ಬೈಲಹೊಂಗಲ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಪ್ರತಿಯೊಬ್ಬ ಭಾರತೀಯನ ಎದೆಯಲ್ಲಿ ದೇಶಪ್ರೇಮವನ್ನು ಇನ್ನಷ್ಟು ಹೆಚ್ಚಿಸಲಿ ಎಂದು ಹುಬ್ಬಳ್ಳಿ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಮಹಾಮಂಡಳಿಯ ಮಾಜಿ ಅಧ್ಯಕ್ಷರು ಹಾಲಿ ನಿರ್ದೇಶಕರಾದ ಮಹಾಂತೇಶ ವೀರಪ್ಪ ಮತ್ತಿಕೊಪ್ಪ (ಹೊಸೂರ) ಹೇಳಿದರು. ಅವರು ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಆಗಷ್ಟ್ 13 ರಿಂದ 15 ರವರೆಗೆ ದೇಶದ ಮನೆ ಮನೆಗಳ ಮೇಲೆ ಹೆಮ್ಮೆಯ ತಿರಂಗಾ ಹಾರಾಡಲಿ ಎಂದರು. ದೇಶದಲ್ಲಿಯೇ ಹೆಸರುವಾಸಿಯಾದ ಬೆಂಗೇರಿಯ ಖಾದಿ ರಾಷ್ಟ್ರಧ್ವಜಗಳನ್ನು ವಿತರಿಸಿದರು.
ಕೇಂದ್ರ ಬಸವ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರೂ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಮಾತನಾಡಿ 1957 ರ ನವೆಂಬರ್ 1 ರಂದು ಬೆಂಗೇರಿಯಲ್ಲಿ ಸಂಘ ಸ್ಥಾಪನೆಯಾಯಿತು. ಸ್ವಾತಂತ್ರ್ಯ ಹೋರಾಟಗಾರರಾದ ವೆಂಕಟೇಶ. ಟಿ. ಮಾಗಡಿ ಸಂಘದ ಮೊದಲ ಅಧ್ಯಕ್ಷರಾಗಿ, ಶ್ರೀರಂಗ ಕಾಮತ್ ಮೊದಲ ಉಪಾಧ್ಯಕ್ಷರಾಗಿ, ಹೊಸೂರಿನ ದೇಮಪ್ಪ ಮತ್ತಿಕೊಪ್ಪ ಸಂಸ್ಥಾಪಕ ಕಾರ್ಯದರ್ಶಿಗಳಾಗಿ ಅಂಕೋಲಾದ ಎಚ್.ಎ. ಪೈ, ಬಿಜಾಪುರದ ಪಿ.ಎಚ್. ಅನಂತ ಭಟ್, ಬೆಳಗಾವಿಯ ಜಯದೇವರಾವ್ ಕುಲಕರ್ಣಿ, ಧಾರವಾಡದ ಬಿ.ಜೆ. ಗೋಖಲೆ, ಚಿತ್ರದುರ್ಗದ ವಾಸುದೇವ ರಾವ್ ಹಾಗೂ ರಾಯಚೂರಿನ ಬಿ.ಎಚ್. ಇನಾಂದಾರ್ ಸದಸ್ಯರಾಗಿ ಬೆಂಗೇರಿಯ ಸಂಘವನ್ನು ಬೆಳೆಸಿದವರು ಎಂದು ಸ್ಮರಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಹೊಂಗಲ ತಾಲೂಕಾಧ್ಯಕ್ಷ ಎನ್.ಆರ್.ಠಕ್ಕಾಯಿ ಬೆಂಗೇರಿ ಸಂಘದಲ್ಲಿ ಮೊದಲು ವಿವಿಧ ಖಾದಿ ಉತ್ಪನ್ನಗಳನ್ನು ಮಾತ್ರ ಉತ್ಪಾದಿಸಲಾಗುತ್ತಿತ್ತು. 2004 ರಲ್ಲಿ ಬಿ.ಎಸ್. ಪಾಟೀಲ ಅವರು ಅಧ್ಯಕ್ಷರಾಗಿದ್ದಾಗ ರಾಷ್ಟ್ರಧ್ವಜ ತಯಾರಿಸುವ ಯೋಚನೆ ಮಾಡಿ ಬಿಐಎಸ್‌ನಿಂದ 2006 ರಲ್ಲಿ ಅನುಮತಿ ಪಡೆದುಕೊಂಡು ಅಂದಿನಿಂದ ಇಲ್ಲಿಯವರೆಗೆ ಧ್ವಜಗಳನ್ನು ತಯಾರಿಸಿ ದೇಶದಾದ್ಯಂತ ತಲುಪಿಸುತ್ತುರುವ ಬೆಂಗೇರಿ ಸಂಘದ ಕಾರ್ಯ ಶ್ಲಾಘನೀಯವಾದದ್ದು ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕನ್ನಡ ಜಾನಪದ ಪರಿಷತ್ತಿನ ಬೈಲಹೊಂಗಲ ತಾಲ್ಲೂಕು ಘಟಕದ ಅಧ್ಯಕ್ಷರಾದ ಚಂದ್ರಶೇಖರ ರುದ್ರಪ್ಪ ಕೊಪ್ಪದ ಮಾತನಾಡಿ ಬ್ಲೀಚಿಂಗ್, ಡೈಯಿಂಗ್, ಪ್ರಿಂಟಿಂಗ್, ಕಟ್ಟಿಂಗ್, ಸ್ಟಿಚ್ಚಿಂಗ್, ಐರನಿಂಗ್ ಮುಂತಾದ ಧ್ವಜ ತಯಾರಿಕೆಯ ಎಲ್ಲ ಹಂತಗಳೂ ಒಂದೇ ಕಡೆ ನಡೆಯುವ ಏಕೈಕ ಸಂಸ್ಥೆಯಾಗಿದ್ದು ವಿವಿಧ 9 ಅಳತೆಯ ರಾಷ್ಟ್ರಧ್ವಜಗಳು ಸಿದ್ಧವಾಗುವುದು ನಮ್ಮೆಲ್ಲರ ಹೆಮ್ಮೆ ಎಂದು ಹೇಳಿದರು.
ಶ್ರೀ ಮಹಾಲಕ್ಷ್ಮೀ ಪಟ್ಟಣ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಅನ್ವರಹುಸೇನ ಖಾದಿರಸಾಹೇಬ ಪಾಟೀಲ ಮಾತನಾಡಿ ಬೆಂಗೇರಿಯ ಖಾದಿ ಮಹಾಂಡಳಿಯ ಅಭಿವೃದ್ದಿಯಲ್ಲಿ ವೆಂಕಟೇಶ ಮಾಗಡಿ ಹಾಗೂ ಹೊಸೂರಿನ ದೇಮಪ್ಪ ಮತ್ತಿಕೊಪ್ಪ ಅವರ ಸೇವೆ ಅಪಾರವಾದದ್ದು ಎಂದು ಹೇಳಿದರು. ಶರಣ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾದ ಸಂಗಮೇಶ ಯಲ್ಲಪ್ಪ ಹುಲಗಣ್ಣವರ ಮಾತನಾಡಿ ದೇಶದ 75 ನೆಯ ಸ್ವಾತಂತ್ಯ ಮಹೋತ್ಸವವನ್ನು ಎಲ್ಲರೂ ಅತ್ಯಂತ ಅಭಿಮಾನದಿಂದ ಅರ್ಥಪೂರ್ಣವಾಗಿ ಆಚರಿಸೋಣ ಎಂದರು.