ಬೆಳಗಾವಿ: ಜಿಲ್ಲಾ ವಿಭಜನೆ ಮಾಡುವಂತೆ ಆಗ್ರಹಿಸಿ ಭಕ್ತರೊಬ್ಬರು ಸವದತ್ತಿ ಯಲ್ಲಮ್ಮದೇವಿಗೆ ಹರಕೆ ಪತ್ರ ಬರೆದಿದ್ದಾರೆ. ಬೆಳಗಾವಿಯನ್ನು 4 ಜಿಲ್ಲೆಗಳಾಗಿ ವಿಭಜಿಸಲು ಸಿಎಂಗೆ ಒಳ್ಳೆ ಬುದ್ಧಿ ನೀಡಲೆಂದು ಭಕ್ತರು ದೇವರಲ್ಲಿ ಹರಕೆ ಪತ್ರ ಬರೆದು ಬೇಡಿಕೆ ಇಟ್ಟಿದ್ದಾರೆ.
ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಹುಂಡಿ ಎಣಿಕೆಯ ವೇಳೆ ಈ ಪತ್ರ ಸಿಕ್ಕಿದ್ದು, ಜಿಲ್ಲೆಯನ್ನು ವಿಭಜನೆ ಮಾಡುವಂತೆ ಕೇಳಿಕೊಳ್ಳಲಾಗಿದೆ. ಸುದೀರ್ಘ ನಾಲ್ಕು ಪುಟಗಳ ಪತ್ರ ಬರೆದಿದ್ದು ಬೆಳಗಾವಿ, ಗೋಕಾಕ, ಚಿಕ್ಕೋಡಿ, ಬೈಲಹೊಂಗಲವನ್ನು ಜಿಲ್ಲೆಯನ್ನಾಗಿ ಮಾಡುವಂತೆ ಹರಕೆ ಹೊತ್ತು ದೇವರ ಕಾಣಿಕೆ ಹುಂಡಿಯಲ್ಲಿ ಪತ್ರ ಬರೆದು ಹಾಕಿದ್ದಾರೆ.
ಜೆ.ಹೆಚ್.ಪಟೇಲ್ ಸಿಎಂ ಆಗಿದ್ದಾಗ ಬೆಳಗಾವಿ ಜಿಲ್ಲೆಯಲ್ಲಿ 10 ತಾಲೂಕು ಇದ್ದವು. 1997 ರಲ್ಲಿ ಬೆಳಗಾವಿ, ಚಿಕ್ಕೋಡಿ, ಗೋಕಾಕ ಸೇರಿ ಮೂರು ಜಿಲ್ಲೆಗಳಾಗಿ ಘೋಷಣೆ ಮಾಡಲಾಗಿತ್ತು. ಈಗ 14 ತಾಲೂಕು ಆಗಿದ್ದು, ನಾಲ್ಕು ಜಿಲ್ಲೆಗಳನ್ನಾಗಿ ಮಾಡಬೇಕು. ಯಾದಗಿರಿ ಮೂರು ತಾಲೂಕು ಇದ್ದು, ಜಿಲ್ಲೆ ಮಾಡಿದ್ದಾರೆ. ಕೊಡಗು 2 ವಿಧಾನಸಭಾ ಕ್ಷೇತ್ರ ಇದ್ದು ಜಿಲ್ಲೆ ಮಾಡಿದ್ದಾರೆ. ಹಾಗೇ ನಮ್ಮ ಜಿಲ್ಲೆಯಲ್ಲಿ 14 ತಾಲೂಕು, 18 ವಿಧಾನಸಭಾ ಕ್ಷೇತ್ರ ಇದ್ದು, ನಾಲ್ಕು ಜಿಲ್ಲೆಗಳನ್ನಾಗಿ ಮಾಡಬೇಕು. ನಾಲ್ಕು ಜಿಲ್ಲೆ ಮಾಡಿ ಎರಡು ಪ್ರತ್ಯೇಕ ಉಪವಿಭಾಗಾಧಿಕಾರಿ ಆಫೀಸ್ ಮಾಡಬೇಕು. ಈಗಾಗಲೇ ಹುಂಡೇಕರ್, ವಾಸುದೇವ, ಗದ್ದಿಗೌಡರ ಸಮಿತಿ ಗೋಕಾಕ ಜಿಲ್ಲೆಗೆ ಶಿಫಾರಸು ಮಾಡಿವೆ.
ಮೂರು ಸಮಿತಿಗಳು ಮಾಡಿದ ಶಿಫಾರಸ್ಸಿನಂತೆ ಗೋಕಾಕ ಜಿಲ್ಲೆ ಮಾಡಿ ಎಂದು 4 ಪುಟಗಳ ಸುದೀರ್ಘ ಪತ್ರವನ್ನ ಬರೆದ ಭಕ್ತರು, ಸವದತ್ತಿ ಯಲ್ಲಮ್ಮ ದೇವಿಗೆ ಹುಂಡಿಗೆ ಹಾಕಿದ್ದಾರೆ. ಸತತ ಐದು ದಿನಗಳ ಕಾಲ ಸವದತ್ತಿ ಯಲ್ಲಮ್ಮ ದೇವಸ್ಥಾನ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿದೆ. ಈ ವೇಳೆ ಭಕ್ತರು ಚಿತ್ರವಿಚಿತ್ರ ಹರಕೆ ಪತ್ರ ಪತ್ತೆಯಾಗಿದೆ.
ಅರಬ್ ದೇಶದ ಕರೆನ್ಸಿ ಪತ್ತೆ: ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಹುಂಡಿಯಲ್ಲಿ ವಿದೇಶಿ ಕರೆನ್ಸಿ ಪತ್ತೆಯಾಗಿದೆ. ಯಲ್ಲಮ್ಮನ ದೇವಸ್ಥಾನದ 45 ದಿನಗಳಲ್ಲಿ ಕೂಡಿದ ಹಣದ ಎಣಿಕೆ ಕಾರ್ಯದಲ್ಲಿ ಪತ್ತೆಯಾಗಿದೆ. ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಹುಂಡಿ ಎಣಿಕೆ ಕಾರ್ಯ ಇಂದೂ 5ನೇ ದಿನಕ್ಕೆ ಕಾಲಿಟ್ಟಿದ್ದು, ಯಲ್ಲಮ್ಮನ ಹುಂಡಿಯಲ್ಲಿ ಅರಬ್ ದೇಶದ ಕರೆನ್ಸಿ ಪತ್ತೆಯಾಗಿದೆ. ಸೆಂಟ್ರಲ್ ಬ್ಯಾಂಕ್ ಆಫ್ ದಿ ಯುನೈಟೆಡ್ ಅರಬ್ ಎಮಿರೇಟ್ಸ್ ಎಂದು ಹೆಸರು ಇರುವ ವಿದೇಶ ಕರೆನ್ಸಿ ಪತ್ತೆಯಾಗಿದೆ. ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರು ಹುಂಡಿ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.