“ಬೀರು ಬೇಡ ನೀರು ಬೇಕು”- “ಸಾರಾಯಿ ಬೇಡ ಶಿಕ್ಷಣ ಬೇಕು”:ರಾಜ್ಯಾದ್ಯಂತ ವಿರೋಧ, ಮಹಿಳೆಯರ ಪ್ರತಿಭಟನೆ

ಬಾಗಲಕೋಟೆ ಅ.02: ರಾಜ್ಯದಲ್ಲಿ ಹೊಸದಾಗಿ ಒಂದು ಸಾವಿರ ಸರಾಯಿ ಅಂಗಡಿ ತೆರಯಲು ಅಬಕಾರಿ ಇಲಾಖೆ ಸಿದ್ದತೆ ನಡೆಸಿದ ಬೆನ್ನಲ್ಲೇ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈ ನಡುವೆ ಅಬಕಾರಿ ಸಚಿವ ಆರ್​.ಬಿ ತಿಮ್ಮಾಪುರ ತವರು ಜಿಲ್ಲೆಯಾದ ಬಾಗಲಕೋಟೆಯಲ್ಲಿ ಮದ್ಯಪಾನ ನಿಷೇಧಿಸುವಂತೆ ಮಹಿಳೆಯರು ಬೀದಿಗೆ ಇಳಿದಿದ್ದಾರೆ. ಬಾಗಲಕೋಟೆ ಜಿಲ್ಲಾಡಳಿತ ಭವನದ ಮುಂದೆ ಕಳೆದ ಎರಡು ದಿನದಿಂದ ಮಹಿಳೆಯರು ನಿರಂತರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಭಾನುವಾರ ಇಡೀ ದಿನ ಮತ್ತು ಅಹೋರಾತ್ರಿ ಧರಣಿ ನಡೆಸಿದರು. ಸೋಮಾವರ ಕೂಡ ಪ್ರತಿಭಟನೆ ಮುಂದುವರೆದಿದ್ದು, ಮದ್ಯಪಾನ ನಿಷೇಧಿಸುವಂತೆ ಒತ್ತಾಯಿಸುತ್ತಿದ್ದಾರೆ.

“ಬೀರು ಬೇಡ ನೀರು ಬೇಕು” “ಸಾರಾಯಿ ಬೇಡ ಶಿಕ್ಷಣ ಬೇಕು” ಎಂದು ಘೋಷಣೆ ಕೂಗಿದ್ದಾರೆ. ಸ್ಥಳಕ್ಕೆ ಬಾಗಲಕೋಟೆ ಕಾಂಗ್ರೆಸ್​ ಶಾಸಕ ಹೆಚ್ ವೈ ಮೇಟಿ, ಜಿಲ್ಲಾಧಿಕಾರಿ ಕೆ.ಎಮ್​. ಜಾನಕಿ ಭೇಟಿ ನೀಡಿದರು. ಈ ವೇಳೆ ಮಹಿಳೆಯರು ಶಾಸಕ ಹಾಗೂ ಜಿಲ್ಲಾಧಿಕಾರಿ ಎದುರು “ಸಾರಾಯಿ ಕುಡಿದು ನಮ್ಮ ಗಂಡ, ಮಕ್ಕಳು ಮೃತರಾಗಿತ್ತಿದ್ದಾರೆ. ನಮ್ಮ ಕುಟುಂಬಗಳು ಬೀದಿಗೆ ಬರುತ್ತಿವೆ. ಆದ್ದರಿಂದ ಸಾರಾಯಿ ಬಂದ್ ಮಾಡಿಸಿ. ಗ್ರಾಮೀಣ ಭಾಗದಲ್ಲಿ ಆಕ್ರಮವಾಗಿ ಎಲ್ಲೆಂದರಲ್ಲಿ ಸಾರಾಯಿ ಮಾರಾಟ ಮಾಡಲಾಗುತ್ತಿದೆ. ಅದನ್ನು ತಡೆಯಿರಿ ಎಂದು ಕಣ್ಣೀರು ಹಾಕಿದರು.

ಬೆಳಗಾವಿ: ಇದೇರೀತಿಯಾಗಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಮಹಿಳೆಯರು ಸಾರಾಯಿ ಬಂದ್​ ಮಾಡಿಸುವಂತೆ ಪ್ರತಿಭಟನೆ ಮಾಡಿದರು. ಮದ್ಯನಿಷೇಧ ಆಂದೋಲನ ಪ್ರಗತಿಪರ ಸಂಘಟನೆ ಒಕ್ಕೂಟ ಧರಣಿ ನಡೆಸಿ, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿತು.

ಅಕ್ರಮ ಮದ್ಯ ಮಾರಾಟ ತಡೆಯಬೇಕು. ಅಕ್ರಮ‌ ಮದ್ಯ ಮಾರಾಟಗಾರರ ಮೇಲೆ ಕ್ರಮಕ್ಕೆ ಸರ್ಕಾರ ಮುಂದಾಗಬೇಕು. ಗ್ರಾಮಸಭೆಗೆ ಪರಮಾಧಿಕಾರ ನೀಡುವ ಆದೇಶ ಹೊರಡಿಸಬೇಕು. ಹೊಸದಾಗಿ ಒಂದು ಸಾವಿರ ಮದ್ಯದಂಗಡಿ ಪರವಾನಿಗೆ ಪ್ರಸ್ತಾವವನ್ನು ಹಿಂಪಡಯಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿತು.

ರಾಯಚೂರು: ಹೊಸ ಮದ್ಯದ ಅಂಗಡಿಗಳನ್ನು ತೆರಯವ ಸರ್ಕಾರದ ಕ್ರಮವನ್ನು ವಿರೋಧಿಸಿ, ನಗರದಲ್ಲಿ ಗಾಂಧಿ ಜಯಂತಿ ಆಚರಣೆ ವೇಳೆ ಮಹಿಳೆಯರು ಪ್ರತಿಭಟನೆ ನಡೆಸಿದರು. ರಾಯಚೂರು ನಗರದ ಮಹಾತ್ಮ ಗಾಂಧಿ ಸ್ಟೆಡಿಯಂ ಬಳಿ ಭಾನುವಾರದಿಂದ ಮಹಿಳೆಯರು ಆಹೋರಾತ್ರಿ ಧರಣಿಗೆ ಕುಳಿತಿದ್ದಾರೆ. ಇಂದು ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಗಾಂಧಿ ಜಯಂತಿ ಆಚರಣೆ ವೇಳೆ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿನ ಮಹಾತ್ಮ ಗಾಂಧಿಜಿ ಮೂರ್ತಿಗೆ ಮಾಲಾರ್ಪಣೆ ಮಾಡಲು ಬಂದ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ಎಸ್ ಬೋಸರಾಜ್ ಅವರಿಗೆ ಮಹಿಳೆಯರು ಘೇರಾವ್​​ ಹಾಕಲು ಯತ್ನಿಸಿದರು. ಅಲ್ಲದೆ ಸಚಿವ ಬೋಸರಾಜ್ ಗಾಂಧಿ ಪ್ರತಿಮೆಗೆ ಹಾರ ಹಾಕುವುದಕ್ಕೂ ಮುನ್ನ, ಪ್ರತಿಭಟನಾಕಾರರು ಹಾರ ಹಾಕಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಪ್ರತಿಭಟನೆ ಕಾವನ್ನು ತಿಳಿಸಿಗೊಳಿಸಿದರು. ಕೊನೆಗೆ ಎನ್ಎಸ್ ಬೋಸರಾಜ್ ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿ, ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದರು.

 

 

 

 

ಕೃಪೆ:ಟಿವಿ9

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";