ಬೆಳಗಾವಿ 16 : ಹೊಸಕನ್ನಡ ಕಾವ್ಯದ ಪ್ರಮುಖ ಕವಿ ಸಾಹಿತಿಗಳಾಗಿದ್ದ ನಾಡೋಜ ಡಾ.ಚನ್ನವೀರ ಕಣವಿಯವರ ಅಗಲಿಕೆ ಈ ನಮ್ಮ ಕನ್ನಡ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಹೇಳಿದರು.
ಕಣವಿಯವರ ಅಂತಿಮ ದರ್ಶನಕ್ಕಾಗಿ ಬೆಳಗಾವಿ ಮಾರ್ಗವಾಗಿ ಧಾರವಾಡಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಹಿರೇಬಾಗೇವಾಡಿ ಗ್ರಾಮದಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರುಗಳನ್ನು ಭೇಟಿಯಾಗಿ ಗ್ರಾಮದಲ್ಲಿನ ಬಸವೇಶ್ವರ ವೃತ್ತದಲ್ಲಿನ ಜಗಜ್ಯೋತಿ ಬಸವೇಶ್ವರರ ಪುಥ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ಅಗಲಿದ ಖ್ಯಾತ ಸಾಹಿತಿ ಕವಿ ಚನ್ನವೀರ ಕಣವಿಯವರಿಗೆ ಸದ್ಗತಿ ಸಿಗಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಡೀ ಕನ್ನಡಿಗರ ಪರವಾಗಿ ಶೃದ್ದಾಂಜಲಿ ಸಲ್ಲಿಸಿ ಅವರ ಅಂತಿಮ ದರ್ಶನ ಪಡೆಯಲು ತೆರಳುತ್ತಿದ್ದು ಕಣವಿಯವರ ಜೊತೆಗೆ ವೈಯಕ್ತಿಕ ಕೌಟುಂಬಿಕ ಸಂಬಂಧ ಹೊಂದಿದ್ದು ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಧಾರವಾಡದಲ್ಲಿ ಮುಗಿಸಿದ್ದು ಸಂತ ಶಿಶುನಾಳ ಷರೀಪ ಅವರ ಗುರುಗಳಾಗಿದ್ದ ಗೋವಿಂದ ಭಟ್ಟರು ನನ್ನ ಮುತ್ತಜ್ಜ ಆಗಿದ್ದರಿಂದ ನನ್ನನ್ನು ಅತ್ಯಂತ ಆತ್ಮೀಯತೆಯಿಂದ ಏಕವಚನದಲ್ಲಿ ಮಾತನಾಡಿಸುತ್ತಿದ್ದರು. ಅವರ ಜೊತೆ ನಿರಂತರ ಸಂಪರ್ಕದಲ್ಲಿದ್ದ ನನಗೆ ಅವರ ಅಗಲಿಕೆಯಿಂದ ಬಹಳಷ್ಟು ನೋವಾಗಿದೆ ಎಂದು ಸಂತಾಪ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಕಸಾಪ ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ಡ, ಹಿರೇಬಾಗೇವಾಡಿಯ ಗ್ರೂಪ್ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಬೆಳಗಾವಿ ತಾಲೂಕಿನ ಕಸಾಪದ ಕಾರ‍್ಯಕಾರಿ ಸಮಿತಿ ಸದಸ್ಯ ಬಿ.ಜಿ.ವಾಲಿಇಟಗಿ, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮಾಜಿ ಸದಸ್ಯ ಮೋಹನ ಬಸನಗೌಡ ಪಾಟೀಲ, ಸಾಮಾಜಿಕ ಕಾರ‍್ಯಕರ್ತ ಬಸವರಾಜ ಕಡೇಮನಿ, ಕಸಾಪ ಜಿಲ್ಲಾ ಕಾರ‍್ಯಕಾರಿ ಸಮಿತಿ ಸದಸ್ಯ ಆಕಾಶ್ ಅರವಿಂದ ಥಬಾಜ, ಅಖಂಡ ಕರ್ನಾಟಕ ರೈತ ಸಂಘದ ಅಧ್ಯಕ್ಷ ಬಸವರಾಜ ಡೊಂಗರಗಾಂವಿ, ಡಾ: ನೀತಾ ಚವ್ವಾಣ, ಎಸ್.ಬಿ.ಮೇಳೇದ, ಕಸಾಪ ಸದಸ್ಯರಾದ ಚನ್ನಬಸವ ಗಾಣಗೇರ, ಘಟಿಗೆಪ್ಪ ಗುರವನ್ನವರ, ಶಿವಕುಮಾರ ಪಾಟೀಲ, ಮನೋಹರ ಕಮ್ಮಾರ ಮತ್ತಿತರರು ಉಪಸ್ಥಿತರಿದ್ದರು.