ಬೆಳಗಾವಿ ಜಿಲ್ಲೆಗೂ ವ್ಯಾಪಿಸಿದ ಹಿಜಾಬ್ ವಿವಾದ; ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದ ಪಿಯು ವಿದ್ಯಾರ್ಥಿಗಳು

ಬೆಳಗಾವಿ (ಫೆ.04) : ಹಿಜಾಬ್​ ಧರಿಸಲು ಅವಕಾಶ ಬೇಕು ಎಂದು ಒಂದು ಕಡೆ ವಿದ್ಯಾರ್ಥಿಗಳು ಬೇಡಿಕೆ ಇಟ್ಟರೆ ಮತ್ತೊಂದು ಕಡೆ ಇದನ್ನು ವಿರೋಧಿಸುತ್ತಿರುವ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜುಗಳಿಗೆ ಆಗಮಿಸುತ್ತಿದ್ದಾರೆ. ಇದರಿಂದಾಗಿ ಉಡುಪಿ ಕುಂದಾಪುರ, ಭದ್ರಾವತಿ, ಚಿಕ್ಕಮಗಳೂರಿನ  ಕಾಲೇಜಿನಲ್ಲಿ ವಸ್ತ್ರಸಂಹಿತೆ ವಿವಾದದ ಚರ್ಚೆ ಮತ್ತೆ ಆರಂಭವಾಗಿದೆ. ಹೀಗಿರುವಾಗಲೇ ಹಿಜಾಬ್​ ವಿವಾದ ಬೆಳಗಾವಿ ಜಿಲ್ಲೆಯ ಕಾಲೇಜುಗಳಲ್ಲೂ ಆರಂಭವಾಗಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗದ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಶಾಲು ಧರಿಸಿ ಕಾಲೇಜಿಗೆ ಬಂದಿದ್ದಾರೆ.

ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಕೂಡಲೇ ಕೇಸರಿ ಶಾಲು ತೆಗಸಿ ವಿದ್ಯಾರ್ಥಿಗಳಿಗೆ ಬುದ್ಧಿವಾದ ಹೇಳಿದ್ದಾರೆ. ನಿನ್ನೆ ಕಾಲೇಜು ಆವರಣದಲ್ಲಿ ಈ ಘಟನೆ ನಡೆದಿತ್ತು. ಹೀಗಾಗಿ ನಿನ್ನೆ ಇಡೀ ದಿನ ಹರಸಾಹಸ ಪಟ್ಟು ವಿದ್ಯಾರ್ಥಿಗಳ ಕೇಸರಿ ಶಾಲನ್ನು ಪೊಲೀಸರು ತೆಗೆಸಿದ್ದಾರೆ. ಜೊತೆಗೆ ಕಾಲೇಜಿಗೆ ಸಂಬಂಧ ಇಲ್ಲದ ಯುವಕರು ಬಂದು ಈ ರೀತಿ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು. ಮುಂದಿನ ಸಾರಿ ಕಾಲೇಜಿಗೆ ಬಾರದಂತೆ ಯುವಕರಿಗೆ ಪಿಎಸ್ಐ ವಾರ್ನಿಂಗ್ ನೀಡಿದ್ದಾರೆ. ನಿನ್ನೆ ಘಟನೆ ಬಳಿಕ ಇಂದು ಕಾಲೇಜಿಗೆ ಪ್ರಾಂಶುಪಾಲರಾದ ಆನಂದ ಲಾಲಸಂಗಿ ಆಗಮಿಸಿದ್ದಾರೆ.  ಕಾಲೇಜು ಆಡಳಿತ ಮಂಡಳಿ ನಿನ್ನೆ ನಡೆದ ಘಟನೆಯನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ್ದು, ಇಂದು ಈ ಬಗ್ಗೆ ಮಾಹಿತಿ ಲಭಿಸಿದೆ.

ಉಡುಪಿ: ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳನ್ನು ಹೊರಕಳಿಸಿದ ಪ್ರಾಂಶುಪಾಲರು

ಉಡುಪಿ ಜಿಲ್ಲೆ ಬೈಂದೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಇಂದು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದಿದ್ದಾರೆ. ಹೀಗಾಗಿ ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ತರಗತಿಯಿಂದ ಹೊರಕಳಿಸಿದ್ದಾರೆ. ಬಳಿಕ ಕೇಸರಿ ಶಾಲು ತೆಗೆದಿರಿಸಿ ತರಗತಿಗೆ ವಿದ್ಯಾರ್ಥಿಗಳು ಹಾಜರಾಗಿದ್ದಾರೆ.

ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜು ಹಿಜಾಬ್ ವಿವಾದ

ಹಿಜಾಬ್ ಧರಿಸದೆ ವಿದ್ಯಾರ್ಥಿನಿಯರು ತರಗತಿಗೆ ಬಂದರೆ ಕೇಸರಿ ತೆಗೆದಿರುಸುತ್ತೇವೆ. ಸರ್ಕಾರದ ನಿಯಮ ಪಾಲಿಸುವುದಕ್ಕೆ ಸಿದ್ದವಾಗಿದ್ದೇವೆ. ಆದರೆ ಹಿಜಾಬ್ ಧರಿಸಿ ಕಾಲೇಜ್ ಬಂದರೆ ಕೇಸರಿಯನ್ನು ಧರಿಸಿಯೇ ತರಗತಿಗೆ ಹೋಗುತ್ತೇವೆ. ಎಲ್ಲರಿಗೂ ಸಮಾನತೆ ಬೇಕು. ಅವರಿಗೊಂದು ಕಾನೂನು, ನಮ್ಮಗೆ ಮಾತ್ರ ಕಾನೂನು ಅಂದರೆ ಅದಕ್ಕೆ ಒಪ್ಪಲು ಸಿದ್ದರಿಲ್ಲ ಎಂದು ಕೇಸರಿ ಶಾಲು ಧರಿಸಿ ಬರುತ್ತಿರುವ ವಿದ್ಯಾರ್ಥಿಗಳು ಪ್ರತಿಕ್ರಿಯೆ ನೀಡಿದ್ದಾರೆ.

ಉಡುಪಿ: ಹಿಜಾಬ್ ವಿವಾದ ಕಾಲೇಜು ಗೇಟ್‌ ಬಳಿ ಬಿಸಿಲಿನಲ್ಲಿ ಕುಳಿತ ವಿದ್ಯಾರ್ಥಿನಿಯರು

ಉಡುಪಿ ಜಿಲ್ಲೆ ಕುಂದಾಪುರ ಸರ್ಕಾರಿ ಪಿಯು ಕಾಲೇಜಿನಲ್ಲಿ ಹಿಜಾಬ್ ವಿವಾದಕ್ಕೆ ಸಂಬಂಧಪಟ್ಟಂತೆ ಕಾಲೇಜು ಗೇಟ್‌ ಬಳಿ ಬಿಸಿಲಿನಲ್ಲಿ ವಿದ್ಯಾರ್ಥಿನಿಯರು ಕುಳಿತಿದ್ದಾರೆ. ಕಾಲೇಜಿಗೆ ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಬಂದಿದ್ದರು. ಹಿಜಾಬ್ ಧರಿಸಿ‌ ತರಗತಿ ಅವಕಾಶ ನೀಡುವ ತನಕ‌ ಇಲ್ಲಿಂದ ತೆರಳುವುದಿಲ್ಲ ಎಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ. ಸ್ಥಳದಿಂದ ಪೋಷಕರು ತೆರಳಿದ್ದು, ಇನ್ನು ಉಳಿದಂತೆ ಕಾಲೇಜ್ ಪಕ್ಕ ಬಂದ ಸಾರ್ವಜನಿಕರನ್ನು ಪೊಲೀಸರು ಚದುರಿಸಿದ್ದಾರೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";