ಬೆಂಗಳೂರು, ನ 16: ರಾಜ್ಯ ಮಾನಸಿಕ ಆರೋಗ್ಯ ಮಂಡಳಿಗೆ ಅಧ್ಯಕ್ಷ ಹಾಗೂ ಸದಸ್ಯರನ್ನ ನೇಮಕ ಮಾಡುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ.
ಮಾನಸಿಕ ಆರೋಗ್ಯ ಆರೈಕೆ ಕಾಯ್ದೆ-2017ನ್ನು ಜಾರಿಗೊಳಿಸುವಂತೆ ಕೋರಿ
ಬೆಂಗಳೂರಿನ ಎನ್ ಸಂಜಯ್ ಸೇರಿದಂತೆ ಇನ್ನೂ ಅನೇಕರು ಮಾನಸಿಕ ಆರೋಗ್ಯ ಆರೈಕೆ ಕಾಯ್ದೆ-2017ನ್ನು ಜಾರಿಗೊಳಿಸುವಂತೆ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರುತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು.
ಸರಕಾರಿ ನ್ಯಾಯವಾದಿಗಳು ಪೀಠಕ್ಕೆ ಮಾಹಿತಿ ನೀಡಿ, ಮಾನಸಿಕವಾಗಿ ಖಿನ್ನತೆಗೊಳಗಾಗಿ ಬಳಲುತ್ತಿರುವವರ ಆರೋಗ್ಯ ರಕ್ಷಣೆ ಉದ್ದೇಶದಿಂದ ಕೇಂದ್ರ ಸರಕಾರ ಜಾರಿಗೊಳಿಸಿರುವ ‘ಮಾನಸಿಕ ಆರೋಗ್ಯ ಆರೈಕೆ ಕಾಯ್ದೆ’ಯ ಅನ್ವಯ ರಾಜ್ಯ ಮಾನಸಿಕ ಆರೋಗ್ಯ ಮಂಡಳಿಗೆ ಅಧ್ಯಕ್ಷ ಮತ್ತು ಸದಸ್ಯರ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು ಅಧ್ಯಕ್ಷರ ಹುದ್ದೆಗೆ 19 ಮತ್ತು ಸದಸ್ಯರ ಹುದ್ದೆಗಳಿಗೆ 17 ಸೇರಿ ಒಟ್ಟು 36 ಅರ್ಜಿಗಳು ಸಲ್ಲಿಕೆಯಾಗಿವೆ. ಅರ್ಜಿಗಳನ್ನ ಪರಿಗಣಿಸಿದ ನಂತರ ಅರ್ಹರನ್ನು ನೇಮಕ ಮಾಡಲಾಗುವುದು ಎಂದು ತಿಳಿಸಿದರು.
ಹೇಳಿಕೆ ದಾಖಲಿಸಿಕೊಂಡ ಪೀಠ, ರಾಜ್ಯ ಮಾನಸಿಕ ಆರೋಗ್ಯ ಮಂಡಳಿಗೆ ಅಧ್ಯಕ್ಷ ಹಾಗೂ ಸದಸ್ಯರನ್ನು ಶೀಘ್ರವೇ ನೇಮಕ ಮಾಡಿ ಮಂಡಳಿಗೆ ಅಗತ್ಯವಿರುವ ಎಲ್ಲಾ ಮೂಲ ಸೌಕರ್ಯ ಜೊತೆಗೆ ಹಣಕಾಸು ವ್ಯವಸ್ಥೆ ರಾಜ್ಯ ಸರಕಾರ ಕಲ್ಪಿಸಿ ಕಾರ್ಯಾರಂಭಿಸಬೇಕು ಎಂದು ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.
ಕೋರಿಕೆ : ಮಾನಸಿಕ ಆರೋಗ್ಯ ಆರೈಕೆ ಕಾಯ್ದೆಯನ್ನು ಕೇಂದ್ರ ಸರಕಾರ 2017 ಜನವರಿ 6 ರಂದು ಜಾರಿಗೆ ತಂದಿದೆಯಾದರೂ ರಾಜ್ಯದಲ್ಲಿ ಈ ಕಾಯ್ದೆಯನ್ನು ಯಾಕೆ ಜಾರಿ ಮಾಡಿಲ್ಲ ಎಂದು ಪೀಠ ತರಾಟೆಗೆ ತೆಗೆದುಕೊಂಡಿತು. ಕಾಯ್ದೆ ಜಾರಿ ಮಾಡುವುದರ ಜೊತೆಗೆ ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಮಾನಸಿಕ ಆರೋಗ್ಯ ಮಂಡಳಿಗಳನ್ನು ರಚಿಸಲು ಕೂಡಲೇ ಸರಕಾರಕ್ಕೆ ಆದೇಶಿಸಬೇಕು ಹಾಗೂ ಮಂಡಳಿಗಳಿಗೆ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಕ ಮಾಡಲು ಮತ್ತು ಮಂಡಳಿಗಳಿಗೆ ಅಗತ್ಯ ಸಿಬ್ಬಂದಿ ಮತ್ತು ಮೂಲಸೌಕರ್ಯ ಒದಗಿಸಲು ರಾಜ್ಯ ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.