ಬೆಳಗಾವಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷನ ಮೇಲೆ ಹಾಗೂ ಜಿಲ್ಲಾ ಸಂಘಟನೆ ವಿರುದ್ಧ ಹಲವಾರು ಭ್ರಷ್ಟಾಚಾರದ ಆರೋಪಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು,ಅದರ ಸತ್ಯಾಸತ್ಯತೆ ತನಿಖೆ ಮಾಡಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಶಿಕ್ಷಕರ ವಲಯದಲ್ಲಿ ಮಾತುಗಳು ಕೇಳಿಬರುತ್ತಿರುವ ಪರಿಸ್ಥಿತಿಯಲ್ಲಿ ಇನ್ನೊಂದು ಘಟನೆಗೆ ಸಾಕ್ಷಿಯಾಗುತ್ತಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ.
2022 ಅಕ್ಟೋಬರ್.೦1 ರಂದು ಶನಿವಾರ ಅಂದರೆ ಇಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು.ಬೆಳಗಾವಿ ಜಿಲ್ಲಾ ನಗರ ಘಟಕದ ಸರ್ವ ಸದಸ್ಯರ ಮಹಾಸಭೆ ಹಾಗೂ ರಾಜ್ಯ ಮಟ್ಟದ ಆದರ್ಶ ಶಿಕ್ಷಕರ ಪ್ರಶಸ್ತಿ ಪಡೆದ ಸುಶೀಲಾ ಗುರವ ಅವರ ಅಭಿನಂದನಾ ಕಾರ್ಯಕ್ರಮ ಬೆಳಗಾವಿ ವೀರಭದ್ರ ನಗರದ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ನೆಡೆಯುತ್ತಿದೆ. ಇದು ನಮ್ಮ ಬೆಳಗಾವಿ ಜಿಲ್ಲೆಗೆ ಖುಷಿ ವಿಷಯ.
ಆದರೆ,ವಿಪರ್ಯಾಸ ಏನಂದರೆ…ಈ ಕಾರ್ಯಕ್ರಮದಲ್ಲಿ ಭ್ರಷ್ಟಾಚಾರದ ಕಳಂಕಿತ ಸರಕಾರಿ ನೌಕರರಾದ ಮಾಜಿ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಹಾಗೂ ನಿಕಟ ಪೂರ್ವ ರಾಜ್ಯ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಯಾದ ಜಗದೀಶ ಪಾಟೀಲ ಮತ್ತು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಯಕುಮಾರ್ ಹೆಬಳಿ ವಿಶೇಷ ಅತಿಥಿಗಳಾಗಿ ಭಾಗವಹಿಸುವ ಕಾರ್ಯಕ್ರಮದಲ್ಲಿ, ಉದ್ಘಾಟಕರಾಗಿ ಆಗಮಿಸುತ್ತಿರುವ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಹಾಗೂ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಸೇರಿದಂತೆ ಮುಖ್ಯ ಅತಿಥಿಗಳಾಗಿ ಎಂ.ಎಂ. ಸಿಂಧೂರ ಸಹ ನಿರ್ದೇಶಕರು ಹಾಗೂ ಪ್ರಾಚಾರ್ಯರು ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಬೆಳಗಾವಿ. ಉಪನಿರ್ದೇಶಕರಾದ ಬಿ ಎಂ ನಲತವಾಡ,ಡಯಟ್ ಪ್ರಾಚಾರ್ಯರಾದ ಆರ್ ಪಿ ಜುಟ್ಟನವರ, ಡಿವೈಪಿಸಿ ಬಸವರಾಜ ಮಿಲ್ಲಾನಟ್ಟಿ. ನಗರ ಕ್ಷೇತ್ರ ಶಿಕ್ಷಣಾಧಿಕಾರಿ ವೈ ಜಿ ಭಜಂತ್ರಿ. ಕ್ಷೇತ್ರ ಸಮನ್ವಯಾಧಿಕಾರಿ ಐ ಡಿ ಹಿರೇಮಠ. ಸೇರಿದಂತೆ ನಿವೃತ್ತ ಶಿಕ್ಷಣಾಧಿಕಾರಿ ಡಿ ಎಮ್ ದಾನೋಜ ಅವರು ಒಂದೇ ವೇದಿಕೆ ಹಂಚಿಕೊಳ್ಳಲುತ್ತಿರುವುದು ಶಿಕ್ಷಕರ ವಲಯದಲ್ಲಿ ಅಚ್ಚರಿ ಮೂಡಿಸಿದೆ.
ಶಿಕ್ಷಕರ ಅಥವಾ ನೌಕರರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭ್ರಷ್ಟಾಚಾರ ಮಾಡುತ್ತಿರುವುದರ ಬಗ್ಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಷಯ ಹರಿದಾಡುತ್ತಿವೆ.ಅದರ ಸತ್ಯಾಸತ್ಯತೆ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕಾದ ಅಧಿಕಾರಿ ವರ್ಗ ಈ ಎಲ್ಲವನ್ನು ಗಮನಿಸಿಯೂ ಕೊಡ ಜಾಣಕುರುಡರಂತೆ ವರ್ತಿಸುತ್ತಿರುವುದು ಮತ್ತಷ್ಟು ನೌಕರರಲ್ಲಿ ಸಂಶಯಕ್ಕೆ ಎಡೆಮಾಡಿಕೊಡುತ್ತಿದೆ.
ಸಂಘದ ಕಾರ್ಯಕ್ರಮದಲ್ಲಿ ಅದು ಕಳಂಕಿತ ನೌಕರರ ಜೊತೆಗೆ ವೇದಿಕೆ ಹಂಚಿಕೊಳ್ಳುತ್ತಿರುವ ಅಧಿಕಾರಿಗಳ ನಡೆ ಭ್ರಷ್ಟಾಚಾರಕ್ಕೆ ಮತ್ತಷ್ಟು ಕುಮ್ಮಕ್ಕು ನೀಡುತ್ತಿದ್ದಾರೇ ಎಂದೆನಿಸುತ್ತದೆ ಎಂದು ಶಿಕ್ಷಕರು ಮತ್ತು ನೌಕರರು ಮಾತನಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಇದು ಸರಕಾರಿ ಕಾರ್ಯಕ್ರಮನೋ ಅಥವಾ ಸಂಘದ ಕಾರ್ಯಕ್ರಮನೋ ಒಂದು ತಿಳಿಯದಂತಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.