ಹಾಸ್ಟೆಲ್ ಒಂದರಲ್ಲಿ ದಿನವೂ ಬೆಳಿಗ್ಗೆ ಉಪ್ಪಿಟ್ಟ!ರಾಷ್ಟ್ರೀಯ ಆಹಾರವಾಗಿ ಘೋಷಿಸಿದ ವಾರ್ಡನ್.‌ (ನೀತಿ ಪಾಠ)

ಕಾಲ್ಪನಿಕ ಚಿತ್ರ

ನೂರು ವಿಧ್ಯಾರ್ಥಿಗಳಿದ್ದ ಹಾಸ್ಟೆಲ್ ಒಂದರಲ್ಲಿ ದಿನವೂ ಬೆಳಿಗ್ಗೆ ಉಪ್ಪಿಟ್ಟಿನ ಸಮಾರಾಧನೆ ನಡೆಯುತ್ತಿತ್ತು. ಒಂದುದಿನ ತಿಂಡಿಯ ಕುರಿತು ಅಸಮಾದಾನ ಭುಗಿಲೆದ್ದಿತು. ಉಪ್ಪಿಟ್ಟು ಪ್ರಿಯರಾಗಿದ್ದ 20 ಜನ, ದಿನವೂ ಉಪ್ಪಿಟ್ಟೇ ಇರಲಿ ಅಂತಾ ಬೇಡಿಕೆಯಿಟ್ಟರೆ, ಉಳಿದ 80 ಜನ ದಿನದಿನವೂ ಬೇರೆ ತಿಂಡಿ ಬೇಕು ಅಂತಾ ಕೂತರು. ದಿನದಿನವೂ ಬೇರೆ ಕೊಡಲಾಗುವುದಿಲ್ಲ. ತಿಂಗಳಿಗೊಂದು ಬಾರಿ ಮಾಡಬಹುದು ಅಂತಾ ವಾರ್ಡನ್ ಹೇಳಿದರು.

ಉಪ್ಪಿಟ್ಟಿನವರು ಆಗಲೂ “ಬೇಡ ಬೇಡ ಉಪ್ಪಿಟ್ಟೇ ಇರಲಿ” ಅಂತಾ ಹಠಹಿಡಿದು ಕೂತಿದ್ದರು. ಉಳಿದವರು ಅದೆಲ್ಲಾ ಆಗಲ್ಲ. ಬೇರೆ ತಿಂಡಿ ಬೇಕು ಅಂತಾ ಹಟ ಹಿಡಿದರು.

ವಾರ್ಡನ್ “ನಾವು ಸಂವಿಧಾನಯುಕ್ತ ಭವ್ಯ ಭಾರತದ ಪ್ರಜಾಪ್ರಭುತ್ವದ ಪ್ರಜೆಗಳು. ಎಲ್ಲರಿಗೂ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವಿದೆ. ವೋಟಿಂಗ್ ಮಾಡಿಸಿ ಮೆಜಾರಿಟಿ ನೋಡೋಣ ಎಂದರು”. ಇಪ್ಪತ್ತುಜನ “ಉಪ್ಪಿಟ್ಟಿರುವಾಗ ಇವೆಲ್ಲಾ ಯಾಕೆ?” ಅಂತಾ ಕುಸುಗುಟ್ಟಿದರು. ಉಳಿದ 80 ಜನ “ವೋಟಿಂಗ್ ಮಾಡಿ ಪ್ರಜಾಸತ್ತಾತ್ಮಕವಾಗಿ ನಿಮಗೆ ಬುದ್ಧಿ ಕಲಿಸ್ತೀವಿ” ಅಂತಾ ಬುಸುಗುಟ್ಟಿದರು.

ಮರುದಿನ ಮತದಾನ. ಉಪ್ಪಿಟ್ಟುಪ್ರಿಯ ಇಪ್ಪತ್ತು ಜನರು ಮೊದಲೇ ನಿರ್ಧರಿಸಿದಂತೆ ಉಪ್ಪಿಟ್ಟಿಗೇ ಮತ ಹಾಕಿದರು. ಉಳಿದ ಎಂಬತ್ತು ಜನರ ಮತಗಳು ಹೀಗಿದ್ದವು:ಮಸಾಲೆ ದೋಸೆ – 18 ಜನ,ಆಲೂ ಪರಾಠ – 16 ಜನ, ಪೂರಿ ಸಾಗು – 14 ಜನ ,ಮ್ಯಾಗಿ – 12 ಜನ, ಇಡ್ಲಿ ಸಾಂಬಾರ್ – 10 ಜನ,ಟೋಸ್ಟ್ ಆಮ್ಲೆಟ್ – 10 ಜನ.

ಬಹುಮತ ಉಪ್ಪಿಟ್ಟಿಗೇ ಬಂದಿದ್ದರಿಂದ, ಪ್ರಜಾ ಅಭಿಪ್ರಾಯಗಳಿಗನುಗುಣವಾಗಿ, ಅದನ್ನೇ ಹಾಸ್ಟೆಲ್ಲಿನ ರಾಷ್ಟ್ರೀಯ ಆಹಾರವಾಗಿ ಘೋಷಿಸಿ ಮುಂದುವರೆಸುವುದೆಂದು ತೀರ್ಮಾನಿಸಲಾಯಿತು.

ನೀತಿ: ಎಲ್ಲಿಯವರೆಗೆ 80% ಜನ ತಮ್ಮ ಸ್ವಾರ್ಥವನ್ನೇ ನೋಡಿಕೊಂಡು ಒಡೆದು ಹರಿದು ಹಂಚಿ ಕೂತಿರುತ್ತಾರೋ, 20% ಜನರೇ ನಿಮ್ಮ ಜೀವನವನ್ನು ನಿರ್ಧರಿಸುತ್ತಾರೆ. ನಿಮಗೇ ಉಪ್ಪಿಟ್ಟೇ ಗತಿ. ನೆನಪಿರಲಿ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";