ಬೆಳ್ಳಂಬೆಳಗ್ಗೆ ಕಲಬುರಗಿ ಬಸ್‌ ನಿಲ್ದಾಣದಲ್ಲಿ ಕೊಲೆ

ಉಮೇಶ ಗೌರಿ (ಯರಡಾಲ)

ಕಲಬುರಗಿ (ನ.5): ದುಷ್ಕರ್ಮಿಗಳ ತಂಡವೊಂದು ಯುವಕನೊಬ್ಬನನ್ನು ಕೇಂದ್ರ ಬಸ್‌ ನಿಲ್ದಾಣದ ಆವರಣದಲ್ಲೇ ಮಚ್ಚು ಮತ್ತು ಲಾಂಗುಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.

ವಿದ್ಯಾನಗರ ನಿವಾಸಿ, ಸಿಇಎನ್‌ ಠಾಣೆಯ ಹೆಡ್‌ಕಾನ್‌ಸ್ಟೇಬಲ್‌ವೊಬ್ಬರ ಪುತ್ರ ಅಭಿಷೇಕ ನಂದೂರ್‌(26) ಕೊಲೆಯಾದ ಯುವಕ.

ಬಿಬಿಎಂ ವ್ಯಾಸಂಗ ಮಾಡಿದ್ದ ಅಭಿಷೇಕ ನಿರುದ್ಯೋಗಿಯಾಗಿದ್ದು ಕೆಲಸಕ್ಕಾಗಿ ಅಲೆಯುತ್ತಿದ್ದ. ರೌಡಿಶೀಟರ್‌ ಆಗಿದ್ದ ಆತನ ವಿರುದ್ಧ 3 ಪ್ರಕರಣಗಳಿದ್ದವು. ಹಣಕಾಸಿನ ವಿಷಯದಲ್ಲಿ ಕೆಲವರೊಂದಿಗೆ ಈತ ಜಗಳವಾಡಿ ವೈಷಮ್ಯ ಕಟ್ಟಿಕೊಂಡಿದ್ದ. ಆ ಹಿನ್ನೆಲೆಯಲ್ಲಿ ಈ ಕೊಲೆ ಆಗಿರಬಹುದು ಎಂದು ನಗರ ಪೊಲೀಸರು ಶಂಕಿಸಿದ್ದಾರೆ.

ಘಟನೆ ವಿವರ:

ಬೆಳಗ್ಗೆ ಮನೆಯಿಂದ ಜಿಮ್‌ಗೆಂದು ಹೊರಟಿದ್ದ ಅಭಿಷೇಕನನ್ನು ದಾರಿಯಲ್ಲಿ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳು ವಾಹನವೊಂದರಲ್ಲಿ ಬೆನ್ನಟ್ಟಿದ್ದಾರೆ. ಇದನ್ನು ಗಮನಿಸಿದ ಅಭಿಷೇಕ ತನ್ನ ಬೈಕ್‌ ಬಸ್‌ ನಿಲ್ದಾಣದ ಬಳಿ ನಿಲ್ಲಿಸಿ ತಪ್ಪಿಸಿಕೊಂಡು ಹೋಗಲು ಯತ್ನಿಸಿದ.

ಈ ವೇಳೆ ಸಹಾಯಕ್ಕಾಗಿ ಜನರ ಮಧ್ಯೆಯೂ ಓಡಿದ. ಆದರೆ ಬಸ್‌ ನಿಲ್ದಾಣದ ಒಳಗೆ ಓಡಿ ಬಂದ ದುಷ್ಕರ್ಮಿಗಳು ಆತನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಘಟನೆ ಬಸ್‌ಸ್ಟ್ಯಾಂಡಿನ ಸಿಸಿಟಿವಿಯಲ್ಲಿ(CCTV) ಸೆರೆಯಾಗಿದ್ದು ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

Share This Article
";