ಪಂಚಮಸಾಲಿ ಮೀಸಲಾತಿಗಾಗಿ ಪ್ರಾಮಾಣಿಕ ಕೆಲಸ ಮಾಡುತ್ತೇನೆ: ಲಕ್ಷ್ಮೀ ಹೆಬ್ಬಾಳ್ಕರ್​

ಉಮೇಶ ಗೌರಿ (ಯರಡಾಲ)

ಬೆಳಗಾವಿ : ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಸಿಗಬೇಕು ಎಂದು ಪಕ್ಷಾತೀತವಾಗಿ ಹೋರಾಟ ಮಾಡಿದ್ದೇವೆ. ಸಮಾಜದ ಮತ್ತು ಕ್ಷೇತ್ರದ ಜನರ ಆಶೀರ್ವಾದದಿಂದ ಮಂತ್ರಿಯಾಗಿದ್ದೇನೆ. ಈಗ ಸಮಾಜ ಮತ್ತು ಸರ್ಕಾರದ ನಡುವೆ ಕೊಂಡಿಯಾಗಿ ಕೆಲಸ ಮಾಡುವ ಅವಕಾಶ ಇದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಹೇಳಿದರು. ನಿಪ್ಪಾಣಿಯಲ್ಲಿ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟದಲ್ಲಿ ಭಾಗವಹಿಸಿ, ಸರ್ಕಾರ ಪರವಾಗಿ ಮನವಿ ಪತ್ರವನ್ನು ಸ್ವೀಕರಿಸಿ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ನಿನ್ನೆ ಮುಖ್ಯಮಂತ್ರಿಗಳ ಬಳಿ ಈ ಬಗ್ಗೆ ಮಾತನಾಡಿದ್ದೇನೆ, ಪಂಚಮಸಾಲಿ ಸಮಾಜದ ಮೀಸಲಾತಿ ಸಂಬಂಧ ಮನವಿ ಸ್ವೀಕರಿಸಲು ಬಂದಿದ್ದೇನೆ. ಸರ್ಕಾರದ ಪರವಾಗಿ ನಾನು ಮನವಿ ಸ್ವೀಕಾರ ಮಾಡುತ್ತೇನೆ ಎಂದು ಸಿಎಂ ಅವರಿಗೆ ತಿಳಿಸಿದ್ದೆ. ಅವರು ಹೋಗಿ ಬನ್ನಿ ಎಂದು ಹೇಳಿದ್ದರು. ನಾಳೆ ಮೀಟಿಂಗ್ ಇರುವುದರಿಂದ ಮೀಸಲಾತಿ ವಿಚಾರ ಚರ್ಚೆ ಮಾಡಲಾಗುವುದು. ಈ ಹಿಂದೆ ಸಮಾಜದ ಮುಖಂಡರ ನಿಯೋಗ ಸಿಎಂ ಹಾಗೂ ಡಿಸಿಎಂ ಅವರನ್ನು ಭೇಟಿ ಮಾಡಿ ಸಮಾಜದ ವಾದವನ್ನು ಮಂಡಿಸಿದೆ, ಅದನ್ನು ಆಸಕ್ತಿಯಿಂದ ಇಬ್ಬರು ಕೇಳಿದ್ದಾರೆ ಎಂದರು.

ಲೋಕಸಭಾ ಚುನಾವಣೆ ಒಳಗೆ ನಮಗೆ ಸರ್ಕಾರ ಮೀಸಲಾತಿ ನೀಡಲಿ:  ಬಸವ ಜಯಮೃತ್ಯುಂಜಯ ಸ್ವಾಮೀಜಿ

ಮತ್ತೊಂದೆಡೆ, ಕಳೆದ ಸರ್ಕಾರ ನಮ್ಮ ಹೋರಾಟಕ್ಕೆ ಮಣಿದು ಕೊನೆಗಳಿಗೆಯಲ್ಲಿ 2ಡಿ ಮೀಸಲಾತಿ ನೀಡಿತ್ತು. ಆದರೆ ಆ ಮೀಸಲಾತಿ ಗೊಂದಲ ಮೂಡಿಸಿತ್ತು. ಮತ್ತು ಇದರ ಬಗ್ಗೆ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಹೊಸದಾಗಿ ಕಾಂಗ್ರೆಸ್ ಸರ್ಕಾರ ನಮಗೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಇವತ್ತು ನಿಪ್ಪಾಣಿಯಿಂದ ಇಷ್ಟಲಿಂಗ ಪೂಜೆ ಮಾಡುವ ಮುಖಾಂತರ ಪ್ರತಿಭಟನೆಗೆ ಚಾಲನೆ ನೀಡಿದ್ದೇವೆ ಎಂದು ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ನಿಪ್ಪಾಣಿಯಲ್ಲಿ ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆಗಟ್ಟಿ ಇಷ್ಟಲಿಂಗ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಿನ ಸರ್ಕಾರ ರಚನೆಗೆ ಲಿಂಗಾಯತ ಪಂಚಮಸಾಲಿ ಸಮಾಜದವರು ಮತ ನೀಡಿದ್ದಾರೆ. ಕಳೆದ ಬಾರಿ ಸರ್ಕಾರ ತಡವಾಗಿ ಮೀಸಲಾತಿ ನೀಡಿದ್ದರಿಂದ ನಮ್ಮ ಸಮಾಜದ ಜನರು ಕಾಂಗ್ರೆಸ್​ಗೆ ಮತವನ್ನು ನೀಡಿದ್ದಾರೆ. ಇದರಿಂದ ಸರ್ಕಾರ ನಮಗೆ ಆದಷ್ಟು ಬೇಗನೆ ಮೀಸಲಾತಿ ನೀಡಬೇಕು. 2024ರ ಲೋಕಸಭಾ ಚುನಾವಣೆ ಒಳಗೆ ನಮಗೆ ಮುಖ್ಯಮಂತ್ರಿಗಳು ನ್ಯಾಯ ಒದಗಿಸಬೇಕು ಮತ್ತು ಎಲ್ಲಾ ಲಿಂಗಾಯಿತರಿಗೆ ಕೇಂದ್ರದಲ್ಲಿ ಒಬಿಸಿ ಮೀಸಲಾತಿ ನೀಡಬೇಕು. ರಾಜ್ಯ ಸರ್ಕಾರ ಈ ಕುರಿತು ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.

ನಾವು ರಾಜ್ಯದಲ್ಲಿ ಆರನೇ ಹಂತದ ಹೋರಾಟವನ್ನು ಪ್ರಾರಂಭ ಮಾಡಿದ್ದೇವೆ. ನಾವು ಯಾವುದೇ ರಾಜಕೀಯ ಪಕ್ಷಗಳನ್ನು ಗುರಿ ಮಾಡಿಕೊಂಡು ಹೋರಾಟ ಪ್ರಾರಂಭ ಮಾಡಿಲ್ಲ. ಆದಷ್ಟು ಬೇಗನೆ ಸಿಎಂ ನಮಗೆ ನ್ಯಾಯವನ್ನು ಒದಗಿಸಬೇಕು, ಒಂದು ವೇಳೆ ಕೊಡದಿದ್ದರೆ ನಾವು ಬೆಂಗಳೂರು ಮತ್ತು ಬೆಳಗಾವಿ ವಿಧಾನಸೌಧದಲ್ಲಿ ಇಷ್ಟಲಿಂಗ ಪೂಜೆ ಮಾಡುತ್ತೇವೆ. ಹಾಲು ಮತ ಸಮಾಜಕ್ಕೆ ಮೀಸಲಾತಿಗೆ ಸಿಎಂ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ನಮ್ಮ ಸಮಾಜಕ್ಕೆ ಮುಖ್ಯಮಂತ್ರಿ ಅವರು ಮೀಸಲಾತಿ ನೀಡಬೇಕು ಎಂದು ಹೇಳಿದರು.

 

 

 

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";