ಉಡುಪಿ: ರಾಜ್ಯದಲ್ಲಿ ಆರಕ್ಷರ ನೇಮಕಾತಿಗೆ ಲಂಚ ತೆಗೆದುಕೊಳ್ಳಲಾಗುತ್ತಿದೆ ಎಂದು ಮಾಡಿದ ಆರೋಪದ ಕುರಿತು ಗೃಹ ಸಚಿವ ಆರಗ ಜ್ಞಾನೆಂದ್ರ ಮಾತನಾಡಿ ಲಂಚ ಕೇಳಿದವರ ಬಗ್ಗೆ ನನಗೆ ನೇರ ಮಾಹಿತಿ ಕೊಡಿ. ಇಲ್ಲಿ ಯಾರು ಯಾರನ್ನು ಖರೀದಿ ಮಾಡಲು ಸಾಧ್ಯವಿಲ್ಲ. ನಾವು ಖರೀದಿಯ ಸರಕುಗಳು ಅಲ್ಲ. ಕೆಲಸ ಹಿಡಿಯುವ ಉದ್ದೇಶದಿಂದ ಯಾರು ಕಷ್ಟಪಟ್ಟು ದುಡಿದ ಹಣ ಕಳೆದುಕೊಳ್ಳಬೇಡಿ. ನೇಮಕಾತಿಗೆ ಲಂಚ ವಿಚಾರದಲ್ಲಿ ಡಿಜಿಪಿ ಜೊತೆ ಮಾಡಿದ್ದೇನೆ. ವಿಶೇಷವಾದ ತಂಡ ರಚನೆ ಮಾಡಿ ನಿಗಾ ವಹಿಸುತ್ತೇವೆ. ಪ್ರತಿ ಪೊಲೀಸ್ ಠಾಣೆ ಮೇಲೆ ಹದ್ದಿನ ಕಣ್ಣು ಇಡಲಾಗುವುದು. ಎಸ್ಐ ಪೋಸ್ಟ್ ಗೆ 25 ಲಕ್ಷ ಲಂಚ ತೆಗೆದುಕೊಂಡ ಬಗ್ಗೆ ಬೆಂಗಳೂರಿನಲ್ಲಿ ದೂರು ದಾಖಲಾಗಿದೆ. ನೇಮಕಾತಿಯ ಹಿಂದೆ ಇರುವ ಜಾಲವನ್ನು ಬಯಲಿಗೆಳೆದು. ಮೆರಿಟ್ ಮತ್ತು ಯೋಗ್ಯತೆ ಇರುವವರು ಪೊಲೀಸ್ ಇಲಾಖೆಗೆ ಬರಬೇಕು. ಪೊಲೀಸ್ ಇಲಾಖೆಯನ್ನು ಹಣ ಕೊಟ್ಟು ಕೊಂಡುಕೊಳ್ಳಬಾರದು. ಲಂಚ ವಿಚಾರದಲ್ಲಿ ಸ್ಥಳೀಯರು ಅಂಜದೆ ಅಳುಕದೆ ಪೊಲೀಸ್ ಠಾಣೆಗೆ ದೂರು ಕೊಡಿ ಎಂದು ಹೇಳಿದರು.
ಇಂದು ಒಂದೇ ಮನೆಯೊಳಗೆ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿದೆ. ಎಲ್ಲರೂ ಅವರವರ ಧರ್ಮದಲ್ಲಿ ಚೆನ್ನಾಗಿರಲಿ ನೆಮ್ಮದಿಯಲ್ಲಿ ಇರಲಿ. ಇನ್ನೊಬ್ಬರ ಧರ್ಮ ಬದಲಾವಣೆ ಮಾಡುವ ವ್ಯವಸ್ಥಿತ ಜಾಲ ಇದೆ. ಈ ಜಾಲವನ್ನು ನಾವು ಮಟ್ಟ ಹಾಕುತ್ತೇವೆ. ಇಂತಹ ಬೆಳವಣಿಗೆಯಿಂದ ಸಮಾಜದಲ್ಲಿ ಸುಖ, ಶಾಂತಿ, ಸುವ್ಯವಸ್ಥೆ ಹಾಳಾಗುತ್ತದೆ. ಗ್ರಾಮ, ಊರು, ಕೇರಿಗಳಲ್ಲಿ ಬೆಂಕಿ ಹೊತ್ತಿಕೊಂಡರೆ ಬಹಳ ಕಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ವಿಶೇಷವಾದ ಕಾನೂನು ಮತ್ತು ಕಾಯ್ದೆಯನ್ನು ಮುಂದಿನ ದಿನಗಳಲ್ಲಿ ತರುತ್ತೇವೆ. ಪೊಲೀಸರಿಗೆ ಮತ್ತಷ್ಟು ಅಧಿಕಾರ ಕೊಡುತ್ತೇವೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಜಾರಿಯಲ್ಲಿರುವ ಗೋಹತ್ಯಾ ನಿಷೇಧ ಕಾಯ್ದೆ ವಿಫಲಗೊಂಡಿಲ್ಲ. ಕಾಯ್ದೆ ವಿಫಲವಾಗಲು ಪೊಲೀಸರು ಯಾವುದೇ ಕಾಲಕ್ಕೂ ಅವಕಾಶ ಕೊಡಬಾರದು. ಗೋಹತ್ಯೆ ಹೆಚ್ಚುತ್ತಿರುವುದು ಸಾಮಾಜಿಕ ಅಶಾಂತಿಗೂ ಕಾರಣವಾಗಿದೆ. ಅಕ್ರಮ ಗೋಸಾಗಾಟ ಗೋಹತ್ಯೆ 100 ಪ್ರತಿಶತ ನಿಲ್ಲಿಸಬೇಕು. ಈ ಬಗ್ಗೆ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ. ಉನ್ನತ ಅಧಿಕಾರಿಗಳಿಗೆ ವಿಶೇಷ ಸೂಚನೆ ನೀಡುತ್ತೇನೆ. ಗೋಹತ್ಯಾ ನಿಷೇಧ ಕಾಯ್ದೆ ವಿಫಲವಾಗಲು ಪೊಲೀಸರು ಬಿಡಬಾರದು ಎಂದರು.
ಕರ್ನಾಟಕದಲ್ಲಿ ಅಜ್ಞಾತ ಸ್ಥಳಗಳಿಂದ ಸ್ಯಾಟಲೈಟ್ ಕರೆ ವಿಚಾರವಾಗಿಯೂ ಮಾತನಾಡಿದ ಸಚಿವರು ಎಷ್ಟು ಕರೆಗಳು ಹೋಗಿವೆ ಎನ್ನುವುದರ ಬಗ್ಗೆ ನನಗೆ ಮಾಹಿತಿಯಿಲ್ಲ. ಕೇಂದ್ರ ಸರ್ಕಾರದ ವಿಶೇಷ ತಂಡ ರಾಜ್ಯದ ಪೊಲೀಸರ ಜೊತೆ ಸದಾ ಸಂಪರ್ಕದಲ್ಲಿ ಇದ್ದಾರೆ ಇದು ರಾಷ್ಟ್ರೀಯ ಭದ್ರತೆಯ ಪ್ರಶ್ನೆ. ಈ ಕುರಿತು ಹೆಚ್ಚೇನೂ ಮಾತನಾಡಲು ಸಾಧ್ಯವಿಲ್ಲ. ಎಂದರು.