ಮುಂಬೈ ಕರ್ನಾಟಕ ಇನ್ನು ಕಿತ್ತೂರು ಕರ್ನಾಟಕ ಬಹುದಿನದ ಬೇಡಿಕೆ ಈಡೇರಿಸಿದ ಸಿಎಂ: ಬೊಮ್ಮಾಯಿ

ಉಮೇಶ ಗೌರಿ (ಯರಡಾಲ)

ಬೆಳಗಾವಿ(ನ.09): ಕೆಲ ದಿನಗಳ ಹಿಂದಷ್ಟೇ ಬೆಳಗಾವಿಯ ಕಿತ್ತೂರಿನಲ್ಲಿ ನಡೆದ ಕಿತ್ತೂರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು, ಹೈದರಾಬಾದ್‌-ಕರ್ನಾಟಕ ಭಾಗವನ್ನು ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಿದ ಮಾದರಿಯಲ್ಲಿಯೇ ಮುಂಬೈ-ಕರ್ನಾಟಕ ಭಾಗವನ್ನು ಕಿತ್ತೂರು ಕರ್ನಾಟಕ ಎಂದು ಮರುನಾಮಕರಣ ಮಾಡಲು ರಾಜ್ಯ ಸಚಿವ ಸಂಪುಟ ಸಂಪುಟದಲ್ಲಿ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.

ಮುಂಬೈ-ಕರ್ನಾಟಕ ಭಾಗವನ್ನು ಕಿತ್ತೂರು ಕರ್ನಾಟಕ ಎಂದು ಮರುನಾಮಕರಣ ಮಾಡಲು ರಾಜ್ಯ ಸಚಿವ ಸಂಪುಟ ಸಭೆ ಮಹತ್ವದ ನಿರ್ಧಾರ ಕೈಗೊಂಡಿದೆ.

ಈಗ ತನ್ನ ಮಾತಿನಂತೆ ಮುಂಬೈ ಕರ್ನಾಟಕ ಭಾಗಕ್ಕೆ ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಿದ್ದಾರೆ. ಈ ಮೂಲಕ ಮುಂಬೈ ಕರ್ನಾಟಕ ಭಾಗದ ಜನರ ಬಹು ದಶಕಗಳ ಬೇಡಿಕೆ ಈಡೇರಿದಂತಾಗಿದೆ.

ಸೋಮವಾರ ಸಂಪುಟ ಸಭೆಯ ಬಳಿಕ ಬೆಂಗಳೂರು ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ‘ಮುಂಬೈ ಕರ್ನಾಟಕ ಎಂದು ಕರೆಯುತ್ತಿದ್ದ ಬೆಳಗಾವಿ , ಧಾರವಾಡ, ವಿಜಯಪುರ, ಬಾಗಲಕೋಟೆ, ಗದಗ, ಉತ್ತರ ಕನ್ನಡ ಮತ್ತು ಹಾವೇರಿ ಜಿಲ್ಲೆಗಳ ಪ್ರದೇಶಗಳನ್ನು ಇನ್ನು ಮುಂದೆ ಕಿತ್ತೂರು ಕರ್ನಾಟಕ ಪ್ರದೇಶ ಎಂದು ನಾಮಕರಣ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ’ ಎಂದು ಹೇಳಿದರು.

ಹೈದರಾಬಾದ್‌-ಕರ್ನಾಟಕ ಪ್ರಾಂತ್ಯವನ್ನು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ ಬಳಿಕ ಮುಂಬೈ-ಕರ್ನಾಟಕ ಭಾಗವನ್ನು ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಬೇಕು ಎಂದು ಆ ಭಾಗದ ಜನರು ಒತ್ತಾಯಿಸಿದ್ದರು. ಆಗಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡುವ ಬಗ್ಗೆ ಆಶ್ವಾಸನೆ ನೀಡಿದ್ದರು. ಇತ್ತೀಚೆಗೆ ಕಿತ್ತೂರು ಉತ್ಸವದಲ್ಲಿ ಹಾಗೂ ಉಪಚುನಾವಣೆ ಪ್ರಚಾರದ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಮುಂಬೈ ಕರ್ನಾಟಕ ಪ್ರಾಂತ್ಯವನ್ನು ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡುವುದಾಗಿ ಭರವಸೆ ನೀಡಿದ್ದರು. ಅಂತೆಯೇ ಸಚಿವ ಸಂಪುಟದಲ್ಲಿ ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಲು ಒಪ್ಪಿಗೆ ನೀಡಿದೆ.

ಸಂಭ್ರಮಾಚರಣೆ:
ಇನ್ನು ಹೋರಾಟಗಾರರ ಬಹುಕಾಲದ ಬೇಡಿಕೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಈಡೇರಿಸಿದ್ದಾರೆ. ಈ ಹಿನ್ನೆಲೆ ಸಂಭ್ರಮಾಚರಣೆ ಎಲ್ಲಾ ಕಡೆಗಳಲ್ಲಿ ನಡೆಯುತ್ತಿದೆ. ಚನ್ನಮನ ಕಿತ್ತೂರಿನ ಚನ್ನಮನ ವೃತ್ತದಲ್ಲಿ ಹಾಗೂ ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಹಲವಾರು ಮುಖಂಡರು ವಿಜಯೋತ್ಸವ‌ ಆಚರಸಿದ್ದಾರೆ.
ಇತ್ತ ಕನ್ನಡ ‌ಪರ‌ ಸಂಘಟನೆಗಳು ರಾಣಿ ಚನ್ನಮ್ಮ ‌ಪ್ರತಿಮೆಗೆ ಮಾಲಾರ್ಪಣೆ ‌ಮಾಡಿ, ಪಟಾಕಿ ಸಿಡಿಸಿ, ಸಿಹಿ‌ ಹಂಚಿ ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ.

ರಾಜ್ಯದಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶವು ಕಲ್ಯಾಣ ಕರ್ನಾಟಕ ಎಂದು ಆಗಿದೆ. ಈಗ ಮುಂಬಯಿ ಕರ್ನಾಟಕ ಪ್ರದೇಶವು ಕಿತ್ತೂರು ಕರ್ನಾಟಕ ಆಗಿ ಬದಲಾವಣೆ ಆಗಿರೋದು ಎಲ್ಲರ ಸಂತಸಕ್ಕೆ ಕಾರಣವಾಗಿದೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";