ಬಿಜೆಪಿ ಎಂಪಿ 25 ಸೀಟುಗಳನ್ನು ಗೆದ್ದರೆ ರಾಜ್ಯ ಸರ್ಕಾರ ಢಮಾರ್‌.: ಯತ್ನಾಳ್‌ ಭವಿಷ್ಯ

ಉಮೇಶ ಗೌರಿ (ಯರಡಾಲ)

ಕೊಪ್ಪಳ (ಸೆ.10) ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 25 ಸೀಟುಗಳನ್ನು ಗೆದ್ದರೆ ರಾಜ್ಯ ಸರ್ಕಾರ ಢಮಾರ್‌ ಎನ್ನುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಭವಿಷ್ಯ ನುಡಿದಿದ್ದಾರೆ.

ನಗರದಲ್ಲಿ ಶನಿ​ವಾರ ಸುದ್ದಿಗಾರರೊಂದಿಗೆ ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿ ಆಗುತ್ತಿದೆ. ಶಾಸಕರಿಗೆ ಅನುದಾನವೇ ಸಿಗು​ತ್ತಿಲ್ಲ. ಇದರಿಂದ ಅವರು ಹಳ್ಳಿಗಳಿಗೆ ಹೋಗಲು ಆಗುತ್ತಿಲ್ಲ. ಇದರಿಂದ ಕಾಂಗ್ರೆಸ್‌ ಶಾಸಕರು ಸಹ ಅಸಮಾಧಾನಗೊಂಡಿದ್ದಾರೆ ಎಂದರು. ಮೂರು ತಿಂಗ​ಳಲ್ಲೇ ಕಾಂಗ್ರೆಸ್ಸಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. ಅಲ್ಲಿ ಹಿರಿಯ ಶಾಸಕರಿಗೆ ಗೌರವ ಸಿಗುತ್ತಿಲ್ಲ. ಸಚಿವರಾಗದ ಅತೃಪ್ತ ಆತ್ಮಗಳಿವೆ. ಈ ಅತೃಪ್ತರ ಆತ್ಮಗಳು ಏನು ಮಾಡ್ತಾವೋ ಕಾದು ನೋಡೋಣ ಎಂದರು. ಈಗಿನ ಸ್ಥಿತಿಯಲ್ಲಿ ಕಾಂಗ್ರೆಸ್ಸಿನ 50ಕ್ಕೂ ಹೆಚ್ಚು ಶಾಸಕರು ಅಸಮಾಧಾನಗೊಂಡಿದ್ದಾರೆ ಎಂದು ಹೇಳಿದರು.

 

ಕಾಂಗ್ರೆಸ್ಸಿಗರಿಗೆ ತಮ್ಮ 135 ಮಂದಿ ಶಾಸಕರ ಮೇಲೆ ನಂಬಿಕೆ ಇಲ್ಲ. ಹಾಗಾಗಿ ಬಿಜೆಪಿ ಶಾಸಕರನ್ನು ಮಾತನಾಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ಸಿಗೆ ಯಾರಾದರೂ ಹೋದರೆ ಅವರಿಗೆ ಭವಿಷ್ಯ ಇಲ್ಲ. ಅವರನ್ನು ಬಾಗಿಲು ಕಾಯೋಕೆ ಹಚ್ಚುತ್ತಾರೆ. ಬಿಜೆಪಿಯ ಯಾವ ಮುಖಂಡರು ಕಾಂಗ್ರೆಸ್ಸಿಗೆ ಹೋಗುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ಸದೃಢವಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ 25ಕ್ಕಿಂತ ಅಧಿಕ ಸ್ಥಾನ ಗೆಲ್ಲುತ್ತೇವೆ. ಬಿಜೆಪಿ ಈ ಬಾರಿ ಅಧಿಕಾರಕ್ಕೆ ಬರುತ್ತದೆ ಎಂದುಕೊಂಡಿತ್ತು. ಆದರೆ ಆಗಿಲ್ಲ. ಶೀಘ್ರದಲ್ಲೇ ವಿರೋಧ ಪಕ್ಷದ ನಾಯಕ, ರಾಜ್ಯಾಧ್ಯಕ್ಷರ ನೇಮಕ ಮಾಡಲಾಗುವುದು. 65 ಜನರಲ್ಲಿ ಯಾರನ್ನಾದರೂ ಮಾಡಲಿ. ನಮಗೆ ಖುಷಿ ಇದೆ ಎಂದರು.

Share This Article
";