ವಸಂತ ಋತುವಿನಾಗಮನ. ಆಹಾ!ಮತ್ತೆ ಮತ್ತೆ ಬರುವ ವಸಂತ! ಮನುಷ್ಯನ ಜೀವನಕ್ಕೆ ಹೊಸ ಚೈತ್ಯನ್ಯ ಮೂಡಿಸಿ, ಸಂತೋಷದಾಗರದಲಿ, ಸಿಹಿ ಸಿಹಿ ಸ್ಪಂದನ ನೀಡುತ್ತದೆ. ಎಲ್ಲಿ ನೋಡಿದರಲ್ಲಿ ಜೀವ ಸಂಚಲನ! ಋತುರಾಜನಾಗಮನಕೆ ಎಲ್ಲಿಲ್ಲದ ಉತ್ಸಾಹ. ಬೇವು ಬೆಲ್ಲದೊಂದಿಗೆ ಯುಗಾದಿಯ ಹೊಸ ವರ್ಷದಾರಂಭಕೆ ಸ್ವಾಗತ ಕೋರೋಣ. |
ಮಾರ್ಚ್ ತಿಂಗಳ ಕೊನೆಯ ದಿನಗಳು. ಬಿರು ಬೇಸಿಗೆಯ ತಾಪದ ತೀವ್ರತೆ ಮೆಲ್ಲಗೆ ಏರುತಿರುವ ಸಮಯ. ಈ ಮಾಸದಲಿ ಹಸಿವಿಗಿಂತ ದಾಹದ್ದೇ ಮೇಲುಗೈ. ನೀರು ಕುಡಿದು ಕುಡಿದು ಹೊಟ್ಟೆ ಬಿರಿದು ಊಟವೂ ರುಚಿಸದು. ‘ನೀರು’ ಜೀವಜಲವಾಗಿ ಅಮೃತಪಾನದಂತೆ ಆಕರ್ಷಿಸುವ ಸುಂದರ, ಸುಮಧುರ ಪೇಯ.
ನಾವು ಉತ್ತರ ಕರ್ನಾಕದ ಮಂದಿ ಊಟದ ಶೈಲಿಯನ್ನೇ ಬದಲಿಸಿಕೊಳ್ಳುವ ಅನಿವಾರ್ಯತೆ ಬಹು ಬೇಗ ನಿರ್ಮಾಣವಾಗುತ್ತದೆ. ಈ ಬಿಸಿಲ ಬೇಗೆಗೆ ನಾಲಿಗೆ ಸಿಹಿ ಸಿಹಿ ಪದಾರ್ಥ ಬಯಸುವುದು ಸಹಜ. ಬನಾಸ್ಪತ್ರೆ, ಕಲ್ಲಂಗಡೆ, ಸೌತೆಕಾಯಿ, ಟೊಮೆಟೊಗಳಿದ್ದರೂ, ಅದಕ್ಕೆ ಹಣ್ಣುಗಳ ರಾಜ ಮಾವಿನ ಹಣ್ಣೇ ಪರಿಹಾರ.
ಮನೆ ಮನೆಗಳಲಿ ಬುಟ್ಟಿಗಟ್ಟಲೆ ಮಾವಿನಹಣ್ಣು ತಂದಿರಿಸಿ, ಮನಸೋ ಇಚ್ಛೆ ತಿನ್ನಲು ಬಳಸುವುದು. ಗಟ್ಟಿಯಾದ ರಸದ ಜೊತೆ ಬಿಸಿ ಬಿಸಿ ಚಪಾತಿಯನ್ನು ಜೊತೆ ಮಾಡಿ ಸವಿದು, ಸೆಕೆಯ ಸಿಡಿ ಸಿಡಿ ಭಾವ ಹೋಗಲಾಡಿಸಿಕೊಳ್ಳುವುದು. ಅದರೊಂದಿಗೆ ಮಾವಿನಕಾಯಿಯ ಚಟ್ನಿ, ತೊಕ್ಕು, ತರತರಹದ ಉಪ್ಪಿನಕಾಯಿಯ ಸಡಗರ.
ಹೀಗೆಲ್ಲಾ ಅನುಭವಿಸುವಾಗ ‘ಮನುಷ್ಯ’ ಮತ್ತು ‘ಮಾವಿನಮರ’ ಎರಡರ ಜೀವನವನ್ನು ಮನಸು ಹೋಲಿಸಿ, ತೂಗ ತೊಡಗಿತು. ಮನುಷ್ಯನ ಜೀವನ ಎಷ್ಟು ವಿಚಿತ್ರ ಎನಿಸಿ, ಈ ವೃಕ್ಷದ ಜೀವನ ಕಣ್ಣೆದುರಿಗೆ ಕಟ್ಟಿಕೊಂಡು ನಿಂತಿತು…
ಒಮ್ಮೆ ಬೆಳೆದು ನಿಂತ ಮಾವಿನ ಮರ ಪ್ರತಿ ವರ್ಷವೂ ಸಂಪತ್ಭರಿತವಾಗಿ ಫಲ ಕೊಡುತ್ತದೆ. ಅದರ ಬೇರು ಕಾಂಡಗಳು ಕೊರೆವ ಚಳಿಗೆ ಮರಗಟ್ಟಿ ನಿರ್ಜೀವವಾದಂತೆ ಪೇಲವವಾಗಲು ಶುರು. ನಿಧಾನಕೆ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಹಣ್ಣೆಲೆ ಎನಿಸಿಕೊಳ್ಳುತ್ತವೆ. ಆ ನಿರ್ಜೀವ ಎಲೆಗಳು ಹಕ್ಕಲು ಗಟ್ಟಿದ ಗಾಯದಂತೆ ನಿಧಾನಕೆ ಒಂದೊಂದೇ ಒಂದೊಂದೇ ಉದುರಲು, ಇಡೀ ಮರವೆಲ್ಲಾ ಬೋಳು ಬಪ್ಪವಾಗಿ ಬೋಳೇ ಬೋಳು. ಅದರ ಸುತ್ತಮುತ್ತಲಿನ ವಾತಾವರಣವೆಲ್ಲಾ ಖಾಲಿ ಖಾಲಿ ಎನಿಸಿಲಾರಂಭಿಸುತ್ತದೆ.
ಅಷ್ಟರಲ್ಲಿ ಮತ್ತೆ ವಸಂತ ಋತುವಿನಾಗಮನ. ಆಹಾ!
ಮತ್ತೆ ಮತ್ತೆ ಬರುವ ವಸಂತ! ಮನುಷ್ಯನ ಜೀವನಕ್ಕೆ
ಹೊಸ ಚೈತ್ಯನ್ಯ ಮೂಡಿಸಿ, ಸಂತೋಷದಾಗರದಲಿ, ಸಿಹಿ ಸಿಹಿ ಸ್ಪಂದನ ನೀಡುತ್ತದೆ. ಎಲ್ಲಿ ನೋಡಿದರಲ್ಲಿ ಜೀವ ಸಂಚಲನ! ಋತುರಾಜನಾಗಮನಕೆ ಎಲ್ಲಿಲ್ಲದ ಉತ್ಸಾಹ.
ಮಾವಿನ ಮರದ ತುಂಬೆಲ್ಲಾ ಹರಡಿರುವ ಹಸಿರೆಲೆಗಳು ಸೂರ್ಯನ ಕಿರಣಗಳಿಗೆ ನಾಚಿ ನಳನಳಿಸಲು, ಅಲ್ಲೇ ಪಕ್ಕದಲ್ಲೇ ಚಿಗುರೊಡೆಯುತ್ತಿರುವ ಮೊಗ್ಗಿಗೆ, ತಾನೂ ಹೂವಾಗಿ, ಅರಳಿ, ಕಾಯಾಗುವಾಸೆ. ಮೊದಮೊದಲು ಗಟ್ಟಿಯಾದ ಕಾಯಿಗಳು, ಸಣ್ಣ ಆಕಾರದ ಒಗರೊಗರು ಮಿಡಿಗಾಯಿಗಳು. ಬಲಿತ ಖಗ್ಗು ಕಾಯಿ ಹುಳಿ ಎಂದರೆ ಹುಳಿ ಜೊಡ್ಡು. ಅದನ್ನೂ ಉಪ್ಪಿನೊಂದಿಗೆ ತಿಂದು, ಚಿಗಳಿ ಎದ್ದ ಹಲ್ಲುಗಳಿಂದ ಉಣಲು ಒದ್ದಾಡುವವರು ಅನೇಕರು. ಮುಂದೆ ಮತ್ತೆ ಕೆಲವೇ ಕೆಲವು ದಿನಗಳಲ್ಲಿ ದ್ವಾರಗಾಯಿ ಅಲ್ಲೇ ಪಕ್ವವಾಗಲು ಸಿಹಿ ಸಿಹಿ ಮಾವಿನ ಹಣ್ಣಿನ ಹಳದಿ ಬಣ್ಣದ ರೂಪ. ಆ ಮಾವು ತಿನ್ನಲು ಮನುಕುಲ ಸನ್ನದ್ಧ.
ಯಾರಿಗೆ ಬೇಡ ಈ ಸುಂದರ ಪ್ರಕೃತಿಯ ಪಲ್ಲಟ? ಋತುಗಳು ಬದಲಾಗುತ್ತಲೇ ಇರಬೇಕು. ಹಣ್ಣುಗಳ ರಾಜ ಮಾವು ಬಂದರೆ ಸಂತೋಷ, ಸಂಭ್ರಮ, ಸಡಗರವು ಮೇಳೈಸಿ ಏಕಕಾಲಕ್ಕೇ ಆನಂದ. ಮನುಷ್ಯನ ಏಕತಾನತೆಯ ಜೀವನ ಶೈಲಿಗೊಂದು ಬ್ರೇಕ್ ಬೀಳುತ್ತದೆ. ಹಾಗಾಗಲು ಈ ಪ್ರಕೃತಿಯಲಿ ಬದಲಾವಣೆ ಬೇಕೇ ಬೇಕು. ಅದು ಮನುಷ್ಯನಿಗೂ ಅನಿವಾರ್ಯ. ಚಳಿಗಾಲ, ಮಳೆಗಾಲ, ಬೇಸಿಗೆ ಕಾಲ ಒಂದರ ನಂತರ ಒಂದು ರುತುಮಾನದ ಚಕ್ರ ತಿರುಗುತ್ತಲೇ ಇರುವ ಗಿರಕಿಗೆ ಮನುಷ್ಯ ಒಗ್ಗಿಕೊಂಡಿರುತ್ತಾನೆ.
ಈ ಮಾವಿನ ಮರದ ಪ್ರಕ್ರಿಯೆ ಗಮನಿಸಿದಾಗ, ಹಣ್ಣೆಲೆಯಿಂದ ಹಿಡಿದು ಸಿಹಿಯಾದ ಹಣ್ಣಿನವರೆಗಿನ ಪಯಣ ಎಷ್ಟು ಅದ್ಭುತ! ಒಂದೇ ಒಂದು ಮರ ಅದೆಷ್ಟು ಬಾರಿ ಫಲ ಕೊಡುತ್ತದೆ! ಅದೆಷ್ಟು ಬಾರಿ ಬಸಿರು. ಮತ್ತೆ ಮತ್ತೆ ಹೆರಿಗೆ. ಸಮೃದ್ಧಿಯೋ ಸಮೃದ್ಧಿ! ಮನುಷ್ಯನಾಗಿ ಹುಟ್ಟುವುದಕ್ಕಿಂತ ಮರವಾಗಿ ಹುಟ್ಟಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು!
ಇನ್ನು ಮನುಷ್ಯನ ಬದುಕನ್ನು ಗಮನಿಸಿದರೆ, ಈ ಜೀವನ ಜಂಜಾಟದಲಿ ನಡೆದಷ್ಟೂ ದೂರ ದೂರ ಸಾಗುತ್ತಲೇ ಇರಬೇಕು. ದಣಿದ ದೇಹ ಸುಸ್ತಾದರೂ ಸವೆಸಲೇ ಬೇಕಾದ ದಾರಿಯನ್ನು ಸವೆಸಲೇ ಬೇಕು, ಹಾಗೆಯೇ ಸವಿಯಲೂ ಬೇಕು, ಸಿಹಿ ಕಹಿ ಏನೇ ಇರಲಿ. ಏಕೆಂದರೆ ಗುರಿ ತಲುಪುವ ಆಸೆಗೆ ಆರಂಭ ಅಂತ್ಯ ಇರುವುದಿಲ್ಲ. ಮನುಷ್ಯನ ಸಹಜ ಸ್ವಭಾವದಂತೆ ಒಂದಾದ ನಂತರ ಒಂದು ಆಸೆಗಳು ಚಿಗುರುತ್ತಲೇ ಇರುತ್ತವೆ. ಜೀವನ ಸಾಗಿದಂತೆಲ್ಲಾ ಆಸೆಗಳು ಬೇರು, ಕಾಂಡ, ಚಿಗುರು, ಹೂವು, ಕಾಯಿಯಾಗುವ ತವಕದ ಆಶಾವಾದಿತನ.
ಮನುಷ್ಯ ಹಜ್ಜೆ ಇಟ್ಟಲೆಲ್ಲಾ ರಾಶಿ ರಾಶಿ ಮುಳ್ಳುಗಳು. ಬೇವಿನ ಕಹಿಯ ಅನುಭವ ಎಷ್ಟು ಗಾಢವಾಗಿರುತ್ತದೆ ಎಂದರೆ ಊಹಿಸಲೂ ಸಾಧ್ಯವಿಲ್ಲದಷ್ಟು. ಆಗ ಹೆದರದೆ ಎದೆಗುಂದದೆ ಭಯಮುಕ್ತವಾಗಿ ಮುನ್ನುಗ್ಗಿದವರ ಸ್ಥಿತಿಯೇ ಬೇರೆ. ಇಲ್ಲವಾದರೆ ನಿಂತ ನೆಲ ಕುಸಿದಂತೆ ಭಾಸ. ಪಾದದಡಿಯ ಹುಡಿ ಮಣ್ಣೂ ಆರ್ದ್ರತೆಯಿಂದ ಸವಾಲು ಹಾಕುತ್ತದೆ.
ಮನಸು ಗಟ್ಟಿಯಾಗಿಸಿ ಬೆಟ್ಟದಂತೆ ಬೆಳೆದು ನಿಂತರೆ, ಭೋರ್ಗರೆವ ಮಳೆಯೂ ಸಿಹಿ ಸಿಹಿ ಸಿಂಚನವಾಗಿ ಮುದ ನೀಡಲು ಸಿದ್ಧವಾಗುತ್ತದೆ. ಆದರೂ ಕೆಲವೊಮ್ಮೆ ನಂಜ ನುಂಗುವ ಸಮಯ ಬಂದೇ ಬಿಡುತ್ತದೆ. ದೃತಿಗೆಡದೆ, ಕಂಗಾಲಾಗದೆ, ನಂಜುಂಡನಂತೆ ಎದ್ದು
ನಿಲ್ಲಲು, ಜೀವನದ ಕಹಿಯೆಲ್ಲಾ ಕರಗಿ ಎಲ್ಲೆಲ್ಲೂ ಸಿಹಿ ಸಿಹಿಯಾಗುವ ಸಮೃದ್ಧತೆಯ ಸಾಧ್ಯತೆ.
ನಾವು ಹುಲು ಮಾನವರಿಗೆ ಇರುವುದು ಒಂದೇ ಒಂದು ಬದುಕು. ಅದರೊಳಗಿನ ಒಂದೇ ಒಂದು ಜೀವನ. ಅದು ಸಾರ್ಥಕವಾದರೆ ಮಾತ್ರ ಅರ್ಥಪೂರ್ಣ. ಇಲ್ಲವಾದರೆ, ಅದೇನು ಹೇಳಬೇಕೋ ಗೊತ್ತಿಲ್ಲ. ಹುಟ್ಟು- ಸಾವು ಇವೆರಡರ ಮಧ್ಯೆ ಬಾಲ್ಯ, ಯೌವನ, ಮುಪ್ಪು. ಈ ಮೂರು ಹಂತಗಳ ತಲ್ಲಣದೊಂದಿಗೆ ಮುಕ್ತಾಯ. ಇವುಗಳನ್ನೆಲ್ಲಾ ಅರಿಯುವ ಹೊತ್ತಿಗೆ ಸಾವು ಎದೆ ಮೇಲೆ ಬಂದೇ ಬಿಟ್ಟಿರುತ್ತದೆ. ಆಗ ಯಾರನ್ನೂ ಕಾಡುವಂತಿಲ್ಲ, ಬೇಡುವಂತಿಲ್ಲ. ಅಥವಾ ಕಾಡಿದರೂ, ಬೇಡಿದರೂ ಸಮಯ ಇರುವುದಿಲ್ಲ. ಸಮಯ ಇರುವಾಗಲೇ ಪರಿಜ್ಞಾನ ಮೂಡುವುದೂ ಅಪರೂಪ.
.
ಇದೆಲ್ಲಾ ಹೇಳಿದಷ್ಟು ಸುಲಭ ಅಲ್ಲದೆ ಇರಬಹುದು. ಆದರೆ ಮಾವಿನ ಮರದಂತೆ ವರ್ಷಕೊಮ್ಮೆ ಒಣಗಿ, ಮತ್ತೆ ಚಿಗುರಲು ಮನುಷ್ಯನಿಗೆ ಅವಕಾಶವಿದೆಯೇ? ಒಮ್ಮೆ ಚಿಂತಿಸಿ ನೋಡೋಣ. ಈ ಸತ್ಯ ಮನದ ಮೂಲೆಯಲಿ ಮೂಡಿದಾಗ ಸಿಹಿ ಕಹಿ ಬದುಕಿನಾಟಕೆ ಮನಸು ಸನ್ನದ್ಧವಾಗಿ ತೆರೆದುಕೊಳ್ಳುತ್ತ, ಹಾಗೆಯೇ ನಡೆಯುತ್ತ ಮುಂದೆ ಸಾಗುತ್ತದೆ.
ಬೇವು ಬೆಲ್ಲದೊಂದಿಗೆ ಯುಗಾದಿಯ ಹೊಸ ವರ್ಷದಾರಂಭಕೆ ಸ್ವಾಗತ ಕೋರೋಣ.