ವಿಜಯಪುರ: ಯೂನಿಯನ್ ಬ್ಯಾಂಕ್ ಎಟಿಎಂ ಲೂಟಿ ಪ್ರಕರಣದ ಹಿಂದೆ ಪ್ರೇಮಕಹಾನಿ ಇರುವುದು ಬೆಳಕಿಗೆ ಬಂದಿದೆ. ತನ್ನ ಪ್ರೇಮಿಗಾಗಿ ಬ್ಯಾಂಕ್‌ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದ ಪ್ರಿಯತಮೆ ಎಟಿಎಂ ಪಾಸ್‌ವರ್ಡ್ ನೀಡಿ ಅದರ ಲೂಟಿಗೆ ಸಹಕಾರ ನೀಡಿದ್ದಾಳೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ನ.18, 2021ರಂದು ಯೂನಿಯನ್ ಬ್ಯಾಂಕ್ ಎಟಿಎಂನಲ್ಲಿ 16 ಲಕ್ಷ ಲೂಟಿಯಾಗಿತ್ತು. ಈ ಪ್ರಕರಣವನ್ನು ಈಗಾಗಲೇ ವಿಜಯಪುರ ಪೊಲೀಸರು ಬೇಧಿಸಿದ್ದು, ಈಗಾಗಲೇ ಏಳು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನು ಈಗಾಗಲೇ ವಿಜಯಪುರ ಎಸ್ಪಿ ಆನಂದಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಆದರೆ, ಈ ಪ್ರಕರಣದ ಹಿಂದೆ ಪ್ರೇಮ ಪ್ರಕರಣ ಇರುವುದೇ ಸ್ವಾರಸ್ಯಕರ.
ಮುದ್ದೇಬಿಹಾಳದಲ್ಲಿದ್ದ ಯೂನಿಯನ್ ಬ್ಯಾಂಕ್‌ನಲ್ಲಿ ಮಿಸ್ಮಿತಾ ಶರಾಬಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದಳು. ಈಕೆಯ ಪ್ರಿಯಕರ ಮಂಜುನಾಥ ಬಿನ್ನಾಳಮಠ. ಈಕೆಯನ್ನು ಆಗಾಗ ಭೇಟಿ ಮಾಡುತ್ತಿದ್ದ. ಕೊನೆಗೆ ಎಟಿಎಂನಲ್ಲಿದ್ದ ಹಣ ದೋಚಬೇಕು ಎಂಬ ಕಾರಣಕ್ಕೆ ಮಿಸ್ಮಿತಾ ಬಳಿ ಎಟಿಎಂನ ಪಾಸ್‌ವರ್ಡ್‌ಅನ್ನು ಪಡೆದುಕೊಂಡಿದ್ದಾನೆ ಪ್ರಿಯಕರ ಮಂಜುನಾಥ. ನಂತರ ಈ ಕೃತ್ಯಕ್ಕಾಗಿ ಆತ ತನ್ನ ಸಹಚರರನ್ನು ಬಳಸಿಕೊಂಡಿದ್ದಾನೆ. ಮಾತ್ರವಲ್ಲ, ಬ್ಯಾಂಕಿನ ಸಿಪಾಯಿ ವಿಠಲ ಮಂಗಳೂರು ಕೂಡ ಸಾಥ್ ನೀಡಿದ್ದಾನೆ. ಅಂದುಕೊಂಡಂತೆ ನ.18ರಂದು ಯೂನಿಯನ್ ಬ್ಯಾಂಕ್ ನಿಂದ 16 ಲಕ್ಷ ಹಣವನ್ನು ಎಗರಿಸಿದ್ದಾರೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಕುರಿತು ಪೊಲೀಸರು ಸಿಸಿಟಿವಿ ಫೂಟೇಜ್ಅನ್ನು ಕೂಡ ಪಡೆದುಕೊಂಡಿದ್ದಾರೆ. ನಂತರ ಪೊಲೀಸರು ತೀವ್ರ ತನಿಖೆ ಕೈಗೊಂಡಾಗ, ಬ್ಯಾಂಕ್ ಸಿಬ್ಬಂದಿ ಇದರಲ್ಲಿ ಭಾಗಿಯಾಗಿರಬಹುದೇ ಎಂಬ ಅನುಮಾನದ ಆಧಾರದ ಮೇಲೆ ಪೊಲೀಸರು ಸಿಬ್ಬಂದಿಯನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಿಸ್ಮಿತಾ ಶರಾಬಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕೃತ್ಯದ ಸಂಗತಿ ಬೆಳಕಿಗೆ ಬಂದಿದೆ. ಈ ವೇಳೆ ಆಕೆ ತನ್ನ ಪ್ರಿಯಕರನಿಗೆ ಎಟಿಎಂ ಪಾಸ್‌ವರ್ಡ್ ನೀಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದರು.
ಈ ಸಂಬಂಧ ಈಗಾಗಲೇ ಪೊಲೀಸರು ಪ್ರೇಮಿಗಳಾದ ಮಿಸ್ಮಿತಾ, ಮಂಜುನಾಥ ಹಾಗೂ ಸಿಪಾಯಿ ವಿಠಲ ಸೇರಿ ಒಟ್ಟು 7 ಜನರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 13 ಲಕ್ಷ ನಗದು, 5 ಸ್ಮಾರ್ಟ್‌ಫೋನ್ ಸೇರಿ 18 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.