ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಪೋಷಣಾ ಅಭಿಯಾನ

ಉಮೇಶ ಗೌರಿ (ಯರಡಾಲ)

ಬೈಲಹೊಂಗಲ(ಅ.10): ತಾಲೂಕಿನ ಬೂದಿಹಾಳದ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪೋಷಣಾ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ಎನ್.ಆರ್ ಠಕ್ಕಾಯಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಅವರು
ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸತ್ವಯುತ ಆಹಾರ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು. ಪ್ರತಿ ದಿನ ಮಕ್ಕಳು ವಿವಿಧ ರೀತಿಯ ತರಕಾರಿ, ವಿಟಾಮಿನ್ ಮತ್ತು ಪ್ರೋಟೀನ್ ಒಳಗೊಂಡ ಸಮತೋಲನ ಆಹಾರ, ವಿವಿಧ ಹಣ್ಣುಗಳು, ಸಾಕಷ್ಟು ನೀರು ಸೇವಿಸುವುದರಿಂದ ದೈಹಿಕ ಮತ್ತು ಮಾನಸಿಕ ಸದೃಢತೆ ಹೆಚ್ಚಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಮಕ್ಕಳು ಕೇವಲ ರುಚಿಗೆ ಮಹತ್ವ ಕೊಡದೇ ಶಕ್ತಿಯುತ ಆಹಾರ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ದೈಹಿಕ ಶಿಕ್ಷಣ ಶಿಕ್ಷಕ ಪ್ರವೀಣ ಗುರುನಗೌಡರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ವಿವಿಧ ತರಕಾರಿ, ಸೊಪ್ಪು, ದವಸ ಧಾನ್ಯಗಳು, ಹಣ್ಣುಗಳು ಮತ್ತಿತರ ಆಹಾರ ಪದಾರ್ಥಗಳನ್ನು ತಾವೇ ಶಾಲೆಗೆ ತಂದು ವಿಶಿಷ್ಟ ರೀತಿಯಲ್ಲಿ ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು. ಆರೋಗ್ಯ, ಸಮತೋಲನ ಆಹಾರ, ಜೀವನ ಶೈಲಿಯ ಕುರಿತು ಮಾಹಿತಿ ನೀಡಲಾಯಿತು.

ಶಿಕ್ಷಕ ಐ.ಎಸ್. ಮುದಗಲ್ ಮಾತನಾಡಿ ಮಕ್ಕಳು ಜಂಕ್‌ಪುಡ್ ತಿನ್ನುವ ಚಟದಿಂದ ದೂರವಿದ್ದು ಪೋಷಕಾಂಶಯುಕ್ತ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಆರೋಗ್ಯ ಸಂಪತ್ತು ಕಾಯ್ದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಹತ್ತನೆಯ ತರಗತಿ ವಿದ್ಯಾರ್ಥಿನಿ ಲಕ್ಷ್ಮೀ ತಡಸಲೂರ ಮಾತನಾಡಿ ಪೌಷ್ಟಿಕ ಆಹಾರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆಯಲ್ಲದೇ ಖಾಯಿಲೆಗಳಿಂದ ದೂರವಿರಲು ಸಹಾಯವಾಗುತ್ತದೆ ಎಂದು ಹೇಳಿದಳು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಜೆ.ಆರ್.ನರಿ, ಎ.ಎಚ್.ಪಾಟೀಲ, ಎಸ್.ಬಿ.ಭಜಂತ್ರಿ, ಎಸ್.ವಿ. ಬಳಿಗಾರ, ಆರ್.ಸಿ.ಸೊರಟೂರ, ಎಚ್.ವಿ.ಪುರಾಣಿಕ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅಪೂರ್ವಾ ಸೂರ್ಯವಂಶಿ ಸ್ವಾಗತಿಸಿದರು. ಸಾಕ್ಷಿ ನಾಗಣ್ಣವರ ನಿರೂಪಿಸಿದರು. ಮೇಘಾ ಚಚಡಿ ವಂದಿಸಿದರು.

Share This Article
";