ಖಾನಾಪುರ: ಕಳೆದ 26 ದಿನಗಳ ಹಿಂದೆ ಮೇವು ತರಲು ಹೊಲಕ್ಕೆ ತೆರಳಿದ್ದ ತಾಲ್ಲೂಕಿನ ಲಕ್ಕೇಬೈಲ ಗ್ರಾಮದ ರಾಮಚಂದ್ರ ಅಂಧಾರೆ (36) ಅವರ ಅಸ್ತಿಪಂಜರ ಗುರುವಾರ ಪತ್ತೆಯಾಗಿದೆ. ಪೊಲೀಸರು ‘ಹೆಸ್ಕಾಂ’ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಹೊಲದಲ್ಲಿ ಹರಿದುಬಿದ್ದ ವಿದ್ಯುತ್ ತಂತಿ ಸ್ಪರ್ಶದಿಂದಾಗಿ ಈ ವ್ಯಕ್ತಿ ಮೃತಪಟ್ಟಿದ್ದಾರೆ. ವಿದ್ಯುತ್ ಪ್ರವಹಿಸಿದ ಕಾರಣ ಇಡೀ ದೇಹ ಸುಟ್ಟು ಕರಕಲಾಗಿದೆ. ದೇಹದ ಮೂಳೆಗಳು ಹಾಗೂ ತಲೆಬುರುಡೆ ಪ್ರತ್ಯೇಕವಾಗಿ ಸಿಕ್ಕಿವೆ.
ಗ್ರಾಮದಿಂದ ದೂರದಲ್ಲಿ ಕಬ್ಬಿನ ಗದ್ದೆಯಲ್ಲಿ ಶವ ಬಿದ್ದಿದ್ದರಿಂದ ನಾಲ್ಕು ವಾರಗಳಿಂದ ಯಾರಿಗೂ ಸುಳಿವು ಸಿಕ್ಕಿಲ್ಲ. ಗುರುವಾರ ಅಸ್ತಿಪಂಜರ ಕಂಡ ಕೃಷಿ ಕಾರ್ಮಿಕರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಅದು ರಾಮಚಂದ್ರ ಅವರ ಅಸ್ತಿಪಂಜರ ಎಂಬುದು ಖಚಿತವಾಯಿತು.
ಘಟನೆಗೆ ಹೊಣೆಗಾರರನ್ನಾಗಿ ಮಾಡಿ ‘ಹೆಸ್ಕಾಂ ಖಾನಾಪುರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್’ ವಿರುದ್ಧ ಐಪಿಸಿ ಸೆಕ್ಷನ್ 306 ಅಡಿ ಪ್ರಕರಣ ದಾಖಲಿಸಲಾಗಿದೆ. ವ್ಯಕ್ತಿಯ ಅಸ್ತಿಪಂಜರದ ಮೇಲೆಯೇ ವಿದ್ಯುತ್ ತಂತಿ ಹರಿದುಬಿದ್ದಿದ್ದನ್ನೂ ನಮೂದಿಸಲಾಗಿದೆ.
ಸೆಪ್ಟಂಬರ್.12ರಂದು ಧನಕರುಗಳಿಗೆ ಮೇವು ತರುವುದಾಗಿ ಮನೆಯವರಿಗೆ ತಿಳಿಸಿ ರಾಮಚಂದ್ರ ಹೊಲಕ್ಕೆ ತೆರಳಿದ್ದರು. ಮನೆಗೆ ಬರದ ಕಾರಣ ಖಾನಾಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಲಕ್ಕೇಬೈಲ ಗ್ರಾಮದ ಹಲವೆಡೆ ವಿದ್ಯುತ್ ತಂತಿಗಳು ಧರೆಗುರುಳಿದ ಬಗ್ಗೆ ಗ್ರಾಮಸ್ಥರು ಹೆಸ್ಕಾಂ ಕಚೇರಿಗೆ ತಿಳಿಸಿದ್ದರೂ ಹೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ಅವುಗಳ ತೆರವಿಗೆ ನಿರ್ಲಕ್ಷ್ಯ ವಹಿಸಿದರು. ಇಲಾಖೆಯ ನಿರ್ಲಕ್ಷ್ಯದ ಕಾರಣ ರಾಮಚಂದ್ರ ಸಾವಿಗೀಡಾಗಿದ್ದಾರೆ ಎಂದು ಮೃತನ ಕುಟುಂಬದವರು ದೂರಿದ್ದಾರೆ.