ಬಾಗಲಕೋಟೆ: ಕರ್ನಾಟಕದ ಕರಾವಳಿಯಲ್ಲಿ ಹೊತ್ತಿಕೊಂಡ ಹಿಜಾಬ್ V/s ಕೇಸರಿ ಶಾಲು ವಿವಾದ ಕ್ರಮೇಣವಾಗಿ ಇಡೀ ರಾಜ್ಯಕ್ಕೆ ವ್ಯಾಪಿಸುತ್ತಿದೆ. ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ಪಟ್ಟಣದ ಪಿಯು ಕಾಲೇಜಿನ ಮೇಲೆ ಕಲ್ಲುತೂರಾಟ ನಡೆದಿದೆ.
ನಗರದ ಪದವಿ ಪೂರ್ವ ಕಾಲೇಜಿನ ಎದುರಿನಲ್ಲಿ ಒಂದು ಗುಂಪಿನ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಪ್ರತಿಭಟನೆ ನಡೆಸುತ್ತಿದ್ದರೆ, ಇನ್ನೊಂದು ಕಡೆಯಲ್ಲಿ ಕೇಸರಿ ಶಾಲುಗಳನ್ನು ಹಾಕಿಕೊಂಡು ಬಂದು ಘೋಷಣೆಗಳನ್ನು ಕೂಗುತ್ತಿದ್ದಾರೆ.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ಪಟ್ಟಣದಲ್ಲಿರುವ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಗುಂಪು ಪ್ರತಿಭಟನೆ ನಡೆಸುತ್ತಿದ್ದಾಗ. ಈ ಮಧ್ಯೆ ಕೆಲವು ಕಿಡಿಗೇಡಿಗಳು ಕಾಲೇಜಿನ ಮೇಲೆ ಕಲ್ಲು ತೂರಾಟ ನಡೆಸಿದ್ದು, ಒಬ್ಬ ವಿದ್ಯಾರ್ಥಿ ಗಾಯಗೊಂಡಿದ್ದಾನೆ.
ಹಿಜಾಬ್ ಧರಿಸಿ ಬಂದ ವಿಧ್ಯಾರ್ಥಿನಿಯರಿಗೆ ಪೋಷಕರ ಸಾಥ್
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ಪದವಿ ಪೂರ್ವ ಕಾಲೇಜಿನ ಬಳಿ ಕೆಲವು ವಿಧ್ಯಾರ್ಥಿನಿಯರು ಹಿಜಾಬ್ ಧರಿಸಿದ್ದರೆ, ಇನ್ನೂ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿಕೊಂಡು ಕಾಲೇಜಿನ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಹಿಜಾಬ್ ಧರಿಸಿ ಬಂದಿರುವ ವಿದ್ಯಾರ್ಥಿನಿಯರಿಗೆ ಪೋಷಕರು ಸಾಥ್ ನೀಡಿದ್ದಾರೆ.
ರಾಜ್ಯ ಸರ್ಕಾರ ಸಮವಸ್ತ್ರ ಆದೇಶಿಸಿದ್ದರೂ ರಾಜ್ಯದ ಅನೇಕ ಜಿಲ್ಲೆಗಳ ಕಾಲೇಜುಗಳಲ್ಲಿ ಹಿಜಾಬ್ ಕೇಸರಿ ಶಾಲು ಬಿಸಿ ಇನ್ನೂ ಹೆಚ್ಚಾಗಿದೆ. ಇದರ ನಡುವೆ ಹಿಜಾಬ್ ನಿರ್ಬಂಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಇಂದು ಹೈಕೋರ್ಟ್ ವಿಚಾರಣೆ ನಡೆಸಲಿದೆ.
ರಾಜ್ಯದ ಇತರ ಭಾಗಗಳಲ್ಲಿಯೂ ಪ್ರತಿಭಟನೆಗಳು ಹರಡಿದ್ದು, ಮಂಡ್ಯ ವಿಶ್ವವಿದ್ಯಾನಿಲಯದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಘೋಷಣೆ ಕೂಗಿದರು. ಕಳೆದ ಒಂದು ವಾರದಿಂದ ಕೆಲವು ವಿದ್ಯಾರ್ಥಿಗಳು ಹಿಜಾಬ್ ಧರಿಸುತ್ತಿದ್ದಾರೆ ಎಂದು ಹೇಳಿರುವ ಅವರು, ಹುಡುಗಿಯರು ಹಿಜಾಬ್ ಅನ್ನು ದೂರವಿಡುವವರೆಗೂ ನಾವು ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಹೇಳಿದಾರೆ.