ಸ್ವತಂತ್ರ ಧರ್ಮವಾದರೆ ಲಿಂಗಾಯತರಿಗೆ ಲಾಭ; ಚಿತ್ತರಗಿ ಶ್ರೀಗಳು

ಉಮೇಶ ಗೌರಿ (ಯರಡಾಲ)

ಸುದ್ದಿ ಸದ್ದು ನ್ಯೂಸ್

ರಾಯಚೂರು: ‘ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಘೋಷಣೆಯಾದರೆ ಲಿಂಗಾಯತರು ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ, ಹೆಚ್ಚಿನ ಸೌಲಭ್ಯ ಪಡೆಯಲು ಸಾಧ್ಯವಾಗಲಿದೆ’ ಎಂದು ಚಿತ್ತರಗಿ ಇಳಕಲ್ ಸಂಸ್ಥಾನ ಮಠದ ಗುರು ಮಹಾಂತ ಅಪ್ಪ ತಿಳಿಸಿದರು.

ನಗರದ ಬಸವೇಶ್ವರ ಕಾಲೊನಿಯ ಬಸವ ಕೇಂದ್ರದಲ್ಲಿ ಆಯೋಜಿಸಿದ್ದ ಶರಣ ಚಿಂತನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಕಲ ಜೀವಿಗಳ ಲೇಸು ಬಯಸುವ ಧರ್ಮ ಇದಾಗಿರುವ ಕಾರಣ ಬಸವ ಧರ್ಮ ಪ್ರತಿಯೊಬ್ಬರ ಪ್ರೀತಿ ಪಾತ್ರವಾಗಿದೆ ಎಂದು ಹೇಳಿದರು.

‘ಪ್ರತಿಯೊಬ್ಬರು ಗಣತಿ ಸಂದರ್ಭದಲ್ಲಿ ಒಳ ಪಂಗಡ ಹಾಗೂ ಅದರ ಮುಂದೆ ಲಿಂಗಾಯತ ಎಂದು ನಮೂದು ಮಾಡಿಸಬೇಕು. ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಯಿಂದ ಸೌಲಭ್ಯ ಪಡೆಯಲು ಸಾಧ್ಯವಾಗಲಿದೆ. ವಿಶ್ವದೆಲ್ಲಡೆ ನೆಲೆಸಿರುವ ಚಿಂತಕರು, ಸಾಹಿತಿಗಳು ಬಸವ ಧರ್ಮದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಸಾಧ್ಯವಾಗಲಿದೆ’ ಎಂದು ತಿಳಿಸಿದರು.

‘ಅನೈತಿಕವಾಗಿ ಹುಟ್ಟಿದ ಮಗುವಿಗೂ ಸಮಾಜದಲ್ಲಿ ಸಮಾನ ಸ್ಥಾನಮಾನ ಕೊಡಬೇಕೆಂದು ಶರಣ ತತ್ವ ಹೇಳುತ್ತದೆ. ಅಲ್ಲಿ ಮಗವಿನ ತಪ್ಪೇ ಇರುವುದಿಲ್ಲ. ಅಂತಹ ಮಗುವಿಗೆ ಲಿಂಗ ಧಾರಣೆ ಮಾಡಿ ದೀಕ್ಷೆ ನೀಡಿ ಧಾರ್ಮಿಕ ಮುಖಂಡನನ್ನಾಗಿ ಬೆಳೆಸಬೇಕು’ ಎಂದು ಸಲಹೆ ನೀಡಿದರು.

‘ಮೊಟ್ಟ ಮೊದಲು ಹೆಣ್ಣು ಮಕ್ಕಳಿಗೆ ದೀಕ್ಷೆ ಕೊಟ್ಟವರು ಬಸವಣ್ಣ. ಲಿಂಗ ಸಮಾನತೆ ಮೇಲೆ ಧರ್ಮ ಕಟ್ಟಿದರು. ಬಸವಣ್ಣನವರ ಪ್ರಭಾವ ಆದ ಮೇಲೆ ಜೈನರು ಕೆಲವು ಬ್ರಾಹ್ಮಣರು ಸಹ ಲಿಂಗ ಧಾರಣೆ ಮಾಡಿದರು. ಕಾಪಾಲಿಕ ಮಠಗಳ ಪ್ರಮುಖರು, ಸಪ್ತ ಶೈವರೂ ಲಿಂಗಾಯತ ಧರ್ಮ ಸ್ವೀಕಾರ ಮಾಡಿದರು’ ಎಂದರು.

ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ನರಸಣ್ಣ ಮಾತನಾಡಿ. ‘ಮನುಷ್ಯರು ಮನುಷ್ಯರಾಗಿ ಬಾಳಬೇಕು ಹೊರತು ಪಶುಗಳಂತೆ ಬಾಳಬಾರದು. ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸಮಾಜಕ್ಕೆ ಒಳ್ಳೆಯ ಸಂದೇಶ ತಲುಪಿಸುತ್ತವೆ’ ಎಂದು ಹೇಳಿದರು.

ಮೂರನೇ ದಿನದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ದೇವಮ್ಮ ದೇವಣಗಾವ್ ಪಾಲ್ಗೊಂಡಿದ್ದರು. ಬಸವ ಕೇಂದ್ರ ಅಧ್ಯಕ್ಷ ರಾಚನಗೌಡ ಕೋಳೂರು ಅಧ್ಯಕ್ಷತೆ ವಹಿಸಿದ್ದರು. ಅಕ್ಕನ ಬಳಗದ ಅಧ್ಯಕ್ಷೆ ಜಗದೇವಿ ಚನ್ನಬಸವ, ಸುಪ್ರೀಂ ಕೋರ್ಟ್ ವಕೀಲ ದೇವಣ್ಣ ನಾಯಕ ಇದ್ದರು. ಚೆನ್ನಬಸವಣ್ಣ ಮಹಾಜನ್ ಶೆಟ್ಟಿ ಸ್ವಾಗತಿಸಿದರು. ನಿವೃತ್ತ ಪ್ರಾಚಾರ್ಯ ಪರಮೇಶ್ವರ ಸಾಲಿಮಠ ನಿರೂಪಣೆ ಮಾಡಿದರು. ಸಿ.ಬಿ.ಪಾಟೀಲ ವಂದಿಸಿದರು. ಅಕ್ಕನ ಬಳಗ, ವೀರಶೈವ ಲಿಂಗಾಯತ ಸಮಾಜ, ಅಖಿಲ ಭಾರತ ಲಿಂಗಾಯತ ಮಹಾಸಭೆ ಹಾಗೂ ಕರ್ನಾಟಕ ಸಂಘದ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";