ಗಡಿ ರೇಖೆ ದಾಟುತ್ತಿದ್ದ ಮೂವರು ಉಗ್ರರ ಹತ್ಯೆ; ಪಾಕ್ ಸೇನೆಯಿಂದ ಒಬ್ಬನ ದೇಹಕ್ಕೆ ಕಾವಲು!

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಭಾರತದ ಗಡಿ ಒಳಗೆ ನುಸುಳುತ್ತಿದ್ದ ಮೂವರು ಉಗ್ರರನ್ನು ಭಾರತೀಯ ಸೇನೆ ಶನಿವಾರ ಹೊಡೆದುರುಳಿಸಿದೆ.ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಜಮ್ಮು ಮತ್ತು ಕಾಶ್ಮೀರದ ಉರಿ ವಲಯದ ಗಡಿ ನಿಯಂತ್ರಣ ರೇಖೆಯನ್ನು (ಎಲ್‌ಒಸಿ) ದಾಟಲು ಈ ಉಗ್ರರು ಪ್ರಯತ್ನಿಸುತ್ತಿದ್ದರು.

ಸೇನೆ, ಪೊಲೀಸ್ ಹಾಗೂ ಗುಪ್ತಚರ ದಳಗಳು ಬಾರಾಮುಲ್ಲಾ ಜಿಲ್ಲೆಯ ಉರಿ ವಲಯದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ್ದವು. ಮೂವರು ಉಗ್ರರು ಗಡಿ ದಾಟಿ ಒಳಗೆ ನುಸುಳುವುದನ್ನು ಪಡೆಗಳು ಗಮನಿಸಿದ್ದವು. ಕೂಡಲೇ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು.

ಮೂವರು ಉಗ್ರರ ಪೈಕಿ ಇಬ್ಬರು ಉಗ್ರರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದೆ. ಮೂರನೇ ದೇಹವನ್ನು ಪಡೆದುಕೊಳ್ಳುವ ಪ್ರಯತ್ನದ ವೇಳೆ ಪಾಕಿಸ್ತಾನಿ ಪಡೆಗಳು ಗುಂಡಿನ ದಾಳಿ ನಡೆಸುವ ಮೂಲಕ ಮಧ್ಯಪ್ರವೇಶ ಮಾಡಿರುವುದಾಗಿ ಅದು ಹೇಳಿದೆ.

ಉರಿ ವಲಯದಲ್ಲಿ ಕಾರ್ಯಾಚರಣೆ ಈಗಲೂ ಮುಂದುವರಿದಿದೆ ಎಂದು ಸೇನೆ ಮಾಹಿತಿ ನೀಡಿದೆ. “ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಗುಪ್ತಚರ ಸಂಸ್ಥೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ, ಬಾರಾಮುಲ್ಲಾದ ಉರಿ ವಲಯದಲ್ಲಿನ ಎಲ್‌ಒಸಿಯಲ್ಲಿ ಇಂದು ಬೆಳಗಿನ ಜಾವ ಒಳ ನುಸುಳುವ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ. ಒಳ ನುಸುಳಲು ಪ್ರಯತ್ನಿಸಿದ ಮೂವರು ಉಗ್ರರನ್ನು ಜಾಗ್ರತ ಪಡೆಗಳು ಎದುರಿಸಿದ್ದವು” ಎಂದು ಚಿನಾರ್ ಕಾರ್ಪ್ಸ್ ‘ಎಕ್ಸ್’ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದೆ

“ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಅವರ ದೇಹಗಳನ್ನು ವಶಕ್ಕೆ ಪಡೆಯಲಾಗಿದೆ. ಮೂರನೇ ಉಗ್ರನನ್ನು ಕೂಡ ಕೊಲ್ಲಲಾಗಿದೆ. ಆದರೆ ಆತನ ದೇಹವನ್ನು ವಶಪಡಿಸಿಕೊಳ್ಳುವಾಗ ಎಲ್‌ಒಸಿಯಲ್ಲಿ ಸಮೀಪದಲ್ಲಿದ್ದ ಪಾಕಿಸ್ತಾನಿ ನೆಲೆಯಿಂದ ಗುಂಡಿನ ದಾಳಿ ಮೂಲಕ ಅಡ್ಡಿಪಡಿಸಲಾಗಿದೆ. ಕಾರ್ಯಾಚರಣೆ ಪ್ರಗತಿಯಲ್ಲಿದೆ” ಎಂದು ಸೇನೆ ಹೇಳಿದೆ.

ಅನಂತ್‌ನಾಗ್ ಜಿಲ್ಲೆಯಲ್ಲಿ ನಡೆಯುತ್ತಿರುವ ಮತ್ತೊಂದು ಎನ್‌ಕೌಂಟರ್, ಶನಿವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಉಗ್ರರು ಎತ್ತರದ ಬೆಟ್ಟವೊಂದರ ಗುಹೆಯ ಒಳಗೆ ಅವಿತಿಟ್ಟುಕೊಂಡಿದ್ದಾರೆ. ಇಲ್ಲಿಂದ ಭಾರಿ ಸ್ಫೋಟದ ಸದ್ದುಗಳು ಕೇಳಿಬರುತ್ತಿವೆ. ಉಗ್ರರನ್ನು ಪತ್ತೆ ಮಾಡಲು ಡ್ರೋನ್ ಸರ್ವೇಕ್ಷಣೆಯನ್ನು ನಡೆಸಲಾಗುತ್ತಿದೆ.

ಈ ಕಾರ್ಯಾಚರಣೆಯಲ್ಲಿ ಭಾರತವು ಈವರೆಗೂ ಒಟ್ಟು ನಾಲ್ವರು ಯೋಧರನ್ನು ಕಳೆದುಕೊಂಡಿದೆ. ಈ ಪ್ರದೇಶದಲ್ಲಿ ಮತ್ತಷ್ಟು ಉಗ್ರರಿದ್ದು, ಅವರಿಗಾಗಿ ಸೇನಾ ಪಡೆಗಳು ಶೋಧ ನಡೆಸುತ್ತಿವೆ.

 

 

 

ಕೃಪೆ:ವಿಕ

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";