳಿದರೆ ಕಾಮಗಾರಿ ಮಾಡುವುದಿಲ್ಲವೆಂದು ಒಂದು ವರ್ಷ ಕೆಲಸ ನಿಲ್ಲಿಸಿ, ಆಗ ತಂತಾನೇ ಎಲ್ಲವೂ ಸರಿ ಆಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಗುತ್ತಿಗೆದಾರರಿಗೆ ಕಿವಿಮಾತು ಹೇಳಿದ್ದಾರೆ.

ಟೆಂಡರ್‌ನಲ್ಲಿ ಭಾಗವಹಿಸುವುದು ಬಿಟ್ಟು ಸರಕಾರಕ್ಕೆ ಬಿಸಿ ಮುಟ್ಟಿಸಿ. ಪರ್ಸೆಂಟೇಜ್ ವಿರುದ್ಧ ಬೀದಿಗೆ ಇಳಿಯಿರಿ. ದಾಖಲೆಗಳನ್ನು ಜನರ ಮುಂದಿಡಿ. ಸುಖಾ ಸುಮ್ಮನೆ ಹೇಳಿಕೆಗಳಿಂದ ಪ್ರಯೋಜನ ಇಲ್ಲ ಎಂದು ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟರು.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು ಅವರು, 40 ಪರ್ಸೆಂಟ್ ಕಮೀಷನ್ ಬಗ್ಗೆ ಕೆಲ ಗುತ್ತಿಗೆದಾರರು ಆರೋಪ ಮಾಡಿದ್ದಾರೆ. ಯಾವುದಾದರೂ ಸಾಕ್ಷಿ ಇದ್ದರೆ ತನಿಖೆ ನಡೆಸುವುದಾಗಿ ಸರಕಾರ ಹೇಳುತ್ತಿದೆ. ತನಿಖೆಗೆ ಕೊಟ್ಟರೆ ಸಾಕ್ಷಿ ಕೊಡುತ್ತೇವೆಂದು ಗುತ್ತಿಗೆದಾರರು ಹೇಳುತ್ತಾರೆ. ಇದರಿಂದ ಪ್ರಯೋಜನ ಆಗಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ನಾನು ಎರಡು ಬಾರಿ ಮುಖ್ಯಮಂತ್ರಿಯಾದಾಗಲೂ ಈ ಪರ್ಸಂಟೇಜ್ ಏನೂ ಇರಲಿಲ್ಲ. ನಾನು ಲಾಟರಿ ನಿಷೇಧ ಮಾಡಿದಾಗ ಇದ್ದ ಕಿಂಗ್ ಪಿನ್ ಗಳು, ಮಂತ್ರಿಗಳು ಎಷ್ಟೆಷ್ಟು ಆಫರ್ ಕೊಟ್ಟರು ಎನ್ನುವುದು ಗೊತ್ತಿದೆ. ಆ ಆಫರ್ ಕೊಟ್ಟವರು ಇನ್ನೂ ಬದುಕಿದ್ದಾರೆ. ಆದರೂ ಎಲ್ಲವನ್ನು ಧಿಕ್ಕರಿಸಿ ಲಾಟರಿ ನಿಷೇಧ ಮಾಡಿದ್ದೆ. ಅಂತಹ ಬದ್ಧತೆ ಈ ಸರಕಾರಕ್ಕೆ ಇದೆಯಾ ಎಂದು ಎಚ್ಡಿಕೆ ಸವಾಲೆಸೆದರು.

ನನ್ನ ಕಾಲದಲ್ಲಿ ನಾನಂತೂ ಇದಕ್ಕೆ ಅವಕಾಶ ಕೊಡಲಿಲ್ಲ. ನಮ್ಮ ಮೆಟ್ರೋ ಯೋಜನೆಯ ಬೈಯ್ಯಪ್ಪನಹಳ್ಳಿ – ಮಹಾತ್ಮ ಗಾಂಧಿ ರಸ್ತೆ ನಡುವಿನ ಮೊದಲ ಹಂತದ ಯೋಜನೆಗೆ ಒಪ್ಪಿಗೆ ನೀಡಿದಾಗ ಅದರ ಗುತ್ತಿಗೆದಾರರು ಯಾರು ಎಂಬುದೇ ನನಗೆ ಗೊತ್ತಿರಲಿಲ್ಲ. ಆದರೆ, ಯೋಜನೆ ಕಾಲಮಿತಿಯಲ್ಲಿ ಮುಗಿಯಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದೆ. ಮುಖ್ಯಮಂತ್ರಿ ಕಚೇರಿ ಅಷ್ಟು ಪಾರದರ್ಶಕವಾಗಿತ್ತು. ಮೈತ್ರಿ ಸರಕಾರದ ಅವಧಿಯಲ್ಲಿ ಕೂಡ ಕಮಿಷನ್ ವ್ಯವಹಾರ ನಡೆದಿದೆ. ಆದರೆ ನನ್ನ ಕಚೇರಿಯಲ್ಲಿ ನಡೆದಿಲ್ಲ ಎಂದು ಕುಮಾರಸ್ವಾಮಿ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಕೋಟ್ಯಂತರ ರೂ. ಹಣ ಮಾಡಿರುವ ಅಧಿಕಾರಿಗಳ ಮನೆಗಳ ಮೇಲೆ ದಾಳಿ ಮಾಡಿ ಎಷ್ಟು ಕಳಂಕಿತರನ್ನು ಜೈಲಿಗೆ ಕಳುಹಿಸಿದ್ದಾರೆ? ಎಷ್ಟು ಜನರಿಗೆ ನ್ಯಾಯ ಕೊಡಿಸಿದ್ದಾರೆ? ನ್ಯಾಯಾಂಗ ತನಿಖೆಯಲ್ಲಿ ಏನಾದರೂ ಸಿಕ್ಕಿತೇ? ಇಲ್ಲ, ಅರ್ಕಾವತಿ ರಿಡೂ ತನಿಖೆ ನಡೆಸಿದ ನ್ಯಾ. ಕೆಂಪಣ್ಣ ಆಯೋಗ ಮಾಡಿದ ತನಿಖೆಯಲ್ಲಿ ಏನು ಸಿಕ್ಕಿತು? ಏನೇ ಸಾಕ್ಷಿ ಕೊಟ್ಟರೂ ಯಾವುದೇ ನ್ಯಾಯ ಸಿಗುವುದಿಲ್ಲ. ಸುಮ್ಮನೆ ಗುತ್ತಿಗೆದಾರರು ಇದೆಲ್ಲವನ್ನು ಬಿಟ್ಟು ಕೆಲಸ ನಿಲ್ಲಿಸಲಿ. ಆಮೇಲೆ ಎಲ್ಲವೂ ದಾರಿಗೆ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿಕೆ ಹೇಳಿದರು.

ಸಚಿವ ಮುನಿರತ್ನ ಅವರು ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಮಾನನಷ್ಟ ಮೊಕದ್ದಮೆ ಹೂಡುವುದಕ್ಕೆ ಯಾರಿಗಿದೆ ಮಾನ, ಮರ್ಯಾದೆ? ಅದರ ಬಗ್ಗೆ ಚರ್ಚೆ ಬೇಡ. ಅವರು ಶಾಸಕರಾಗುವುದಕ್ಕೂ ಮೊದಲು ಗುತ್ತಿಗೆದಾರರೇ ಆಗಿದ್ದರು. ಆ ಸಂದರ್ಭದಲ್ಲಿ ಗಂಗಾ ನಗರದಲ್ಲಿ ಗೋಡೆ ಕುಸಿದು ಒಂದು ಮಗು ಮೃತಪಟ್ಟಿತ್ತು. ಆಗ ಇವರೇ (ಮುನಿರತ್ನ) ತಾನೇ ಗುತ್ತಿಗೆದಾರರು. ಅವರು ಏನೇನು ಮಾಡಿದ್ದಾರೆ ಅಂತ ಗೊತ್ತಿದೆ ಎಂದು ಮುನಿರತ್ನ ಬಗ್ಗೆ ಕಿಡಿಕಾರಿದರು.

ತನಿಖೆ, ಒತ್ತಾಯ, ಹೇಳಿಕೆ, ಪ್ರತಿ ಹೇಳಿಕೆ ಇವೆಲ್ಲಾ ಸಮಯ ವ್ಯರ್ಥ ಆಗುವುದಕ್ಕೆ ಅಷ್ಟೇ. ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಯಾರಿಗೂ ಕಮಿಷನ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಇದಕ್ಕೆ ಕಾಂಗ್ರೆಸ್, ಬಿಜೆಪಿ ಯಾರೂ ಹೊರತಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

 ಮೈತ್ರಿ ಸರಕಾರ ಇದ್ದಾಗ ಯಾರೆಲ್ಲ ಏನು ಮಾಡಿದರು ಅಂತಾನೂ ಬಿಡಿಸಿ ಹೇಳಿದರೆ ದೊಡ್ಡ ಕತೆ ಆಗುತ್ತದೆ. ಮೊದಲು ವಿಧಾನಸೌಧದಿಂದಲೇ ಸ್ವಚ್ಚ ಮಾಡಬೇಕು. ನನ್ನ ಪಕ್ಷಕ್ಕೆ ಐದು ವರ್ಷ ಸ್ವತಂತ್ರ ಸರಕಾರ ಕೊಡಿ, ಕಮಿಷನ್ ವ್ಯವಹಾರವನ್ನು ಬುಡ ಸಮೇತ ಕಿತ್ತು ಹಾಕುತ್ತೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಎಲ್ಲ ವಿಷಯಗಳನ್ನೂ ಪ್ರಸ್ತಾಪ ಮಾಡುತ್ತೇನೆ. ಜನರ ಪರವಾಗಿ ಎಲ್ಲ ವಿಷಯಗಳನ್ನೂ ಹೇಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿಗಳು ತಿಳಿಸಿದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";