ಬೆಳಗಾವಿಯಲ್ಲಿ ಭಾರತ–ಜಪಾನ್‌ ಜಂಟಿ ಸಮರಾಭ್ಯಾಸ

ಭಾರತ ಮತ್ತು ಜಪಾನ್‌ ಸೇನಾ ಸಿಬ್ಬಂದಿ
ಉಮೇಶ ಗೌರಿ (ಯರಡಾಲ)

ಬೆಳಗಾವಿ: ಭಾರತ ಮತ್ತು ಜಪಾನ್‌ ನಡುವಿನ ಜಂಟಿ ಸಮರಾಭ್ಯಾಸ ‘ಧರ್ಮ ಗಾರ್ಡಿಯನ್‌–2021’ 3ನೇ ಆವೃತ್ತಿಯನ್ನು ಇಲ್ಲಿನ ಮರಾಠಾ ಲಘು ಪದಾತಿದಳ (ಎಂಎಲ್‌ಐಆರ್‌ಸಿ)ದಲ್ಲಿ 2022ರ ಫೆ.27ರಿಂದ ಮಾರ್ಚ್‌ 12ರವರೆಗೆ ಹಮ್ಮಿಕೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ ಅಂತಿಮ ಕಾರ್ಯಯೋಜನೆ ಸಿದ್ಧಪಡಿಸುವುದಕ್ಕಾಗಿ ನಡೆದ ಮೂರು ದಿನಗಳ ಸಭೆ ಮತ್ತು ಸ್ಥಳ ಪರಿಶೀಲನೆ ಕಾರ್ಯಕ್ರಮದಲ್ಲಿ ಜಪಾನ್ ಹಾಗೂ ಭಾರತೀಯ ಸೇನೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

‘ವಾರ್ಷಿಕ ಜಂಟಿ ತರಬೇತಿ ಕಾರ್ಯಕ್ರಮವಾದ ‘ಧರ್ಮ ಗಾರ್ಡಿಯನ್‌’ ಅನ್ನು ದೇಶದಲ್ಲಿ 2018ರಿಂದ ಹಮ್ಮಿಕೊಳ್ಳಲಾಗುತ್ತಿದೆ. ಜಾಗತಿಕ ಭಯೋತ್ಪಾದನೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಉಭಯ ರಾಷ್ಟ್ರಗಳು ಎದುರಿಸುತ್ತಿರುವ ಭದ್ರತಾ ಸವಾಲುಗಳ  ಹಿನ್ನೆಲೆಯಲ್ಲಿ ಈ ಅಭ್ಯಾಸ ಕಾರ್ಯಕ್ರಮವು ಬಹಳ ಮಹತ್ವ ಪಡೆದುಕೊಂಡಿದೆ ಮತ್ತು ನಿರ್ಣಾಯಕವೂ ಎನಿಸಿದೆ. ಅರಣ್ಯ ಹಾಗೂ ನಗರದ ಸನ್ನಿವೇಶದಲ್ಲಿ ಭಯೋತ್ಪಾದನೆ ನಿಗ್ರಹ ಚಟುವಟಿಕೆಗಳ ಕಾರ್ಯಾಚರಣೆ ಕೈಗೊಳ್ಳಲು ಜಂಟಿ ತರಬೇತಿಯನ್ನು ಇಲ್ಲಿ ಪಡೆದುಕೊಳ್ಳಲಾಗುವುದು’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಭಾರತ ಮತ್ತು ಜಪಾನ್‌ ಸೇನಾ ಸಿಬ್ಬಂದಿ

ಭಾರತೀಯ ಸೇನೆ ಹಾಗೂ ಜಪಾನ್‌ ಸೇನೆ ನಡುವಿನ ರಕ್ಷಣಾ ಸಹಕಾರ ಮಟ್ಟ ಮತ್ತು ಎರಡೂ ರಾಷ್ಟ್ರಗಳ ಮಧ್ಯದ ದ್ವಿಪಕ್ಷೀಯ ಸಂಬಂಧಗಳನ್ನು ವೃದ್ಧಿಸುವ ಉದ್ದೇಶ ಅಭ್ಯಾಸ ಕಾರ್ಯಕ್ರಮದ್ದಾಗಿದೆ’ ಎಂದು ಮಾಹಿತಿ ನೀಡಲಾಗಿದೆ.

‘ನವದೆಹಲಿಯ ಜಪಾನ್‌ ರಾಯಭಾರ ಕಚೇರಿಯ(ಡಿಫೆನ್ಸಿ ಅಟ್ಯಾಚಿ) ಲೆಫ್ಟಿನೆಂಟ್ ಕರ್ನಲ್‌ ಯೂಝೋ ಮಸೂಡ ಅವರೊಂದಿಗೆ ವಿವಿಧ ಶ್ರೇಣಿಯ ಐವರು ಅಧಿಕಾರಿಗಳು ಜಪಾನ್‌ ನಿಯೋಗದಲ್ಲಿದ್ದರು. ನ.30ರಂದು ಇಲ್ಲಿಗೆ ಬಂದಿದ್ದ ಅವರು ಅಭ್ಯಾಸ ಕಾರ್ಯಕ್ರಮವನ್ನು ಸುಗಮವಾಗಿ ನಡೆಸಲು ಅಗತ್ಯವಾದ ಸಿದ್ಧತೆಯ ಕುರಿತು ಭಾರತೀಯ ಸೇನೆಯ ಅಧಿಕಾರಿಗಳೊಂದಿಗೆ ಮೂರು ದಿನಗಳವರೆಗೆ ಸಮಗ್ರವಾಗಿ ಚರ್ಚಿಸಿದರು. ಮುಂಬರುವ ಅಭ್ಯಾಸದ ಕಾರ್ಯಸೂಚಿಯನ್ನು ಅಂತಿಮಗೊಳಿಸಿದರು. ಜಪಾನ್‌ ನಿಯೋಗವು ಶುಕ್ರವಾರ ಮರಳಿತು’ ಎಂದು ತಿಳಿಸಲಾಗಿದೆ.

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";