ಹೊಸದಿಲ್ಲಿ: ವಿಚಾರಣೆ ಮುಗಿಯಲು ಬಹಳಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ತಿಳಿದಿದ್ದರೂ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿಗಳನ್ನು ವರ್ಷಗಟ್ಟಲೆ ಜೈಲಿಗೆ ಹಾಕುವ ಅನಿವಾರ್ಯತೆಯ ಕುರಿತು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ೩೫ ಕೆ.ಜಿ ಗಾಂಜಾದೊಂದಿಗೆ ಸಿಕ್ಕಿ ಬಿದ್ದಿದ್ದ ವ್ಯಕ್ತಿಗೆ ಜಾಮೀನು ನೀಡುವ ವೇಳೆ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ಪೀಠ ಈ ಮೇಲಿನ ಹೇಳಿಕೆ ನೀಡಿದೆ.
ಆ ವ್ಯಕ್ತಿ ವರ್ಷಗಳಿಂದ ಜೈಲಿನಲ್ಲಿದ್ದಾನೆ ಮತ್ತು ಮುಂದಿನ ದಿನಗಳಲ್ಲಿ ವಿಚಾರಣೆ ಪೂರ್ಣಗೊಳ್ಳುವ ಸಾಧ್ಯತೆಯಿಲ್ಲ ಎಂದು ನ್ಯಾಯಾಲಯ ಈ ವೇಳೆ ಹೇಳಿದೆ. “ನೀವು ಜನರನ್ನು ವರ್ಷಗಳ ಕಾಲ ಜೈಲಿಗೆ ಹಾಕುತ್ತಿದ್ದರೆ ವಿಚಾರಣೆಯ ಅಗತ್ಯವೇನು?” ಎಂದು ಮುಖ್ಯ ನ್ಯಾಯಮೂರ್ತಿ ರಮಣ ಪ್ರಶ್ನಿಸಿದರು.
ಅಕ್ಟೋಬರ್ 16, 2017ರಿಂದ ಆರೋಪಿಯು ಬಂಧನದಲ್ಲಿದ್ದು, ಜೈಲಿನಲ್ಲಿ ಈಗಾಗಲೇ ನಾಲ್ಕು ವರ್ಷಗಳನ್ನು ಕಳೆದಿದ್ದಾನೆ ಎಂದು ನ್ಯಾಯಾಲಯವು ಬೆಟ್ಟು ಮಾಡಿತು. ಆರೋಪಿಯು 66 ವರ್ಷದ ಹಿರಿಯ ನಾಗರಿಕನಾಗಿದ್ದು, ವಿಚಾರಣೆಯ ಅಂತ್ಯದವರೆಗೂ ಆತ ಕಂಬಿಯ ಹಿಂದೆ ಸಮಯ ಕಳೆಯಲು ಸಾಧ್ಯವಿಲ್ಲ ಎಂದು ಪೀಠವು ಹೇಳಿದೆ.
“ವಿಚಾರಣೆಯಿಲ್ಲದೇ ಆತನನ್ನು ಎಷ್ಟು ವರ್ಷ ಜೈಲಿನಲ್ಲಿಡಬಹುದು? ಎಂದು ಸಿಜೆಐ ಅರಕಾರದ ಪರ ವಕೀಲರನ್ನು ಕೇಳಿದರು. ವಕೀಲರು ʼಐದುʼ ಎಂದು ಹೇಳಿದಾಗ, ಐದು ಏಕೆ? ಆತನನ್ನು ಹತ್ತು ವರ್ಷ ಜೈಲಿನಲ್ಲಿರಿಸಿ. ನಂತರ ವಿಚಾರಣೆಯ ಅಗತ್ಯವೇ ಇಲ್ಲ. ಇದೇ ವೇಗದಲ್ಲಿ ಆತ ಜೈಲಿನಲ್ಲೇ ಮುಂದುವರಿದರೆ ವಿಚಾರಣೆಯಿಂದ ಬದುಕುಳಿಯುವುದು ಅನುಮಾನಾಸ್ಪದವಾಗಿದೆ. ಅವರಿಗೆ ಈಗಾಗಲೇ 66 ವರ್ಷ. ನೀವು ನಿಮ್ಮ ವಿಚಾರಣೆ ಮುಗಿಸುವ ಹೊತ್ತಿಗೆ ಆತ ಅಲ್ಲಿರುವುದಿಲ್ಲ” ಎಂದು ಸಿಜೆಐ ಹೇಳಿಕೆ ನೀಡಿದ್ದಾರೆ.
ಕೋಲ್ಕತ್ತ ಹೈಕೋರ್ಟ್ ಕಳೆದ ವರ್ಷ ಆರೋಪಿಗೆ ಜಾಮೀನು ನೀಡಲು ನಿರಾಕರಿಸಿದ್ದರಿಂದ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸದ್ಯ ಸುಪ್ರೀಂ ಕೋರ್ಟ್ ಆರೋಪಿಗೆ ಜಾಮೀನು ನೀಡಿದೆ.