ಸುದ್ದಿ ಸದ್ದು ನ್ಯೂಸ್
ಧಾರವಾಡ : ರಾಜ್ಯದಲ್ಲಿ ಇರುವ 205 ದೇವಸ್ಥಾನಗಳನ್ನು ಮಹತ್ವಾಕಾಂಕ್ಷಿ “ದೈವ ಸಂಕಲ್ಪ ಯೋಜನೆ” ಅಡಿಯಲ್ಲಿ ಅಭಿವೃದ್ಧಿ ಮಾಡಲಾಗುವುದು ಎಂದು ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ, ಎ ಗ್ರೇಡನಲ್ಲಿ 25, ಬಿ ಗ್ರೇಡನಲ್ಲಿ 139 ದೇವಸ್ಥಾನಗಳ ಅಭಿವೃದ್ಧಿ ಮಾಡಲಾಗುತ್ತಿದೆ. ದೇವಸ್ಥಾನಗಳಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ಕೆಲಸ ಮಾಡಲಾಗುವುದು ಎಂದರು.
ಪ್ರಸ್ತುತ ಸುಮಾರು 1140 ಕೋಟಿ ವೆಚ್ಚದಲ್ಲಿ 25 ದೇವಸ್ಥಾನಗಳ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ ಮಾಡಲಾಗುತ್ತಿದೆ. ಆದಷ್ಟು ಬೇಗ ಕಾಮಗಾರಿ ಕೈಗೆತ್ತಿಕೊಂಡು ಟೆಂಪಲ್ ಟೂರಿಸಂ ಎಂಬ ವ್ಯವಸ್ಥೆ ಮಾಡಲಾಗುವುದು. ದೈವ ಸಂಕಲ್ಪ ಕೆಲವೇ ದಿನಗಳಲ್ಲಿ ಕಾರ್ಯ ರೂಪಕ್ಕೆ ಬರಲಿದೆ ಎಂದರು.
ದೇವಸ್ಥಾನ ಮತ್ತು ವಕ್ಫ ಆಸ್ತಿಗಳನ್ನು ಡ್ರೋಣ್ ಮೂಲಕ ಸರ್ವೇ ಮಾಡಲಾಗುತ್ತದೆ. ಈಗಾಗಲೇ ಇದನ್ನು ಕಂದಾಯ ಸಚಿವ ಆರ್.ಅಶೋಕ ಅವರ ಗಮನಕ್ಕೆ ತರಲಾಗಿದೆ. ಯಾವುದೇ ದೇವಸ್ಥಾನಗಳ ಜಾಗವನ್ನು ಒತ್ತುವರಿ ಮಾಡದಂತೆ ನೋಡಿಕೊಳ್ಳಲಾಗುವುದು ಎಂದು ಈ ವೇಳೆ ಮಾತನಾಡಿದರು.