ವಿದ್ಯುತ್‌ ಬೆಲೆ ಏರಿಕೆಯಂತಹ ಬರೆ ಹಾಕುತ್ತಿರುವ ಬಿಜೆಪಿ ಸರಕಾರದ ವಿರುದ್ದ ಜನಾಂದೋಲನ ಅಗತ್ಯ: ಸಂಸದ ಡಿ.ಕೆ ಸುರೇಶ್‌

ಉಮೇಶ ಗೌರಿ (ಯರಡಾಲ)

ಜ್ಞಾನಭಾರತಿ ವಾರ್ಡ್‌ ನಲ್ಲಿ ಬೃಹತ್‌ ಆಟೋ ಸಮಾವೇಶಕ್ಕೆ ಚಾಲನೆ,ಬಿಜೆಪಿ ಸರಕಾರದ ಭ್ರಷ್ಟಾಚಾರ ಮತ್ತು ಬೆಲೆ ಏರಿಕೆ ವಿರುದ್ದ ಆಕ್ರೋಶ

ಸುದ್ದಿ ಸದ್ದು ನ್ಯೂಸ್ ಬೆಂಗಳೂರು: ಪದೇ ಪದೇ ವಿದ್ಯುತ್‌ ದರ ಏರಿಕೆ ಮತ್ತು ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಂತಹ ಶಾಕ್‌ ನೀಡುತ್ತಿರುವ ಭ್ರಷ್ಟ ಬಿಜೆಪಿ ಸರಕಾರದ ವಿರುದ್ದ ಜನಾಂದೋಲನದ ಅಗತ್ಯವಿದೆ. ಭ್ರಷ್ಟಾಚಾರದ ಕೂಪದಲ್ಲಿ ತುಂಬಿ ತುಳುಕುತ್ತಿರುವ ಬಿಜೆಪಿ ಸರಕಾರದ ಆಡಳಿತ ಅಂತ್ಯವಾಗುವ ಕಾಲ ಸನ್ನಿಹಿತವಾಗಿದೆ ಎಂದು ಸಂಸದ ಡಿ.ಕೆ ಸುರೇಶ್‌ ಆಕ್ರೋಶವ್ಯಕ್ತಪಡಿಸಿದರು

ಇಂದು ರಾಜರಾಜೇಶ್ವರಿ ನಗರದಲ್ಲಿ ಜ್ಞಾನಭಾರತಿ ವಾರ್ಡ್‌ 48 ರ ಕಾಂಗ್ರೆಸ್‌ ಅಭ್ಯರ್ಥಿ ಆಕಾಂಕ್ಷಿ ಕಾವ್ಯ ರಘುಗೌಡ ಅವರು ಆಯೋಜಿಸಿದ್ದ ಆಟೋ ಸಮಾವೇಶಕ್ಕೆ ಚಾಲನೆ ನೀಡಿ, ಆಟೋ ಚಾಲಕರುಗಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದರು. ಆಟೋ ಚಾಲಕರು ಕಷ್ಟ ಜೀವಿಗಳು. ತಮ್ಮದೇ ಆದ ಶೈಲಿಯಲ್ಲಿ ಹಗಲಿರುಳು ಸಮಾಜ ಸೇವೆ ಯಲ್ಲಿ ನಿರತರಾಗಿರುವ ವರ್ಗ. ದೇಶದ ಅಭಿವೃದ್ದಿಗೂ ಕೊಡುಗೆಯನ್ನು ನೀಡುತ್ತಿರುವ ಕಾರ್ಮಿಕ ವರ್ಗದ ಪ್ರಮುಖರು ಎಂದರೆ ತಪ್ಪಾಗಲಾರದು. ಭಾರತೀಯ ಜನತಾ ಪಕ್ಷ ಕಳೆದ ಹಲವಾರು ವರ್ಷಗಳ ದುರಾಡಳಿತದಲ್ಲಿ ದಿನದ ದುಡಿಮೆಯನ್ನೇ ನಂಬಿ ಬದುಕುತ್ತಿರುವ ಲಕ್ಷಾಂತರ ಜನರ ಜೀವನ ನಡೆಸುವುದನ್ನೇ ದುಸ್ತರವಾಗಿಸಿದೆ. ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ, ಪೆಟ್ರೋಲಿಯಂ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಸಾಮಾನ್ಯ ಜನರ ಉಳಿತಾಯವನ್ನ ಜಿಎಸ್‌ಟಿ ರೂಪದಲ್ಲಿ ತನ್ನ ಜೋಬಿಗೆ ತುಂಬಿಕೊಳ್ಳುತ್ತಿದೆ. ಶೇಕಡಾ 40 ರಷ್ಟು ಲಂಚವನ್ನು ತಗೆದುಕೊಳ್ಳುತ್ತಿರುವ ಬಿಜೆಪಿ ಸರಕಾರ ವಿದ್ಯುತ್‌ ಬೆಲೆಯನ್ನು ಏರಿಸುವ ಮೂಲಕ ಇನ್ನಷ್ಟು ಹೊರೆಯನ್ನು ಜನಸಾಮಾನ್ಯರ ಮೇಲೆ ಹಾಕಿದೆ. ವಿದ್ಯುತ್‌, ಜೀವನಾವಶ್ಯಕ ವಸ್ತುಗಳ ಬೆಲೆಯನ್ನು ಹೆಚ್ಚಿಸುತ್ತಿರುವ ಸರಕಾರ ಆಟೋ ಮೀಟರ್ ದರವನ್ನು ಜಾಸ್ತಿ ಮಾಡಲು ಚಿಂತಿಸುತ್ತಲೇ ಇಲ್ಲ. ಭ್ರಷ್ಟಾಚರದ ದುರಡಾಳೀತದಿಂದ ಜನರು ಬೇಸತ್ತು ಹೋಗಿದ್ದು, ಬಿಜೆಪಿ ಸರಕಾರದ ವಿರುದ್ದ ಜನಾಂದೋಲನದ ಅಗತ್ಯತೆ ಹೆಚ್ಚಾಗಿದೆ ಎಂದು ಹೇಳಿದರು. 

ಸಮಾಜವನ್ನು ಶುದ್ದಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಪೌರ ಕಾರ್ಮಿಕರ ಕೆಲಸವನ್ನು ಔಟ್‌ ಸೋರ್ಸಿಂಗ್‌ ಮೂಲಕ ಕಿತ್ತು ಹಾಕಲು ಬಿಜೆಪಿ ಸರಕಾರ ಮುಂದಾಗಿದೆ. ರಾಷ್ಟ್ರ ಹಾಗೂ ರಾಜ್ಯದ ಮಟ್ಟದಲ್ಲಿ ಹಲವಾರು ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದ್ದಾಗ ಬಡವರ ಮತ್ತು ಹಿಂದುಳಿದ ವರ್ಗಗಳ ಎಲ್ಲಾ ಜನರ ಅಭ್ಯದಯಕ್ಕಾಗಿ ಸಾಕಷ್ಟು ಕೆಲಸಗಳನ್ನು ಮಾಡಿದೆ. ಮುಂದಿನ ದಿನಗಳಲ್ಲಿ ಭ್ರಷ್ಟಾಚಾರದ ಕೂಪದಲ್ಲಿ ಜನರನ್ನು ಶೋಷಿಸುತ್ತಿರುವ ಸರಕಾರಕ್ಕೆ ಜನರೇ ಬುದ್ದಿ ಕಲಿಸಬೇಕು ಎಂದು ಕರೆ ನೀಡಿದರು. 

ಕಾಂಗ್ರೆಸ್‌ ಮುಖಂಡರಾದ ಶ್ರೀ ಕಾವ್ಯ ರಘು ಗೌಡ ಮಾತನಾಡಿ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಜ್ಞಾನಭಾರತಿ ಬಡಾವಣೆ ವಾರ್ಡ್‌ ಇಂದಿಗೂ ಹಲವಾರು ಸಮಸ್ಯೆಗಳಿಂದ ತುಂಬಿ ತುಳುಕುತ್ತಿದೆ. ಸರಿಯಾದ ರಸ್ತೆಗಳಿಲ್ಲದೆ ದುಡಿಯುವ ವರ್ಗದ ಪ್ರಮುಖ ಕೊಂಡಿಯಾಗಿರುವ ಆಟೋ ಚಾಲಕರು ತೊಂದರೆ ಅನುಭವಿಸುತ್ತಿದ್ದಾರೆ. ಹಲವಾರು ತಿಂಗಳುಗಳಿಂದ ಈ ವಾರ್ಡ್‌ನಲ್ಲಿ ಮನೆ ಮನೆಗೆ ಭೇಟಿ ನೀಡುತ್ತಿದ್ದು, ಸಮಸ್ಯೆಗಳನ್ನು ತಿಳಿದುಕೊಂಡು ಅವುಗಳನ್ನು ನಿವಾರಿಸುವ ಮೊದಲ ಹಂತದ ಪ್ರಯತ್ನವಾಗಿ ಆಟೋ ಸಮಾವೇಶವನ್ನು ಆಯೋಜಿಸಿದ್ದೇವೆ. ಮುಂದಿನ ದಿನಗಳಲ್ಲೂ ವಾರ್ಡ್‌ ಮಟ್ಟದಲ್ಲಿ ಸ್ಥಳೀಯ ಹಿರಿಯ ನಾಯಕರೊಂದಿಗೆ ಜೊತೆಗೂಡಿ ಸಮಸ್ಯೆಗಳ ವಿರುದ್ದ ಸರಕಾರದ ಗಮನ ಸೆಳೆಯುವ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದರು. 

ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ನಾಯಕರಾದ ಹನುಮಂತರಾಯಪ್ಪ, ಕಾಂಗ್ರೆಸ್‌ ಯುವನಾಯಕಿ ಕುಸುಮ ಹನುಮಂತರಾಯಪ್ಪ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರು ಹಾಗೂ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಎಂ. ರಾಜ್‌ಕುಮಾರ್‌, ರಾಜರಾಜೇಶ್ವರಿ ನಗರ ಪ್ರಚಾರ ಸಮಿತಿ ಸಂಚಾಲಕರಾದ ತಿಬ್ಬೇಗೌಡ, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‌ ಮುಖಂಡರಾದ ಕೆ.ಎನ್‌ ರಘುಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪೌರ ಕಾರ್ಮಿಕರಿಗೆ ಸಮವಸ್ತ್ರ ವಿತರಿಸುತ್ತಿರುವ ಸಂಸದ ಡಿ ಕೆ ಸುರೇಶ್

ಕಾರ್ಯಕ್ರಮದಲ್ಲಿ 750 ಕ್ಕೂ ಹೆಚ್ಚು ಆಟೋ ಚಾಲಕರುಗಳಿಗೆ ಸಮವಸ್ತ್ರ ಹಾಗೂ ಪೌರಕಾರ್ಮಿಕರುಗಳಿಗೆ ಸೀರೆಯನ್ನು ವಿತರಿಸಲಾಯಿತು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";