ಎಮ್.ಕೆ.ಹುಬ್ಬಳ್ಳಿ:ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಎಮ್.ಕೆ.ಹುಬ್ಬಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ವಿಭಿನ್ನವಾಗಿ ನಡೆದಿದ್ದು, ಪಕ್ಷಾತೀತವಾಗಿ ಗ್ರಾಮದ ಸರ್ವತೋಮುಖ ಅಭಿವೃದ್ದಿ ಹಿತದೃಷ್ಟಿಯಿಂದ ನಡೆದಿದೆ.
ಫಲಿತಾಂಶದ ನಂತರದಲ್ಲಿ ಬಿಜೆಪಿ ಬೆಂಬಲಿತ 09 ಜನ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಸ್ಥಳೀಯ ಶಾಸಕರು ಅವರನ್ನು ಅಭಿನಂದಿಸಿರುವುದು ನೂತನ ಚುನಾಯಿತ ಸದಸ್ಯರಲ್ಲಿ ಹಾಗೂ ಗ್ರಾಮಸ್ಥರಲ್ಲಿ ಅಸಮಾಧಾನ ಉಂಟು ಮಾಡಿದೆ.
ಸ್ಥಳೀಯ ಗ್ರಾಮದೇವಿ ದೇವಸ್ಥಾನದ ಅಭಿವೃದ್ದಿ ಗಮನದಲ್ಲಿಟ್ಟುಕೊಂಡು ಚುನಾವಣೆಯನ್ನು ಪಕ್ಷಾತೀತವಾಗಿ ಎದುರಿಸಲು ಗ್ರಾಮದ ಹಿರಿಯರು ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸೇರಿದಂತೆ ಯಾವ ಪಕ್ಷದವರಿಗೂ ಇಲ್ಲಿ ಬಿ ಫಾರ್ಮ್ ಪಡೆಯದೇ ಹಿರಿಯರೇ ಪಕ್ಷಾತೀತವಾಗಿ ಅಭ್ಯರ್ಥಿಗಳ ಆಯ್ಕೆ ಮಾಡಿ ಚುನಾವಣೆ ಎದುರಿಸಿದ್ದರು. ಇದೀಗ ಫಲಿತಾಂಶ ಹೊರಬಿದ್ದಿದ್ದು ಬಿಜೆಪಿ ಬೆಂಬಲಿತ 09 ಜನರನ್ನು ಸ್ಥಳೀಯ ಶಾಸಕರ ಕಚೇರಿಗೆ ಭೇಟಿ ಮಾಡಿಸಿ ಮಾಲಾರ್ಪಣೆ ಮಾಡಿಸುವ ಮೂಲಕ ಗ್ರಾಮದ ಹಿರಿಯರ ಆಶೋತ್ತರಗಳಿಗೆ ಚ್ಯುತಿ ಉಂಟು ಮಾಡುವ ಕಾರ್ಯ ನಡೆದಿದೆ ಎಂಬುದಾಗಿ ಸ್ಥಳೀಯ ಮುಖಂಡರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ನಲ್ಲಿ ಬರೆದುಕೊಂಡು ಅಸಮಾಧಾನ ಹೊರ ಹಾಕಿರುವ ಘಟನೆ ನಡೆದಿದೆ.