ಭಾಲ್ಕಿ ಹಿರೇಮಠ ಸಂಸ್ಥಾನ ಕನ್ನಡದ ಮಠ, ಬಸವ ತತ್ವ ಪ್ರಸಾರಕ ಮಠ ಎಂದೇ ಖ್ಯಾತಿ ಪಡೆದಿದೆ. ಬಸವಣ್ಣನವರ ವಿಚಾರಧಾರೆಗಳನ್ನೇ ಹಾಸಿಕೊಂಡು, ಹೊದ್ದುಕೊಂಡಿರುವ ಭಾಲ್ಕಿ ಮಠ ಇದೀಗ ಸಕತ್ ಸುದ್ದಿಯಲ್ಲಿದೆ.
ಇದೇ 28 ರಂದು ಭಾಲ್ಕಿ ಮಠದಲ್ಲಿ ಪೂಜ್ಯ ಶ್ರೀ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಇವರ ಭಾಷಣ ಹಮ್ಮಿಕೊಂಡಿದ್ದು ಬಸವ ತತ್ವಕ್ಕೆ ವಿರೋಧಿ ಹಿನ್ನೆಲೆ ಹೊಂದಿರುವ ಚಕ್ರವರ್ತಿ ಸೂಲಿಬೆಲೆ ಅವರ ಮಾತುಗಳಿಗೆ ವೇದಿಕೆ ನೀಡಿರುವುದು ಎಷ್ಟರ ಮಟ್ಟಿಗೆ ಸರಿ ಅನ್ನೋದು ಪ್ರಸ್ತುತ ಚರ್ಚೆಯ ವಿಷಯವಾಗಿದೆ.
ಇವನಾರವ, ಇವನಾರವ ಎಂದೆಣಿಸದೇ ಇವ ನಮ್ಮವ, ಇವ ನಮ್ಮವ ಎಂದು ಎಲ್ಲರೂ ನಮ್ಮವರೆನ್ನುವ ಮಠ. ಬಡವರಿಗೆ, ದೀನ-ದಲಿತರಿಗೆ, ಅಂಗವಿಕಲರಿಗೆ, ಅಬಲೆಯರಿಗೆ, ವಿಧವೆಯರಿಗೆ, ಅನಾಥರಿಗೆ, ಕಲಾವಿದಾರಿಗೆ ಆಶ್ರಯ ನೀಡಿರುವಂಥ ಮಠ. ಖ್ಯಾತ ಸಂಶೋಧಕರಾದ ಎಂ. ಎಂ. ಕಲಬುರ್ಗಿಯವರು “ನಾಡಿನ ಗುರುಸ್ಥಲ ಮಠಗಳಿಗೆ ಭಾಲ್ಕಿ ಮಠ ಮಾದರಿ ಹಾಗೂ ನಾಡಿನ ವಿರಕ್ತ ಮಠಗಳಿಗೆ ಇಳಕಲ ಮಠ ಮಾದರಿ”ಎಂದು ಬರೆದಿರುವುದು ಇಲ್ಲಿ ಸ್ಮರಿಸಬಹುದು.
ಮಠಗಳೆಂದರೆ ಮತ – ಧರ್ಮ ಸಂರಕ್ಷಣೆ ಎಂಬ ಸಿದ್ಧನಂಬಿಕೆಗಳನ್ನು ಮುರಿದು ನಾಡು ನುಡಿ ಸಂರಕ್ಷಣೆಗೆ ನಿಂತು. ಕನ್ನಡ ಉಳಿದರೆ ಮಾತ್ರ ಧರ್ಮ ಉಳಿಯುತ್ತದೆಂದು ಬಲವಾಗಿ ಪ್ರತಿಪಾದಿಸಿದ್ದೇ ಭಾಲ್ಕಿ ಹಿರೇಮಠ ಸಂಸ್ಥಾನ ಮತ್ತು ಅದರ ಪೀಠಾಧಿಪತಿಗಳಾಗಿದ್ದ ಡಾ.ಚೆನ್ನಬಸವಪಟ್ಟದ್ದೇವರು. ಬಹು ಪ್ರಾಚೀನತೆ ಹೊಂದಿರುವ ಭಾಲ್ಕಿ ಹಿರೇಮಠ ಸಂಸ್ಥಾನ ಮೂಲತಃ ಸಂಪ್ರದಾಯ ಶೀಲ ಮಠ. ಅದು ವೈಚಾರಿಕತೆಗೆ ತೆರೆದುಕೊಂಡಿದ್ದು, ಜನಪ್ರಿಯತೆಗೆ ಬಂದದ್ದು ಡಾ. ಚೆನ್ನಬಸವ ಪಟ್ಟದೇವರಿಂದ. ಈ ಜನಪ್ರಿಯತೆ ತಂದುಕೊಟ್ಟಿದ್ದೆ ಶ್ರೀಗಳ ಕನ್ನಡ ಪ್ರೀತಿಯಿಂದ.
ಡಾ. ಚೆನ್ನಬಸವ ಪಟ್ಟದೇವರಿಗೆ ಕನ್ನಡ ಕೇವಲ ಭಾಷೆಯಾಗಿ ಕಾಣಲಿಲ್ಲ ಬದಲಿಗೆ ಕನ್ನಡವೆಂದರೆ ಜನತೆ ಶತಮಾನಗಳಿಂದ ಆಚರಿಸಿಕೊಂಡು ಬಂದ ಸಂಪ್ರದಾಯ, ನಂಬಿಕೆ, ಸಂಸ್ಕೃತಿ, ಒಟ್ಟು ಜೀವನ ವಿಧಾನ. ಆದ್ದರಿಂದ ಕನ್ನಡವೆಂದರೆ ಜನತೆಯ ಬದುಕು ಎಂದು ಭಾವಿಸಿ ಕನ್ನಡದ ಉಳಿವೆಂದರೆ ಅದು ಕನ್ನಡಿಗರ ಉಳಿವೆಂದು ತಿಳಿದರು. ಆ ಕಾರಣಕ್ಕಾಗಿಯೇ ಹ್ಶೆದ್ರಾಬಾದ-ಕರ್ನಾಟಕ ವಿಮೋಚನೆ, ಕನ್ನಡ ಏಕೀಕರಣ, ಕರ್ನಾಟಕದ ಪುನರ್ ನಾಮಕರಣಕ್ಕಾಗಿ ಹೋರಾಡಿದರು.
ಈ ಹೋರಾಟಕ್ಕೆ ಕನ್ನಡ ಮಾಧ್ಯಮ ಶಿಕ್ಷಣವನ್ನು ಅಸ್ತ್ರವಾಗಿ ಬಳಸಿದರು. ಅದಕ್ಕೆ ಕಾರಣವೂ ಇತ್ತು. ಡಾ. ಚೆನ್ನಬಸವ ಪಟ್ಟದೇವರು. ಹಾನಗಲ್ ಶಿವಯೋಗ ಮಂದಿರದಲ್ಲಿ ತರಬೇತಿಯನ್ನು ಪಡೆದ ಮೇಲೆ 1924ರಲ್ಲಿ ನಡೆದ ಭಾಲ್ಕಿ ಹಿರೇಮಠದ ಪೀಠಾರೋಹಣದಂದು. ಶಿವಯೋಗ ಮಂದಿರದಲ್ಲಿ ತರಬೇತಿ ನೀಡಿದ ಹಾನಗಲ್ ಕುಮಾರ ಸ್ವಾಮಿಯವರೆ ಬಂದು ತಮ್ಮ ಪ್ರೀತಿಯ ಶಿಷ್ಯನಿಗೆ ಪೀಠಾರೋಹಣ ಮಾಡಿಸಿದ್ದು, ಜೊತೆಗೆ ಮಠಕ್ಕಾಗಿ ನೀನಲ್ಲ, ನಿನಗಾಗಿ ಮಠವಿದೆ ಈ ಭಾಗದಲ್ಲಿ ಶಿಕ್ಷಣ, ಶರಣತತ್ವ, ದೀನ ದಲಿತರ ಸೇವೆಗೆ ಬದುಕು ಮೀಸಲಾಗಿರಲಿ ಎಂದು ಹೇಳಿ ಜವಾಬ್ದಾರಿಗಳನ್ನು ಹೋರಿದರು. ಆದರೆ ಮಠದ ವ್ಯವಸ್ಥೆ ಶಿಥಿಲವಾಗಿತ್ತು. ಶಾಖಾ ಮಠಗಳು ಸ್ವತಂತ್ರವೆಂಬಂತೆ ಇದ್ದವು. ಇದೆಲ್ಲ ಒಂದು ವರ್ಷದಲ್ಲಿ ಸರಿಪಡಿಸಿ ಎಲ್ಲಾ ಶಾಖಾ ಮಠಗಳು ಭಾಲ್ಕಿ ಹಿರೇಮಠದ ಆಧೀನಕ್ಕೆ ತಂದರು, ಕಾರೆಮುಂಗಿ, ಮೋರಗಿಯಲ್ಲಿರುವ ಮಠದ ಹೊಲಗಳ ಉಳುಮೆಯನ್ನು ಸ್ವತಃ ತಾವೆ ಮಾಡಿದರು.
ನುಡಿಯಲ್ಲಿ ಎಚ್ಚತ್ತು ನಡೆಯಲ್ಲಿ ತಪ್ಪಿದಡೆ ಹಿಡಿದಿರ್ದ ಲಿಂಗವು ಘಟಸರ್ಪನಯ್ಯಾ. ನುಡಿಯಲೂ ಬಾರದು, ನಡೆಯಲೂ ಬಾರದು, ಲಿಂಗದೇವನೆ ದಿಬ್ಯವೊ ಅಯ್ಯಾ. ಬಡವನ ಕೋಪವು ಅವುಡಿಗೆ ಮೃತ್ಯುವಾದಂತೆ ಕಡೆಗೆ ದಾಂಟದು ಕಾಣಾ, ಕೂಡಲಸಂಗಮದೇವಾ…
ಇಂತಹ ಮಠ ಪರಂಪರೆ ಇದೀಗ ಕೋಮು ಸೌಹಾರ್ದ ಕೆಡಿಸುವ ಭಾಷಣಕಾರನಿಗೆ ವೇದಿಕೆ ನೀಡಿದ್ದು ಸಮಂಜಸವಲ್ಲ ಆ ಕಾರ್ಯಕ್ರಮದಲ್ಲಿ ಶ್ರೀಗಳು ಭಾಗಿಯಾಗಲೂ ಬಾರದು ಮತ್ತು ಅವಕಾಶವನ್ನು ನೀಡಬಾರದು ಅಂತ ಬಸವಾನುಯಾಯಿಗಳು ಪಟ್ಟು ಹಿಡಿದಿದ್ದಾರೆ.
ಇದು ಫೇಕ್ ಸುದ್ದಿ: ಎಂ ಎಂ ಕಲಬುರ್ಗಿಯವರ ಎದೆಯಿಂದ ಚಿಮ್ಮಿದ ರಕ್ತ ಇನ್ನೂ ಆರಿಲ್ಲ. ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಬಸವಾನುಯಾಯಿಗಳು ಹಾಗೂ ಬಸವನಿಷ್ಠ ಮಠಾಧೀಶರು ಯಾರೇ ಭಾಗವಹಿಸಲಿ ಅವರನ್ನು ನಾವು ಮುಲಾಜಿಲ್ಲದೆ ವಿರೋಧಿಸಬೇಕು. ಸ್ವಾಮೀಜಿಗಳು ಈ ಕಾರ್ಯಕ್ರಮಕ್ಕೆ ಹೋಗುತ್ತಾರೆಂಬ ಫೇಕ್ ಸುದ್ದಿ ಗೊತ್ತಾದ ತಕ್ಷಣ ಅನೇಕರು ಟೀಕೆ ಟಿಪ್ಪಣಿ ಮಾಡುತ್ತಿದ್ದಾರೆ. ಜನರ ಆಕ್ರೋಶದಲ್ಲಿ ತಪ್ಪೇನಿಲ್ಲ. ಮಠದ ಸ್ವಾಮೀಜಿಗಳು ಬಸವ ತತ್ವಕ್ಕಾಗಿಯೇ ಬದುಕುತ್ತಿರುವ ಜೀವಗಳು.
ವಾಸ್ತವ ಸಂಗತಿ ಎಂದರೆ ಭಾಲ್ಕಿಯ ಬಸವಲಿಂಗ ಪಟ್ಟದೇವರಾಗಲಿ, ಗುರುಬಸವ ಪಟ್ಟದೇವರಾಗಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. ಇವರನ್ನು ಹೇಳದೆ – ಕೇಳದೆ ಹೆಸರು ಹಾಕಿಕೊಂಡಿದ್ದಾರೆ.ಅಷ್ಟಕ್ಕೂ ಭಾಲ್ಕಿ ಮಠ ಅಪ್ಪಟ್ಟ ಬಸವ ತತ್ವದ ಮಠ; ಆರೆಸ್ಸೆಸ್ ಮಠವಲ್ಲ. ಈ ಮಠದ ಶ್ರೀಗಳು ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರಶ್ನೆಯೇ ಇಲ್ಲ ಎಂದು ಮಠದ ಭಕ್ತರೊಬ್ಬರು ಹೇಳಿದ್ದಾರೆ.