ಪೊಲೀಸ್‌ ಠಾಣೆಯಲ್ಲೇ ಅತಿ ಹೆಚ್ಚು ಮಾನವ ಹಕ್ಕುಗಳ ಉಲ್ಲಂಘನೆ: ನ್ಯಾಯಮೂರ್ತಿ ರಮಣ ಆತಂಕ

ಉಮೇಶ ಗೌರಿ (ಯರಡಾಲ)

ನವದೆಹಲಿ: ದೆಹಲಿಯ ವಿಜ್ಞಾನ ಭವನದಲ್ಲಿ ಇತ್ತೀಚೆಗೆ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ನಡೆದ ಸಮಾರಂಭದಲ್ಲಿ ನ್ಯಾಯಮೂರ್ತಿ ಎನ್ ವಿ ರಮಣ ಮಾತನಾಡಿ ಮಾನವ ಹಕ್ಕುಗಳು ಮತ್ತು ಘನತೆ ಬಹಳ ಪವಿತ್ರವಾದವು. ಆದರೆ ಭಾರತದ ಪೊಲೀಸ್‌ ಠಾಣೆಗಳಲ್ಲೇ ಅತಿ ಹೆಚ್ಚು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

“ಕಸ್ಟಡಿ ಚಿತ್ರಹಿಂಸೆ ಮತ್ತು ಇತರ ಆರಕ್ಷಕರ ದೌರ್ಜನ್ಯಗಳು ನಮ್ಮ ದೇಶದಲ್ಲಿ ಇನ್ನೂ ಚಾಲ್ತಿಯಲ್ಲಿರುವ ಸಮಸ್ಯೆಗಳು” ಎಂದು ಹೇಳಿದ್ದಾರೆ.

“ಸಾಂವಿಧಾನಿಕ ಘೋಷಣೆಗಳು ಮತ್ತು ಖಾತರಿಗಳ ಹೊರತಾಗಿಯೂ, ಪೋಲಿಸ್ ಠಾಣೆಗಳಲ್ಲಿ ಪರಿಣಾಮಕಾರಿ ಕಾನೂನು ಪ್ರಾತಿನಿಧ್ಯದ ಕೊರತೆ ಎದ್ದು ಕಾಣುತ್ತಿದೆ. ಹಾಗಾಗಿ ಬಂಧಿತ ವ್ಯಕ್ತಿಗಳಿಗೆ ದೊಡ್ಡ ಹಾನಿಯಾಗಿದೆ. ಅತಿ ಬೇಗನೆ ತೆಗೆದುಕೊಳ್ಳುವ ನಿರ್ಧಾರಗಳು ನಂತರ ಆರೋಪಿಯು ತನ್ನನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯವನ್ನು ನಿರ್ಧರಿಸುತ್ತದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚಿನ ಬಹುತೇಕ ವರದಿಗಳ ಪ್ರಕಾರ ಸೌಲಭ್ಯವುಳ್ಳ ವರ್ಗ ಸಹ ಪೊಲೀಸರ ಥರ್ಡ್ ಗ್ರೇಡ್ ಚಿಕಿತ್ಸೆಯಿಂದ (ಪೊಲೀಸರಿಂದ ಹಲ್ಲೆ, ಕಿರುಕುಳ) ತಪ್ಪಿಸಿಕೊಳ್ಳಲು ಅಸಾಧ್ಯ ಎಂದು ಸಿಜೆಐ ಹೇಳಿದ್ದಾರೆ.

ಕಾನೂನು ಮಾಹಿತಿ, ಉಚಿತ ಕಾನೂನು ನೆರವು, ಸಾಂವಿಧಾನಿಕ ಹಕ್ಕಿನ ಬಗ್ಗೆ ಮಾಹಿತಿ ಪ್ರಸಾರ ಮಾಡುವುದರ ಮೂಲಕ ಪೋಲಿಸರ ಅತಿರೇಕಗಳನ್ನು ನಿಯಂತ್ರಣದಲ್ಲಿ ಇಡಬಹುದು ಎಂದರು.

ಪ್ರತಿ ಪೊಲೀಸ್ ಠಾಣೆಗಳಲ್ಲಿ ಅಥವಾ ಕಾರಾಗೃಹಗಳಲ್ಲಿ ಪ್ರದರ್ಶನ ಫಲಕಗಳು ಮತ್ತು ಬೋರ್ಡ್‌ಗಳನ್ನು ಅಳವಡಿಸಬೇಕು. ಕಾನೂನು ಸೇವೆಗಳ ಪ್ರಾಧಿಕಾರವು ಕೂಡ ದೇಶಾದ್ಯಂತ ಪೊಲೀಸ್ ಅಧಿಕಾರಿಗಳನ್ನು ಸಂವೇದನಾಶೀಲರನ್ನಾಗಿ ಮಾಡುವ ಕಾರ್ಯಾಗಾರಗಳನ್ನ ಸಕ್ರಿಯವಾಗಿ ನಡೆಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

ಬ್ರಿಟಿಷರ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪರವಾಗಿ ಆರಂಭಿಸಿದ, ಆರೋಪಿಗಳ ಪರ ಕಾನೂನು ಸೇವೆಗಳ ಸುದೀರ್ಘ ಸಂಪ್ರದಾಯವನ್ನು ಇನ್ನೂ ಭಾರತ ಹೊಂದಿದೆ. “ನ್ಯಾಯಾಂಗವು ಒಂದು ಸಂಸ್ಥೆಯಾಗಿ ನಾಗರಿಕರ ನಂಬಿಕೆಯನ್ನು ಗಳಿಸಲು ಬಯಸಿದರೆ, ಅವರಿಗಾಗಿ ನಾವು ಅಸ್ತಿತ್ವದಲ್ಲಿ ಇದ್ದೇವೆ ಎಂದು ಪ್ರತಿಯೊಬ್ಬರಿಗೂ ಭರವಸೆ ಮೂಡಿಸಬೇಕು. ದೀರ್ಘಕಾಲದಿಂದ, ದುರ್ಬಲ ಜನಸಮುದಾಯಗಳು ನ್ಯಾಯಾಂಗ ವ್ಯವಸ್ಥೆಯಿಂದ ಹೊರಗುಳಿದಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.

ನಾವು ಕಾನೂನಿನ ನಿಯಮದಿಂದ ಆಳಲ್ಪಡುವ ಸಮಾಜವಾಗಿ ಉಳಿಯಲು ಬಯಸಿದರೆ, ಹೆಚ್ಚಿನ ಸವಲತ್ತು ಮತ್ತು ಅತ್ಯಂತ ದುರ್ಬಲರ ನಡುವೆ ನ್ಯಾಯದ ಲಭ್ಯತೆಯ ಅಂತರವನ್ನು ಕಡಿಮೆ ಮಾಡುವುದು ಅತ್ಯಗತ್ಯ. ಮುಂಬರುವ ಎಲ್ಲಾ ಸಮಯದಲ್ಲೂ, ನಮ್ಮ ರಾಷ್ಟ್ರದಲ್ಲಿ ಚಾಲ್ತಿಯಲ್ಲಿರುವ ಸಾಮಾಜಿಕ-ಆರ್ಥಿಕ ವೈವಿಧ್ಯತೆಯ ಅಸಮಾನತೆಯು ಹಕ್ಕುಗಳ ನಿರಾಕರಣೆಗೆ ಎಂದಿಗೂ ಕಾರಣವಾಗಿರುವುದಿಲ್ಲ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು “ಎಂದು ಮುಖ್ಯ ನ್ಯಾಯಮೂರ್ತಿ ರಮಣ ಹೇಳಿದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";