ಸುದ್ದಿ ಸದ್ದು ನ್ಯೂಸ್
ಬೆಂಗಳೂರು (ಡಿಸೆಂಬರ್ 05): ವಾರ್ಷಿಕ ಆರೋಗ್ಯ ತಪಾಸಣೆ ಮಾಡಿಸುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ತಪ್ಪದೆ ವಾರ್ಷಿಕ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಎಂದು ಸಂಸದ ತೇಜಸ್ವಿ ಸೂರ್ಯ ಕರೆ ನೀಡಿದರು
ಇಂದು ನಗರದ ಬನಶಂಕರಿಯಲ್ಲಿ ಅಭಯ ಸಂಸ್ಥೆ ಹಾಗೂ ಯುನೈಟೆಡ್ ಆಸ್ಪತ್ರೆ ಜಂಟಿಯಾಗಿ ಆಯೋಜಿಸಲಾಗಿದ್ದ ಬೃಹತ್ ಉಚಿತ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನೈಬರ್‌ಹುಡ್ ವಾಚ್ ಕಮಿಟಿ, ಅಭಯ ಮತ್ತು ಯುನೈಟೆಡ್ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಿರುವುದು ಒಳ್ಳೆಯ ಕೆಲಸ. ನೈಬರ್‌ಹುಡ್ ವಾಚ್ ಕಮಿಟಿ ಕರೋನಾ ಸಂಧರ್ಭದಲ್ಲಿ ಅತ್ಯುತ್ತಮ ಕಾರ್ಯವನ್ನು ನಿರ್ವಹಿಸಿದೆ. ಪ್ರತಿಯೊಂದು ಕುಟುಂಬಕ್ಕೂ ಅಗತ್ಯತೆಗಳ ಬಗ್ಗೆ ಮಾಹಿತಿಯನ್ನು ಹೊಂದಿದೆ. ಆರೋಗ್ಯ ಶಿಬಿರಗಳಲ್ಲಿ ಪಾಲ್ಗೊಂಡು ಆರೋಗ್ಯ ತಪಾಸಣೆಯನ್ನು ನಿಯಮಿತವಾಗಿ ಮಾಡಿಸಿಕೊಳ್ಳುವುದರಿಂದ ನಾವುಗಳು ನಮ್ಮ ಅರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಅಲ್ಲದೆ, ದೊಡ್ಡ ಕಾಯಿಲೆಗಳನ್ನು ಪ್ರಾಥಮಿಕ ಹಂತದಲ್ಲಿಯೇ ತಿಳಿದುಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಜನರು ತಪ್ಪದೇ ವಾರ್ಷಿಕ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಕರೆ ನೀಡಿದರು.
ಯುನೈಟೆಡ್ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ ಶಾಂತಕುಮಾರ್ ಮುರುಡಾ ಮಾತನಾಡಿ, 35 ವರ್ಷ ವಯಸ್ಸಾದ ನಂತರ ನಮ್ಮ ದೈನಂದಿನ ಚಟುವಟಿಕೆಗಳ ಜೊತೆಯಲ್ಲೇ ನಮ್ಮ ದೇಹ ಹಾಗೂ ಆರೋಗ್ಯದಲ್ಲಿ ಅಮೂಲಾಗ್ರ ಬದಲಾವಣೆಗಳಾಗುತ್ತವೆ. ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುವ ಅಪಾಯವೂ ಇರುತ್ತದೆ. ಆದ್ದರಿಂದ ಪ್ರತಿವರ್ಷ ನಾವು ನಮ್ಮ ವಿಮೆಯನ್ನು ನವೀಕರಿಸುವಂತೆಯೇ ವಾರ್ಷಿಕ ಆರೋಗ್ಯ ತಪಾಸಣೆಯನ್ನು ಮಾಡಿಸುವ ಮೂಲಕ ಅನಾರೋಗ್ಯದ ವಿರುದ್ದ ವಿಮೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.
ಯುನೈಟೆಡ್ ಆಸ್ಪತ್ರೆಯ ವತಿಯಿಂದ ನಡೆಸಲಾದ ಈ ಆರೋಗ್ಯ ಶಿಬಿರದಲಿ ನಾವು ಹೃದಯದ ಸಮಸ್ಯೆಗಳ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಿ ತಪಾಸಣೆಯನ್ನು ನಡೆಸಲಾಯಿತು. ಶಿಬಿರದಲ್ಲಿ ನಮ್ಮ ಹೃದ್ರೋಗ, ಮೂಳೆ ಮತ್ತು ಕೀಲು, ಗ್ಯಾಸ್ಟ್ರೋ ಕೇರ್, ನ್ಯೂರೋಸೈನ್ಸ್, ಯುರಾಲಜಿ ಸೇರಿದಂತೆ ಹಲವು ವಿಭಾಗಗಳ ತಜ್ಞರು ಉಪಸ್ಥಿತರಿದ್ದರು. ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡಂತವರಿಗೆ ಮುಂದಿನ 100 ದಿನಗಳಲ್ಲಿ ಯಾವುದೇ ಹೆಚ್ಚಿನ ಚಿಕಿತ್ಸೆಗಾಗಿ ನಮ್ಮ ಮೆಂಬರ್‌ಶಿಪ್ ಕಾರ್ಡ್ ಮೂಲಕ ಹೊರರೋಗಿಗಳಾಗಿ ಶೇಕಡಾ 50 ರಷ್ಟು ಹಾಗೂ ಒಳರೋಗಿಗಳಿಗೆ ಶೇಕಡಾ 33 ರಷ್ಟು ರಿಯಾಯಿತಿಯನ್ನು ಪಡೆಯಬಹುದಾಗಿದೆ ಎಂದು ಇದೇ ಸಂಧರ್ಭದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿ ಅಶೋಕ್ ಹಾರ್ನಳ್ಳಿ, ನೈಬರ್‌ಹುಡ್ ವಾಚ್ ಕಮಿಟಿಯ ಅಧ್ಯಕ್ಷರಾದ ಎಸ್.ಎಂ.ಆರ್ ಪ್ರಸಾದ್, ಪ್ರಧಾನಕಾರ್ಯದರ್ಶಿ ರವಿಕುಮಾರ್, ಸದಸ್ಯರಾದ ಡಾ ರಶ್ಮಿ, ಅಭಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನಂದಾ ರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.