ಮದುವೆಯಲ್ಲಿ ವಿಷಾಹಾರ ಊಟ ಮಾಡಿದ 100ಕ್ಕೂ ಹೆಚ್ಚು ಜನ ಅಸ್ವಸ್ಥ ! ಊರಲ್ಲಿ ಬೀಡುಬಿಟ್ಟ ವೈದ್ಯಾಧಿಕಾರಿಗಳು

ಬೆಳಗಾವಿ(ಆ.30):  ಮದುವೆ ಸಮಾರಂಭದಲ್ಲಿ ವಿಷಾಹಾರ ಊಟ ಸೇವಿಸಿ ಸುಮಾರು ನೂರಾರು ಜನರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೂಡಿ ಗ್ರಾಮದಲ್ಲಿ ನಡೆದಿದೆ. ಅಸ್ವಸ್ಥಗೊಂಡಿರುವವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಸ್ಪಿ ಡಾ.ಸಂಜಿವ ಪಾಟೀಲ ಹೇಳಿದ್ದಾರೆ.

ಸೋಮವಾರ ಹಿರೇಕೋಡಿಯ ಪಟೇಲ ಕುಟುಂಬದವರ ಮನೆಯಲ್ಲಿ ಮದುವೆ ನಡೆದಿದೆ. ಅಲ್ಲಿ ಊಟ ಸೇವಿಸಿದ ನೂರಾರು ಜನ ವಾಂತಿಭೇದಿಯಿಂದ ತತ್ತರಿಸಿ ಮಂಗಳವಾರ ಅಸ್ವಸ್ಥಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಕೆಲವರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಮದುವೆ ಸಮಾರಂಭಕ್ಕೆ ಮಹಾರಾಷ್ಟ್ರದ ಮಿರಜ್‌ನಿಂದಲೂ ಸಂಬಂಧಿಕರು ಆಗಮಿಸಿದ್ದರು ಎನ್ನಲಾಗಿದೆ. ಮದುವೆ ಸಮಾರಂಭದಲ್ಲಿ ಊಟ ಮಾಡಿ ಮನೆಗೆ ವಾಪಸ… ಆಗುತ್ತಿದ್ದಂತೆ ಕೆಲ ಜನರಿಗೆ ವಾಂತಿ-ಭೇದಿಯಾಗಿದೆ. ತಡರಾತ್ರಿ ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದಿದ್ದು ಅನೇಕರು ರಾತ್ರಿಯೇ ತಮ್ಮ ಗ್ರಾಮದ ಸುತ್ತಮುತ್ತಲಿನ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಹಿರೇಕೋಡಿ ಗ್ರಾಮಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ದೌಡಾಯಿಸಿದ್ದು ಸರ್ಕಾರಿ ಶಾಲೆಯಲ್ಲಿ ಬೀಡುಬಿಟ್ಟು ತಪಾಸಣೆ ನಡೆಸುತ್ತಿದ್ದಾರೆ.

ಆಸ್ಪತ್ರೆ ಬೆಡ್‌ಗಳೆಲ್ಲ ಫುಲ್‌:

ಹಿರೇಕೋಡಿಯಲ್ಲಿ ಮದುವೆ ಸಮಾರಂಭದಲ್ಲಿ ಊಟ ಮಾಡಿ ಅಸ್ವಸ್ಥಗೊಂಡಿರುವವರನ್ನು ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯ ಬೆಡ್‌ಗಳೆಲ್ಲವೂ ಫುಲ್‌ ಆಗಿದ್ದವು. ಒಂದೊಂದು ಬೆಡ್‌ ಮೇಲೆ ಇಬ್ಬರು ರೋಗಿಗಳನ್ನು ಮಲಗಿಸಿ ಚಿಕಿತ್ಸೆ ನೀಡಲಾಗಿದೆ. ಕೆಲವರನ್ನು ನೆಲದ ಮೇಲೆ ಬೆಡ್‌ಶೀಚ್‌ ಹಾಯಿಸಿ ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆ ನೀಡಿದ್ದಾರೆ. ಚಿಕ್ಕೋಡಿ ತಹಸೀಲ್ರ್ದಾ ಚಿದಂಬರ ಕುಲಕರ್ಣಿ ಮಾತನಾಡಿ, ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ಸ್ಥಳೀಯರು ಹೇಳಿದ ಪ್ರಕಾರ 800 ಜನರು ಸಮಾರಂಭದಲ್ಲಿ ಭಾಗಿಯಾಗಿದ್ದರು

ಸೋಮವಾರ ಸಂಜೆಯಿಂದ ವಾಂತಿ ಬೇಧಿ ಶುರುವಾಗಿದೆ. ಹೀಗಾಗಿ ನಮ್ಮ ವೈದ್ಯಕೀಯ ತಂಡ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸುತ್ತಿದೆ. ಈಗಾಗಲೇ ಸರ್ಕಾರಿ ಆಸ್ಪತ್ರೆಯಲ್ಲಿ ಐವತ್ತು ಜನ ಚಿಕಿತ್ಸೆ ಪಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿಯೂ 50 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಯ ಸಿಬ್ಬಂದಿಯೂ ಸಹ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಸುಕುರ್ಮಾ ಭಾಗಾಯಿ ಮಾತನಾಡಿ, ಐವರು ವೈದ್ಯರು, 15 ವೈದ್ಯಕೀಯ ಸಿಬ್ಬಂದಿ ನಿಯೋಜನೆ ಮಾಡಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಮದುವೆಯಲ್ಲಿ ಊಟ ಮಾಡಿದ ಬಳಿಕ ಸಂಜೆ ವಾಂತಿಬೇಧಿ ಕಾಣಿಸಿಕೊಂಡಿದೆ. ಮದುವೆ ಸಮಾರಂಭದಲ್ಲಿ ನೀಡಿದ ಆಹಾರದ ಸ್ಯಾಂಪಲ್‌ ಪಡೆದು ಪರೀಕ್ಷೆ ಮಾಡುತ್ತೇವೆ. ಯಾವುದೇ ರೋಗಿಗಳಿಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ. ಖಾಸಗಿ ಆಸ್ಪತ್ರೆಗಳಲ್ಲಿ ಯಾರಾದರೂ ದಾಖಲಾಗಿದ್ದಾರೆಯೇ ಎಂಬುವುದನ್ನು ಪರಿಶೀಲಿಸುತ್ತಿದ್ದೇವೆ. ಊರಲ್ಲಿ ವೈದ್ಯಕೀಯ ಕ್ಯಾಂಪ್‌ ಮಾಡಿ ಆರೋಗ್ಯ ತಪಾಸಣೆ ಮಾಡುತ್ತಿದ್ದೇವೆ. ಹೆಚ್ಚಿನ ಸಮಸ್ಯೆ ಇದ್ದವರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

 

 

 

……………………………………………………………………………………………………………….

ಕೃಪೆ:ಕೆಪಿ

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";