ಧಾರವಾಡ:ಇತ್ತಿಚೇಗೆ ಅಗಲಿದ ಖ್ಯಾತ ಕಲಾವಿದ ಬಸಲಿಂಗಯ್ಯ ಹಿರೇಮಠ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಧಾರವಾಡದಲ್ಲಿರುವ ಅವರ ನಿವಾಸದಲ್ಲಿ ಅವರ ಪತ್ನಿ ಶ್ರೀಮತಿ ವಿಶ್ವೇಶ್ವರಿ ಹಿರೇಮಠ ಹಾಗೂ ಪುತ್ರ ಭೂಷಣ ಹಿರೇಮಠ ಇವರಿಗೆ ಸಾಂತ್ವನ ಹೇಳಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ, ಬೆಳಗಾವಿ ಜಿಲ್ಲಾ ಕಸಾಪ ಸಹ ಮಾಧ್ಯಮ ಪ್ರತಿನಿಧಿ ಆಕಾಶ್ ಅರವಿಂದ ಥಬಾಜ, ಬೈಲಹೊಂಗಲ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎನ್.ಆರ್. ಠಕ್ಕಾಯಿ, ಖಾನಾಪೂರ ತಾಲ್ಲೂಕು ಕಸಾಪ ಗೌರವ ಕಾರ್ಯದರ್ಶಿಗಳಾದ ಕಿರಣ ಸಾವಂತನವರ, ಧಾರವಾಡದ ವಿದ್ಯಾವರ್ಧಕ ಸಂಘದ ಅಧೀಕ್ಷಕರಾದ ಎನ್.ಎಸ್.ಕಾಶಪ್ಪನವರ ಉಪಸ್ಥಿತರಿದ್ದರು.
ಮೂಲತಃ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಬೈಲೂರು ಗ್ರಾಮದವರಾದ ಹಿರೇಮಠ ಅವರು ಧಾರವಾಡದಲ್ಲಿ ಜಾನಪದ ಸಂಶೋಧನಾ ಸಂಸ್ಥೆ ಸ್ಥಾಪಿಸಿ ದಾಸ, ಶರಣ, ತತ್ವಪದಗಳು, ಬಯಲಾಟ ಹೀಗೆ ಎಲ್ಲ ಪ್ರಕಾರದ ಸಾಹಿತ್ಯವನ್ನು ವಿದೇಶದಲ್ಲೂ ಪ್ರಚಾರ ಮಾಡಿದವರು.ಇವರ ರಚನೆಯ ರಂಗರೂಪ ‘ಶ್ರೀಕೃಷ್ಣ ಪಾರಿಜಾತ’ ದೇಶ-ವಿದೇಶಗಳಲ್ಲಿ ಹಲವಾರು ಪ್ರಯೋಗಗಳನ್ನು ಕಂಡಿದೆ. ಅದ್ಭುತ ಕಂಠದಿಂದ ಜನಮನಗೆದ್ದ ಹಿರೇಮಠ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಅಭಿನವ ಶರೀಫ್ ಅಂತಹ ಅನೇಕ ಪುರಸ್ಕಾರಗಳು ಲಭಿಸಿವೆ.