ಬೆಂಗಳೂರು: ಕರ್ನಾಟಕ ಸರ್ಕಾರದಲ್ಲಿ ಶೇ .40 ದಂಧೆ ನಡೆಯುತ್ತಿದೆ ಎಂಬ ಗಂಭೀರ ಆರೋಪ ಪದೆ ಪದೆ ಕೇಳಿ ಬರುತ್ತಿರುವ ನಡುವೆ ಕಂಟ್ರಾಕ್ಟರ್ ಸಂಘದವರು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಶೇ. 40ರಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗಂಭೀರ ಆರೋಪವನ್ನೇ ಮಾಡಿದ್ದರು.ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ದೂರಿನ ಬಳಿಕ ಮತ್ತೊಂದು ಸಂಘದಿಂದ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಗುತ್ತಿಗೆದಾರರ ಸಂಘದಿಂದ ಆತ್ಮಹತ್ಯೆ ಮಾಡಿಕೊಳ್ಳುವ ಕುರಿತು ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆಯಲಾಗಿದೆ.ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಕಂಟ್ರಾಕ್ಟರ್ ಸಂತೋಷ್ ಪಾಟೀಲ್ ಪ್ರಧಾನಿಗೂ ಪತ್ರವನ್ನು ಬರೆದಿದ್ದರು.
ಬಾಕಿ ಇರುವ ಬಿಲ್ ಬಿಡುಗಡೆಗೊಳಿಸದೇ ಇದ್ದರೆ ಗುತ್ತಿಗೆದಾರರು ಆತ್ಮಹತ್ಯೆ ಹಾದಿ ಹಿಡಿಯುವ ಪರಿಸ್ಥಿತಿ ಉಂಟಾಗುತ್ತದೆ. ಪ್ರತಿಯೊಬ್ಬ ಗುತ್ತಿಗೆದಾರರು ತೀವ್ರ ಸಂಕಷ್ಟ ಹಾಗೂ ಹಣಕಾಸಿನ ತೊಂದರೆಯಿಂದ ಕಾಮಗಾರಿ ಸ್ಥಳಕ್ಕೆ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಟ್ಟಡ ಕಾಮಗಾರಿಗಳ ಉಪಕರಣ ನೀಡಿದ ವ್ಯಾಪಾರಿಗಳು, ಕಾರ್ಮಿಕರು, ಸಾಲ ನೀಡಿದ ಸಂಸ್ಥೆಗಳು ತೀವ್ರ ಒತ್ತಡ ಹೇರುತ್ತಿದ್ದಾರೆ. ಕೆಲ ಗುತ್ತಿಗೆದಾರರು ಒತ್ತಡದಿಂದ ಮನ ನೊಂದಿದ್ದಾರೆ.
ರಾಜ್ಯಾದ್ಯಂತ ಈಗಾಗಲೇ 100ಕ್ಕೂ ಹೆಚ್ಚು ಶಾಲಾ ಕಟ್ಟಡಗಳು ನಿರ್ಮಾಣ ಮಾಡಿದ್ದೇವೆ. ನೂರಾರು ಗುತ್ತಿಗೆದಾರರು ತಮ್ಮನ್ನು ಭೇಟಿಯಾಗಿದ್ದರೂ ಯಾವುದೇ ಸ್ಪಂದನೆ ದೊರಕಿಲ್ಲ. ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಭೇಟಿ ಮನವಿ ಮಾಡಿದ್ರು ಪ್ರಯೋಜನವಾಗಿಲ್ಲ. ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಕಾರ್ಯ ನಿರ್ವಾಹಕ ನಿರ್ದೇಶಕರಿಗೂ ಅಹವಾಲು ಸಲ್ಲಿಸಿದ್ದೇವೆ. ಆದರೆ ಈವರೆಗೂ ನಮಗೆ ಸಕಾರಾತ್ಮಕ ಸ್ಪಂದನೆ ದೊರತಿಲ್ಲ ಎಂದು ಗುತ್ತಿಗೆದಾರರರು ಅಸಮಾಧಾನ ಹೊರಹಾಕಿದ್ದಾರೆ.
ಕೆಲವರು ಸಾಲಭಾದೆ ತಾಳಲಾರದೇ ಆತ್ಮಹತ್ಯೆಯಂತಹ ತೀರ್ಮಾನಕ್ಕೆ ಬಂದಿದ್ದಾರೆ. ಈ ವಿಚಾರ ನಮ್ಮ ಸಂಘದ ಗಮನಕ್ಕೆ ಬಂದಿದೆ. ನಮ್ಮ ಸಂಘದ ವತಿಯಿಂದ ಎಲ್ಲಾ ಗುತ್ತಿಗೆದಾರರನ್ನು ಕರೆಸಿ ಸಮಾಧಾನಪಡಿಸಿ ಕಳಿಸಿದ್ದೇವೆ. ಇನ್ನೊಮ್ಮೆ ಕೊನೆಯದಾಗಿ ಮಾನ್ಯ ಮುಖ್ಯಮಂತ್ರಿಯವರನ್ನು, ಮಂತ್ರಿಗಳನ್ನು ಭೇಟಿ ಮಾಡುವುದಾಗಿ ಹೇಳಿ ಕಳಿಸಿದ್ದೇವೆ. ಗುತ್ತಿಗೆದಾರರು ಎಸ್.ಸಿ, ಎಸ್.ಟಿ. ಹಾಗೂ ಹಿಂದುಳಿದ ವರ್ಗಗಳ ಸಮುದಾಯದ ಮಕ್ಕಳ ವಸತಿ ಶಾಲೆಗಳ ಕಟ್ಟಡ ಕಾಮಗಾರಿಗಳನ್ನ ಮಾಡಿದ್ದಾರೆ. ಕಳೆದ ಏಳೆಂಟು ತಿಂಗಳಿದ ಬಾಕಿ ಪಾವತಿ ಬೆಳೆಯುತ್ತಲೇ ಇದೆ. ಸುಮಾರು 1200 ಕೋಟಿಯಷ್ಟು ಮೊತ್ತ ಗುತ್ತಿಗೆದಾರರಿಗೆ ಬಿಡುಗಡೆಯಾಗಬೇಕಿದೆ. ಇದು ಹೀಗೆ ಮುಂದುವರೆದರೆ ಪ್ರತಿಭಟನೆ ಮಾಡುವುದಾಗಿ ಗುತ್ತಿಗೆದಾರರ ಸಂಘ ಎಚ್ಚರಿಕೆ ನೀಡಿದೆ.