ಪಿಎಸ್ಐ ನೇಮಕಾತಿ ಅಕ್ರಮ ಆರೋಪದ ತನಿಖೆಗೆ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚನೆ: ಸಚಿವ ಆರಗ ಜ್ಞಾನೇಂದ್ರ

ಕಲಬುರಗಿ ಫೆ.19: ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಪಿಎಸ್ಐ ನೇಮಕಾತಿಯಲ್ಲಿ ಅನ್ಯಾಯವಾಗಿದೆ ಎಂದು ಇಲ್ಲಿನ ಜನಪ್ರತಿನಿಧಗಳ ಒತ್ತಾಯದ ಮೇರೆಗೆ ಪ್ರಸ್ತುತ ನೇಮಕಾತಿಗೆ ತಡೆ ನೀಡಲಾಗಿದ್ದು,ಈ ಕುರಿತು ತನಿಖೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಕಲಬುರಗಿಯ ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದ ಅತಿಥಿ ಗೃಹದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ತೊಂದರೆಯಾಗದಂತೆ 371(ಜೆ ) ವಿಶೇಷ ಸ್ಥಾನಮಾನದ ಕಾಯ್ದೆ ಮತ್ತು ಆದೇಶಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಲು ಸಮಿತಿಗೆ ನಿರ್ದೇಶನ ನೀಡಲಾಗಿದೆ. ಸದರಿ ಸಮಿತಿಯಲ್ಲಿ ಗೃಹ ಸಚಿವಾಲಯದ ಕಾರ್ಯದರ್ಶಿಗಳು, ಡಿಪಿಎಆರ್ ಕಾರ್ಯದರ್ಶಿ ಹಾಗೂ ಡಿಜಿಪಿ ಅವರು ಸಹ ಇರಲಿದ್ದಾರೆ ಎಂದರು.

ರಾಜ್ಯದ ಪೊಲೀಸ್ ಠಾಣೆಗಳಲ್ಲಿ ಸ್ವಚ್ಛತೆ ಮತ್ತು ಶೌಚಾಲಯ ನಿರ್ವಹಣೆಗೆ ಗುತ್ತಿಗೆ ಅಧಾರದ ಮೇಲೆ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ ಎಂದು ಸಚಿವ ಆರಗ ಜ್ಞಾನೇಂದ್ರ ಇದೇ ಸಂದರ್ಭದಲ್ಲಿ ತಿಳಿಸಿದರು.

ಹಿಜಾಬ್ ಪ್ರಕರಣ ಕುರಿತಂತೆ ಪತ್ರಕರ್ತರ ಪ್ರಶ್ನೆಗ ಉತ್ತರಿಸಿದ ಸಚಿವರು, ಈ ಕುರಿತು ರಾಜ್ಯದ ಉಚ್ಛ ನ್ಯಾಯಾಲಯವು ನೀಡಿರುವ ಮಧ್ಯಂತರ ಆದೇಶವನ್ನು ಪಾಲನೆ ಮಾಡಲಾಗುತ್ತಿದೆ. ಮಕ್ಕಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಯಾರು ಮಾಡಬಾರದು. ಕೋರ್ಟ್ ಆದೇಶ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವರು ಎಚ್ಚರಿಕೆಯ ಸಂದೇಶ ನೀಡಿದರು. ಈ ಪ್ರಕರಣದಲ್ಲಿ ಬೆರಳಣಿಕೆ ಕಡೆ ಅನಗತ್ಯ ಗೊಂದಲ ಮೂಡಿಸಲಾಗುತ್ತಿದೆ. ಕೆಲವು ದುಷ್ಟಶಕ್ತಿಗಳು, ಸಂಘಟನೆಗಳು ಈ ವಿಷಯದಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ಸರ್ಕಾರವು ಸೂಕ್ಷ್ಮವಾಗಿ ಗಮನಿಸಿದೆ. ಇಂತವರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಶಿವಮೊಗ್ಗ, ಉಡುಪಿಯಲ್ಲಿ ಇದೇ ವಿಷಯದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಎಂಎಲ್‌ಸಿ ಸುಶೀಲ್ ಜಿ. ನಮೋಶಿ ಇದ್ದರು.

ಅಕ್ರಮದ ಆರೋಪ: 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಸ್ಥಗಿತ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ 545 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿಯಲ್ಲಿ ಭಾರಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ.

ಈ ಸಂಬಂಧ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಅಮ್ರಿತ್ ಪಾಲ್ ಅವರು ರಾಜ್ಯದ ಹಿರಿಯ ಅಧಿಕಾರಿಗಳಿಗೆ ತುರ್ತು ಸಂದೇಶ ಕಳುಹಿಸಿದ್ದಾರೆ. 545 ಪಿಎಸ್‌ಐ ಹುದ್ದೆಗಳ ನೇಮಕಕ್ಕೆ ಸರ್ಕಾರ ಕಳೆದ ವರ್ಷ ಆದೇಶ ಹೊರಡಿಸಿತ್ತು. ಆದರೆ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ 371 (ಜೆ) ಮೀಸಲಾತಿಯಲ್ಲಿ ಅನ್ಯಾಯ ಮತ್ತು ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಕೆಲ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದರು.

ಸಿವಿಲ್ ಪಿಎಸ್‌ಐ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಂಡು ಅರ್ಹ ಅಭ್ಯರ್ಥಿಗಳ ಘಟಕವಾರು ತಾತ್ಕಾಲಿಕ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಹುದ್ದೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ಹಾಗೂ ದಾಖಲೆಗಳ ಪರಿಶೀಲನಾ ಕಾರ್ಯ ಕೈಗೊಳ್ಳುವಂತೆ ಜನವರಿ 21ರಂದು ಬರೆದಿದ್ದ ಪತ್ರದಲ್ಲಿ ಸೂಚಿಸಲಾಗಿತ್ತು. ಇದೀಗ ಆಡಳಿತಾತ್ಮಕ ಕಾರಣದಿಂದ ನೇಮಕಾತಿ ಪ್ರಕ್ರಿಯೆಯನ್ನು ಮುಂದಿನ ಆದೇಶದವರಗೆ ಸ್ಥಗತಗೊಳಿಸಬೇಕು ಎಂದು ತಿಳಿಸಲಾಗಿದೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";