ಬೈಲಹೊಂಗಲ- ಸರಕಾರಿ ಶಾಲೆ ಕಾಲೇಜುಗಳನ್ನು ಸಬಲೀಕರಣಗೊಳಿಸಿ ಮಕ್ಕಳಿಗೆ ಶೈಕ್ಷಣಿಕವಾಗಿ ಉತ್ತಮ ಭವಿಷ್ಯ ಕೊಡುವ ಉದ್ದೇಶದಿಂದ ಸರಕಾರ ಗುಣಮಟ್ಟದ ಶಿಕ್ಷಣದ ಜತೆಗೆ ಸಾಕಷ್ಟು ಯೋಜನೆಗಳನ್ನು ನೀಡುತ್ತಿದೆ. ಆದ್ದರಿಂದ ಪಾಲಕರು ಖಾಸಗಿ ಕಾಲೇಜುಗಳಲ್ಲಿ ದುಬಾರಿ ಶುಲ್ಕ ತೆತ್ತು ಶಿಕ್ಷಣ ಕೊಡಿಸಿ ಆರ್ಥಿಕ ಹೊರೆ ಅನುಭವಿಸುದರ ಬದಲು ಸರಕಾರಿ ಕಾಲೇಜುಗಳಿಗೆ ತಮ್ಮ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಬೇಕು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದ ವಿದ್ಯಾನಗರದಲ್ಲಿರುವ ಸರಕಾರಿ ಪಿಯು ಕಾಲೇಜಿನಲ್ಲಿ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ ಅವರು ದೊಡವಾಡ ಗ್ರಾಮದ ಪಿಯು ಕಾಲೇಜಿನಲ್ಲಿ ಹೈಟೆಕ್ ಗ್ರಂಥಾಲಯ ಸ್ಥಾಪನೆಗೆ 50 ಲಕ್ಷ. ರೂ ಅನುದಾನ ತರಲು ಶೀಘ್ರ ಪ್ರಯತ್ನಿಸುತ್ತೇನೆ. ಹೆಚ್ಚು ವಿದ್ಯಾರ್ಥಿಗಳು ದಾಖಲಾದರೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಾಪಿಸಲು ಸರಕಾರಕ್ಕೆ ಮನವಿ ಸಲ್ಲಿಸುತ್ತೇನೆ ಎಂದು ಭರವಸೆ ನೀಡಿದರು.
ಬೆಳಗಾವಿ ಜಿಲ್ಲಾ ಪಿಯು ಇಲಾಖೆ ಉಪನಿರ್ದೇಶಕ ನಾಗರಾಜ ವಿ. ಅಶೋಕ ಪರಂಡಿ ಮಾತನಾಡಿದರು.ತಾಪಂ ಇಓ ಸುಭಾಷ ಸಂಪಗಾವಿ, ಗ್ರಾಪಂ ಅಧ್ಯಕ್ಷೆ ಮೈರೂನಬಿ ಸನದಿ, ಉಪಾಧ್ಯಕ್ಷ ಉಳವಪ್ಪ ಬಶೆಟ್ಟಿ, ಪಿಡಿಓ ಎಚ್.ವಿಶ್ವನಾಥ, ಸಂಗಯ್ಯ ದಾಭಿಮಠ, ಪ್ರಾಚಾರ್ಯೆ ಎಲ್.ಬಿ.ಹೊಸಮನಿ, ಹನಮಂತ ಕಡಸಗಟ್ಟಿ ಉಪಸ್ಥಿತರಿದ್ದರು.
ಕಾಲೇಜು ಉಪನ್ಯಾಸಕರು, ಗ್ರಾಪಂ ಸದಸ್ಯರು, ಶಾಲೆಗಳ ಮುಖ್ಯ ಶಿಕ್ಷಕರು, ಗ್ರಾಮದ ಪ್ರಮುಖರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಉಪನ್ಯಾಸಕ ವಿಕಾಸ ಉಂಡಾಳೆ ನಿರೂಪಿಸಿದರು. ಸರೋಜಾ ರಾಟೋಡ್ ವಂದಿಸಿದರು.