ಹಿಜಾಬ್- ಕೇಸರಿ ಶಾಲು ಅವು ಧಾರ್ಮಿಕ ಸಂಕೇತಗಳಲ್ಲ.ಕೇವಲ ಮೂಲಭೂತವಾದಿಗಳ ಮೌಡ್ಯದ ಸಂಕೇತ.

ಉಮೇಶ ಗೌರಿ (ಯರಡಾಲ)

ಹಿಜಾಬ್ / ಕೇಸರಿ ಶಾಲು, ನಾಗರಿಕ / ಅನಾಗರಿಕ ರಾಕ್ಷಸ /ಮನುಷ್ಯ,  ಸಂಬಂಧಗಳು / ಆಚರಣೆಗಳು ಭಾವನೆಗಳು / ಬಟ್ಟೆಗಳು, ಸಮಗ್ರತೆ / ಸಂಕುಚಿತತೆ ಕೋತಿಗಳು / ಮಾನವ,

ಕಲಬೇಡ – ಕೊಲಬೇಡ,
ಹುಸಿಯ ನುಡಿಯಲು ಬೇಡ,
ಇದಿರ ಅಳಿಯಲು ಬೇಡ,
ಅನ್ಯರಿಗೆ ಅಸಹ್ಯ ಪಡಬೇಡ,
ತನ್ನ ಬಣ್ಣಿಸಬೇಡ,
ಇದೇ ಅಂತರಂಗ ಶುದ್ದಿ,
ಇದೇ ಬಹಿರಂಗ ಶುದ್ದಿ,.

ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಧರ್ಮದ ನಂಬಿಕೆಯ ಭಾರತೀಯರೆ ಇದು ಬೈಬಲ್ ಖುರಾನ್ ಭಗವದ್ಗೀತೆಯ ಸಾಲುಗಳಲ್ಲ. ಇದು ಕನ್ನಡ ನೆಲದ ವಚನ ‌ಸಾಹಿತ್ಯ ಸಂಸ್ಕೃತಿಯ ಸಾಲುಗಳು.

ಜೀವ ಜೀವನದ ಆಯ್ಕೆಯಲ್ಲಿ ಭಾರತದ ಬಹಳಷ್ಟು ಜನರು ನರಳುತ್ತಿರುವಾಗ ಅತ್ಯಂತ ವೇಗವಾಗಿ ಜನಜೀವನ ಸಹಜವಾಗಿಸಲು ಅಭಿವೃದ್ಧಿಯ ಬಗ್ಗೆ ಯೋಚಿಸಬೇಕಾದ ವ್ಯವಸ್ಥೆ ತುಂಡಗಲದ ಬಟ್ಟೆಯ ಬಗ್ಗೆ ಚರ್ಚೆ ಆರಂಭಿಸಿರುವುದು ನಾವೆಲ್ಲರೂ ತಲೆತಗ್ಗಿಸಬೇಕಾದ ವಿಚಾರ.

ಹಿಜಾಬ್ ಧರಿಸಿ ಬಂದರೆ ಏನಾಗುತ್ತದೆ ?
ಹಿಜಾಬ್ ಧರಿಸದಿದ್ದರೆ ಏನಾಗುತ್ತದೆ ?
ಕೇಸರಿ ಶಾಲು ಹಾಕಿಕೊಂಡು ಬಂದರೆ ಏನಾಗುತ್ತದೆ?  ಕೇಸರಿ ಶಾಲು‌ ಹಾಕದಿದ್ದರೆ ಏನಾಗುತ್ತದೆ ?
ಹಿಜಾಬ್ ವಿರೋಧಿಸಿದರೆ ಏನಾಗುತ್ತದೆ ?
ಹಿಜಾಬ್ ಬೆಂಬಲಿಸಿದರೆ ಏನಾಗುತ್ತದೆ ?.

ಧರ್ಮಗಳೆಂದರೆ ಏನು ?
ಹಿಜಾಬ್ ಕೇಸರಿ ಶಾಲು ಟೋಪಿ ಗಡ್ಡ ಕುಂಕುಮ ವಿಭೂತಿ ಕ್ರಾಸ್ ಗಳನ್ನು ಬಳಸುವುದು ಧರ್ಮವೇ ?.

ಒಂದನ್ನು ಬೆಂಬಲಿಸುವುದು ಇನ್ನೊಂದನ್ನು ವಿರೋಧಿಸುವುದು ಎರಡೂ ಮೂರ್ಖತನ. ಏಕೆಂದರೆ ಇದು‌ ಧರ್ಮದ ವಿಷಯವಲ್ಲ. ತುಂಡು ಬಟ್ಟೆಯ ವಿಷಯ.

ದೇವರೇನು‌ ಇಂತಹುದೇ ಬಣ್ಣದ, ಇಂತಹುದೇ ಆಕಾರದ ಬಟ್ಟೆ ಧರಿಸಬೇಕು ಎಂದು ಹೇಳಿದ್ದಾರೆಯೇ ? ಹಾಗಿದ್ದರೆ‌ ಸೃಷ್ಟಿ ಮಾಡುವಾಗಲೇ ಅ ಬಟ್ಟೆಗಳ ಸಮೇತ ಸೃಷ್ಟಿಸಬಹುದಿತ್ತಲ್ಲವೇ ?.

ಮನುಷ್ಯ ಮೂಲಭೂತವಾಗಿ ಬೆತ್ತಲೆಯಾಗಿಯೇ ಹುಟ್ಟುವುದಲ್ಲವೇ ? ಏನೋ ನಾಗರಿಕ ಸಮಾಜ ಎಂಬ ಭ್ರಮೆಗೆ ಒಳಗಾಗಿ ಎಷ್ಟೋ ಕಾಲದ ನಂತರ ಎಲೆ, ತೊಗಟೆ ಮುಂತಾದ ರೂಪಾಂತರ ಹೊಂದಿ ಬಟ್ಟೆ ಉಪಯೋಗ ಮಾಡಲಾಯಿತು. ಈಗ ಆ ಬಟ್ಟೆಯೇ ಧರ್ಮದ ಆಚರಣೆ ಎನ್ನುವುದು ಹಾಸ್ಯಾಸ್ಪದವಲ್ಲವೇ ?

ಖುರಾನ್ ಭೋದನೆ ಇರಲಿ, ಬೈಬಲ್ ಸಂದೇಶ ಇರಲಿ, ಭಗವದ್ಗೀತೆಯ ಶ್ಲೋಕ ಇರಲಿ ಅವು ಪ್ರತಿಪಾದಿಸುವುದು ಮುಖ್ಯವಾಗಿ ಮನುಷ್ಯ ಮತ್ತು ಸಮಾಜದ ಶಾಂತಿ ಸೌಹಾರ್ದತೆ ಮತ್ತು ನೆಮ್ಮದಿ. ಅವುಗಳ ಮುಖ್ಯ ತಿರುಳೇ ಇದು. ಉಳಿದದ್ದು ಆಗಿನ ಕಾಲದ ಸಾಮಾಜಿಕ ವ್ಯವಸ್ಥೆಯ ಕೆಲವು ನಿಯಮಗಳು ಮಾತ್ರ.

2022 ರ ಈ ಸಮಯದಲ್ಲಿ ಅದರ ತಿರುಳನ್ನು ಹೊರತುಪಡಿಸಿ ಉಳಿದ ಭೌತಿಕ ಆಚರಣೆಗಳು ಮತ್ತು ಅದರಿಂದ ತಮ್ಮ ಸ್ವಾರ್ಥಕ್ಕೆ ಬೇಕಾದ ಅಂಶಗಳನ್ನು ಮಾತ್ರ ಇಲ್ಲಿ ಉಪಯೋಗಿಸಿಕೊಳ್ಳಲಾಗುತ್ತಿದೆ.

ಮನುಷ್ಯ ಸಂಬಂಧಗಳಿಗೆ ಬೆಲೆ ಕೊಡದ ಹಿಜಾಬ್,
ಕುಂಕುಮ, ವಿಭೂತಿಗಳ ಮೂಲಕ ಧರ್ಮದ ಶ್ರೇಷ್ಠತೆ ಸಾರುವ ಕಪಟಿಗಳ ಮುಖವಾಡ ಬಯಲಾಗುತ್ತಿದೆ.

ಒಳ್ಳೆಯತನವೇ ಧರ್ಮ, ಮಾನವೀಯ ಮೌಲ್ಯಗಳೇ ಆಚಾರ ವಿಚಾರ ಎಂಬುದನ್ನು ಈ ಮೌಲ್ವಿ, ಪೂಜಾರಿ, ಮಠಾಧೀಶ, ಫಾದರ್ ಗಳು ಮರೆಮಾಚಿ ತುಂಡು ಬಟ್ಟೆಗಳೇ ನಮ್ಮ ಧರ್ಮದ ನಿಜವಾದ ಆಚರಣೆ ಎಂದು ಸಾಮಾನ್ಯ ಜನರ ದಾರಿ ತಪ್ಪಿಸುತ್ತಿದ್ದಾರೆ.

ಮಾಧ್ಯಮಗಳು ಸತ್ಯವನ್ನು ತಿಳಿಸದೆ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆ. ರಾಜಕಾರಣಿಗಳು ಹಿಜಾಬ್ ವಿವಾದವನ್ನು ದೊಡ್ಡದು ಮಾಡಿ ಚುನಾವಣಾ ಸಮಯದಲ್ಲಿ ಲಾಭ ಮಾಡಿಕೊಳ್ಳುತ್ತವೆ. ಜನ ಸಾಮಾನ್ಯರಾದ ನಮ್ಮ ಪಾಡೇನು.

ಭ್ರಷ್ಟಾಚಾರದ ಬಗ್ಗೆ, ಜಾತಿ ಪದ್ದತಿಯ ಬಗ್ಗೆ, ಆಹಾರದ ಕಲಬೆರಕೆಯ ಬಗ್ಗೆ, ಪರಿಸರ ನಾಶದ ಬಗ್ಗೆ, ದಿಢೀರನೆ ಹೆಚ್ಚಾಗುತ್ತಿರುವ ಮನುಷ್ಯರ ಅನಾರೋಗ್ಯದ ಬಗ್ಗೆ ಯೋಚಿಸಿ ಕಾರ್ಯೋನ್ಮುಖರಾಗಬೇಕಾದ ತುರ್ತು ಪರಿಸ್ಥಿತಿಯಲ್ಲಿ ಇದ್ಯಾವುದೋ ಹಿಜಾಬ್ ಬಗ್ಗೆ ಅನಾವಶ್ಯಕ ವಿವಾದ ಸೃಷ್ಟಿ ಮಾಡುತ್ತಿರುವವರ ಬಗ್ಗೆ ನಾವುಗಳು ಜಾಗೃತರಾಗಬೇಕಿದೆ.

ಬೆಲೆ ಏರಿಕೆ, ನಿರುದ್ಯೋಗ, ಅಸಹನೆ, ಅನಾರೋಗ್ಯ, ಅಪಘಾತ, ಆತ್ಮಹತ್ಯೆ, ಪಕ್ಷಾಂತರ, ಹೊಟ್ಟೆ ಪಾಡಿನ ವೇಶ್ಯಾವಾಟಿಕೆ, ಡ್ರಗ್ಸ್ ಮಾಫಿಯಾ ಎಲ್ಲವೂ ನಮ್ಮ ಕಣ್ಣ ಮುಂದೆಯೇ ನಡೆಯುತ್ತಿದೆ.

ಇಂತಹ ಸಂದರ್ಭದಲ್ಲಿ.ಹಿಜಾಬ್ ಧರಿಸುವವರೇ ಒಮ್ಮೆ ಯೋಚಿಸಿ, ಅದರ ಅವಶ್ಯಕತೆ ಇದೆಯೇ.ಅದರಿಂದ ಆಗುವ ತೊಂದರೆಯಾದರೂ ಏನು?

ನಿಮ್ಮ ಅಜ್ಞಾನಕ್ಕೆ, ನಿಮ್ಮ ಓಟಿಗಾಗಿ ಧರ್ಮದ ಮೂಲಭೂತವಾದಿತನದಿಂದ ಇಡೀ ಸಮಾಜದ ನೆಮ್ಮದಿ ಕದಡುವ ಕೆಲಸ ಮಾಡುತ್ತಿದ್ದೀರ.

ನಿಮಗೆ ನಿಮ್ಮ ಧರ್ಮದ ಮತ್ತು ದೇಶದ ಮೇಲೆ ಅಭಿಮಾನ ಪ್ರೀತಿ ಗೌರವ ಇದ್ದದ್ದೇ ಆದರೆ.ದಯವಿಟ್ಟು ಪ್ರೀತಿ ಸಂಯಮ ಸಹಕಾರ ಸಭ್ಯತೆ ತಾಳ್ಮೆ ತ್ಯಾಗ ಇನ್ನೊಬ್ಬರ ಸ್ವಾತಂತ್ರ್ಯ ಗೌರವಿಸಿ. ಎಲ್ಲರನ್ನೂ ಎಲ್ಲವನ್ನೂ ಒಳಗೊಳ್ಳುವ ವಿಶ್ವ ಮಾನವ ಪ್ರಜ್ಞೆ ಬೆಳೆಸಿಕೊಳ್ಳಿ.

ಚಿಕ್ಕ ಮಕ್ಕಳಂತೆ ಅವರ್ಯಾರೋ ತಪ್ಪು ಮಾಡಿದರೆ ಆ ತಪ್ಪನ್ನು ನಾವು ಮಾಡುತ್ತೇವೆ ಎಂಬ ನಿಲುವು ದೇಶದ ಹಿತಾಸಕ್ತಿಗೆ ಅತ್ಯಂತ ಮಾರಕ.ತಪ್ಪುಗಳನ್ನು ಸರಿಪಡಿಸಲು ಇನ್ನೊಂದು ತಪ್ಪು ಮಾಡಬಾರದು. ತಪ್ಪಿಗೆ ಪರ್ಯಾಯ ಸರಿ ಮಾತ್ರ.

ಕೊನೆಯದಾಗಿ,ಇಡೀ ಲೇಖನದ ಸಾರಾಂಶ ಇಷ್ಟೇ.

ಹಿಜಾಬ್ ಕುಂಕುಮ ವಿಭೂತಿ ಕೇಸರಿ ಶಾಲು ಇವುಗಳ ಬಹಿರಂಗ ಪ್ರದರ್ಶನದ ಅವಶ್ಯಕತೆ ಇಲ್ಲ. ಅವು ಧಾರ್ಮಿಕ ಸಂಕೇತಗಳಲ್ಲ.ಕೇವಲ ಮೂಲಭೂತವಾದಿಗಳ ಮೌಡ್ಯದ ಸಂಕೇತ. ಅದಕ್ಕೆ ಬದಲಾಗಿ ಮಾನವೀಯ ಮೌಲ್ಯಗಳ ಅಳವಡಿಕೆ ಮತ್ತು ನಡವಳಿಕೆಯೇ ನಿಜವಾದ ಧಾರ್ಮಿಕ ಆಚರಣೆ. ಇದೇ ಅಂತರಂಗ ಶುದ್ದಿ ಇದೇ ಬಹಿರಂಗ ಶುದ್ದಿ.

ಆದ್ದರಿಂದ ಈ ಕ್ಷಣದಲ್ಲಿ ಹಿಜಾಬ್ ವಿರೋಧಿಸಿ ಗಲಬೆ ಉಂಟುಮಾಡುವುದನ್ನು ನಿಲ್ಲಿಸೋಣ. ಮುಂದಿನ ದಿನಗಳಲ್ಲಿ ಯಾವುದೋ ಕಾಲದ ಧರ್ಮದ ಸಂದೇಶದ ಹೆಸರಿನಲ್ಲಿ ಹಿಜಾಬ್ ಕಡ್ಡಾಯ ಎನ್ನುವ ಆ ಜನರ ನಂಬಿಕೆಯನ್ನು ಪ್ರಶ್ನಿಸಿ ಅದು ಈ ಕಾಲದಲ್ಲಿ ಅನಾವಶ್ಯಕ ಎಂದು ಮನವರಿಕೆ ಮಾಡಿಕೊಡಲು ಪ್ರಯತ್ನಿಸೋಣ.ಹೆಣ್ಣಿನ ಸ್ವಾತಂತ್ರ್ಯ ಮತ್ತು ಸಮಾನತೆಗಾಗಿ ಎಲ್ಲರೂ ಶ್ರಮಿಸೋಣ. ಜೊತೆಗೆ ಎಲ್ಲಾ ಧರ್ಮಗಳ ಎಲ್ಲಾ ರೀತಿಯ ಮೌಢ್ಯಗಳನ್ನು ದಿಕ್ಕರಿಸಿ ವೈಚಾರಿಕ ಪ್ರಜ್ಞೆಯ ಮಾನವೀಯ ಮೌಲ್ಯಗಳನ್ನು, ನಾಗರಿಕ ಲಕ್ಷಣಗಳನ್ನು ಅಳವಡಿಸಿಕೊಳ್ಳೋಣ..

ಏಕೆಂದರೆ ಧಾರ್ಮಿಕ ಮೂಲಭೂತವಾದಿತನ ಕೇವಲ ಒಂದು ಧರ್ಮಕ್ಕೆ ಮಾತ್ರ ಸೀಮಿತವಲ್ಲ. ಇನ್ನೊಬ್ಬರ ತಪ್ಪನ್ನು ಎತ್ತಿ ತೋರಿಸುತ್ತಿರುವ ವರ್ಣಾಶ್ರಮಿಗಳೇ ತಪ್ಪು ನಮ್ಮ ಕಾಲ ಬುಡದಲ್ಲೇ ಇದೆ. ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಬಂದಿದೆ.

ವಿವೇಕಾನಂದ ಹೆಚ್.ಕೆ.
M-9844013068

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";