ಸುದ್ದಿ ಸದ್ದು ನ್ಯೂಸ್
ರಾಯಚೂರು: ಇಲ್ಲಿನ ಜಿಲ್ಲಾ ನ್ಯಾಯಾಧೀಶರು ಅಂಬೇಡ್ಕರ್ ಫೋಟೋ ತೆಗೆಸಿ ಧ್ವಜಾರೋಹಣ ಮಾಡಿರುವ ಘಟನೆ ಜಿಲ್ಲಾ ನ್ಯಾಯಾಲಯದಲ್ಲಿ ನಡೆದಿದೆ.
ಇಂದು ಹಮ್ಮಿಕೊಳ್ಳಲಾಗಿದ್ದ 73ನೇ ಗಣರಾಜ್ಯೋತ್ಸವದ ವೇಳೆ ರಾಷ್ಟ್ರಪಿತ ಗಾಂಧೀಜಿ ಭಾವಚಿತ್ರದ ಜೊತೆಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಫೋಟೋವನ್ನು ಇರಿಸಲಾಗಿತ್ತು. ಆದರೆ ಕಾರ್ಯಕ್ರಮದ ವೇಳೆ ಪುಷ್ಪಾರ್ಚನೆ ಮಾಡಲು ಒಪ್ಪದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅಂಬೇಡ್ಕರ್ ಫೋಟೋ ತೆಗೆಯಲು ಪಟ್ಟು ಹಿಡಿದರು. ಹೀಗಾಗಿ ಕಾರ್ಯಕ್ರಮ ಆಯೋಜಕರು ಅಂಬೇಡ್ಕರ್ ಫೋಟೋ ತೆಗೆಯಬೇಕಾಯಿತು.
ಈ ಘಟನೆಯನ್ನು ಸ್ಥಳದಲ್ಲೇ ವಿರೋಧಿಸಿದ ಪರಿಶಿಷ್ಟ ಜಾತಿ ಮತ್ತು ಇತರ ವರ್ಗಗಳ ವಕೀಲರು ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ ಧ್ವಜಾರೋಹಣ ಕಾರ್ಯಕ್ರಮವನ್ನು ವಿರೋಧಿಸಿ ಹೊರನಡೆದಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೊ ಮಾಧ್ಯಮಗಳಿಗೆ ಲಭ್ಯವಾಗಿದೆ.
ಗಣರಾಜ್ಯೋತ್ಸವದಂದು ಅಂಬೇಡ್ಕರ್ ಫೋಟೋವನ್ನು ಇಡಬೇಕು ಎಂಬ ಚರ್ಚೆಗಳು ಮೊದಲಿನಿಂದಲೂ ನಡೆಯುತ್ತಿವೆ. ಗಣರಾಜ್ಯೋತ್ಸವ ದಿನದಂದು ಅಂಬೇಡ್ಕರ್ ಫೋಟೋ ಇಡಬೇಕೆಂದು ರಾಜ್ಯ ಸರ್ಕಾರವೂ ಕಳೆದ ವರ್ಷ ಹೇಳಿತ್ತು. ಹೀಗಾಗಿ ಈ ವರ್ಷದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಅಂಬೇಡ್ಕರ್ ಫೋಟೋ ಇಟ್ಟು ಗೌರವಿಸಲಾಗಿದೆ. ಸಂವಿಧಾನ ರಚಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ ಅಂಬೇಡ್ಕರ್ ಅವರನ್ನು ಸ್ಮರಿಸಲಾಗಿದೆ.
ಅಂಬೇಡ್ಕರ್ ಫೋಟೋ ತೆಗೆಯಬೇಕೆಂದು ಒತ್ತಾಯಿಸಿದಾಗ ನ್ಯಾಯಾಧೀಶರು, “ಯಾವುದೇ ಆದೇಶ ನನಗೆ ಬಂದಿಲ್ಲ. ಅಂಬೇಡ್ಕರ್ ಫೋಟೋ ಇದ್ದರೆ ನಾನು ಧ್ವಜಾರೋಹಣ ಮಾಡುವುದಿಲ್ಲ” ಎಂದು ಅಂಬೇಡ್ಕರ್‌ಗೆ ಅಗೌರವ ತೋರಿದ್ದಾರೆ.