2008 ರಲ್ಲೇ ಶೋಭಾ ಕರಂದ್ಲಾಜೆ ಅವರಂತೆ ಆಗಬೇಕು ಎಂದು ಆಸೆ ಪಟ್ಟಿದ್ದೆ: ಲಕ್ಷ್ಮೀ ಹೆಬ್ಬಾಳ್ಕರ್

ಉಮೇಶ ಗೌರಿ (ಯರಡಾಲ)

ಉಡುಪಿ(ಸೆ.24): ಕೇಂದ್ರ ಮತ್ತು ಕೃಷಿ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರ ಕ್ರಿಯಾಶೀಲತೆ ಕಂಡು ನಾನು ಅವರಂತೆ ಆಗಬೇಕು ಎಂದು 2008 ರಲ್ಲೇ ಆಸೆ ಪಟ್ಟಿದ್ದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಭಾನುವಾರ ನಡೆದ ರಾಷ್ಟೀಯ ವಯೋಶ್ರೀ ಯೋಜನೆಯಡಿ ಹಿರಿಯ ನಾಗರಿಕರಿಗೆ ಸಾಧನ ಸಲಕರಣೆಗಳ ವಿತರಣಾ ಸಮಾರಂಭದಲ್ಲಿ ಸಚಿವರು ಮಾತನಾಡಿದರು.

2008 ರಲ್ಲಿ ತಾವು ರಾಜ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದೆ. ಆ ವೇಳೆ ಶೋಭಾ ಕರಂದ್ಲಾಜೆ ಅವರು ಸಚಿವರಾಗಿದ್ದು, ಬೆಳಗಾವಿಗೆ ಆಗಮಿಸಿದ್ದರು. ಮೊದಲ ಬಾರಿಗೆ ನಾನು ಅವರನ್ನು ಭೇಟಿ ಮಾಡಿದ್ದೆ. ಅವರ ಕ್ರಿಯಾಶೀಲತೆ ನೋಡಿ ಒಂದಲ್ಲಾ ಒಂದು ದಿನ ನಾನೂ ಅವರಂತಾಗಬೇಕು ಎಂದು ಆಸೆಪಟ್ಟಿದ್ದೆ. ಇಂದು ಸಚಿವೆಯಾಗಿದ್ದೇನೆ. ಶೋಭಾ ಕರಂದ್ಲಾಜೆ ಈಗ ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಲಕ್ಷ್ಮೀ ಹೆಬ್ಬಾಳ್ಕರ್

ಇಲಾಖಾ ಕಾರ್ಯಕ್ರಮಗಳ ಕುರಿತು ಮಾತನಾಡಿದ ಲಕ್ಷ್ಮೀಹೆಬ್ಬಾಳ್ಕರ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಮಾಜಿಕ ನ್ಯಾಯದ ಅಡಿಯಲ್ಲಿ, ಪ್ರತಿಯೊಬ್ಬ ನಾಗರೀಕರಿಗೂ ಅನುಕೂಲವಾಗುವಂತೆ ಸಾಮಾಜಿಕ ಕಳಕಳಿಯಿಂದ ಪ್ರತಿವರ್ಷ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತವೆ. ಅಕಾರಿಗಳು ಜವಾಬ್ದಾರಿಯುತವಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿ, ವಿಕಲಚೇತನರು ಮತ್ತು ಹಿರಿಯ ನಾಗರೀಕರು ಸೇರಿದಂತೆ ಪ್ರತಿಯೊಬ್ಬರಿಗೂ ಈ ಯೋಜನೆಗಳನ್ನು ಅವರ ಮನೆಯ ಬಾಗಿಲಿಗೆ ತಲಪಿಸುವ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.

ರಾಜ್ಯದಲ್ಲಿರುವ ವಿಕಲಚೇತನರಲ್ಲಿ 6,800 ಜನರಿಗೆ ವಿವಿಧ ದೈನಂದಿನ ಚಟುವಟಿಕೆಗಳನ್ನು ಕೈಗೊಳ್ಳಲು ವಾಹನಗಳ ಅವಶ್ಯಕತೆಯಿದ್ದು, ಈ ವರ್ಷ ಮೊದಲ ಹಂತದಲ್ಲಿ 3,000 ಜನರಿಗೆ 30 ಕೋಟಿ ವೆಚ್ಚದಲ್ಲಿ ವಾಹನಗಳನ್ನು ವಿತರಿಸಲಾಗುವುದು,ಉಳಿದವರಿಗೆ ಮುಂದಿನ ವರ್ಷ ನೀಡಲಾಗುವುದು, ವಿಕಲಚೇತನರು ದೈಹಿಕವಾಗಿ ದುರ್ಬಲರಾಗಿರಬಹುದು ಆದರೆ ಮಾನಸಿಕವಾಗಿ ಅವರು ಇತರರಿಗಿಂತ ಸದೃಢವಾಗಿರುತ್ತಾರೆ, ಇವರ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಸಾರ್ವಜನಿಕರ ಕುಂದು ಕೊರತೆ ಆಲಿಸಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜನತಾ ದರ್ಶನ ಕಾರ್ಯಕ್ರಮ ನಡೆಸಲಾಗುತ್ತಿದೆ. ಉಡುಪಿ ಜಿಲ್ಲೆ ಯಲ್ಲಿ ಪ್ರತಿ ತಿಂಗಳ 25 ರಂದು ಜನತಾ ದರ್ಶನದ ಮೂಲಕ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕಾರ ಮಾಡಲಾಗುವುದು. ಸಾರ್ವಜನಿಕರು ತಮ್ಮ ಕುಂದಕೊರತೆಗಳನ್ನು ಜನತಾದರ್ಶನದ ಮೂಲಕ ಬಗೆಹರಿಸಿಕೊಳ್ಳುವಂತೆ ಸಚಿವರು ತಿಳಿಸಿದರು.

ಈ ವೇಳೆ ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ, ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಜಿ.ಪಂ. ಸಿಇಒ ಪ್ರಸನ್ನ.ಹೆಚ್, ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಉಪವಿಭಾಗಕಾರಿ ರಶ್ಮಿ ಮತ್ತಿತರರು ಇದ್ದರು.

 

 

 

ಕೃಪೆ:ಈಸಂಜೆ

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";