ದೇವದಾಸಿ ಪದ್ದತಿಯ ನಿರ್ಮೂಲನಕ್ಕೆ ಕಾನೂನಿನ ಕಟ್ಟುನಿಟ್ಟಿನ ಅನುಷ್ಠಾನ: ಸಚಿವ ಹಾಲಪ್ಪ ಆಚಾರ್‌

ವಿಧಾನಸೌಧದಲ್ಲಿ ಮಾಜಿ ದೇವದಾಸಿ ಮಹಿಳೆಯರ ಮತ್ತು ಮಕ್ಕಳ ಕುಂದು ಕೊರತೆಗಳು ಹಾಗೂ ಅವುಗಳಿಗೆ ಇರುವ ಪರಿಹಾರಗಳ ಬಗ್ಗೆ ಸಭೆ

ಸಮಾಜ ಕಲ್ಯಾಣ ಇಲಾಖೆ ಸಚಿವರು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ

ಸುದ್ದಿ ಸದ್ದು ನ್ಯೂಸ್ ಬೆಂಗಳೂರು:  ರಾಜ್ಯದಲ್ಲಿ ಬಾಲ್ಯವಿವಾಹ ತಡೆಗಟ್ಟಲು ಇರುವ ಕಠಿಣ ಕ್ರಮಗಳಂತೆ ದೇವದಾಸಿ ಪದ್ದತಿಯ ಆಚರಣೆಯನ್ನು ತಡೆಗಟ್ಟಲು ಇರುವ ಕಾನೂನಿನ ಕಟ್ಟುನಿಟ್ಟಿನ ಅನುಷ್ಠಾನದ ಅಗತ್ಯತೆಯಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ *ಮಾನ್ಯ ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರಾದ ಹಾಲಪ್ಪ ಆಚಾರ್‌* ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಇಂದು ವಿಧಾನಸೌಧದಲ್ಲಿ ನಡೆದ *”ಮಾಜಿ ದೇವದಾಸಿ ಮಹಿಳೆಯರ ಮತ್ತು ಮಕ್ಕಳ ಕುಂದು ಕೊರತೆಗಳ ಹಾಗೂ ಅವುಗಳಿಗೆ ಇರುವ ಪರಿಹಾರಗಳ”* ಕುರಿತ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಅವರು, ರಾಜ್ಯದಲ್ಲಿ ಬಾಲ್ಯ ವಿವಾಹವನ್ನು ಪರಿಣಾಮಕಾರಿಯಾಗಿ ತಡೆಗಟ್ಟಲಾಗುತ್ತಿದೆ. ಯಾವುದೇ ಬಾಲ್ಯವಿವಾಹ ನಡೆದಾಗ ಅದರಲ್ಲಿ ಭಾಗಿಯಾಗುವವರನ್ನ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುತ್ತಿದೆ. ಇದರಿಂದ ಬಾಲ್ಯವಿವಾಹದಲ್ಲಿ ತೊಡಗಿಕೊಳ್ಳುವವರ ಸಂಖ್ಯೆ ಪರಿಣಾಮಾಕಾರಿಯಾಗಿ ಕಡಿಮೆ ಆಗಿದೆ. ಆದರೆ, ದೇವದಾಸಿ ಪದ್ದತಿಗೆ ಇನ್ನು ಹಲವು ಮಹಿಳೆಯರನ್ನ ಕಾನೂನುಬಾಹಿರವಾಗಿ ತಳ್ಳಲಾಗುತ್ತಿದೆ. ಇದನ್ನ ಪರಿಣಾಮಾಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಇರುವ ಕಾನೂನಿನ ಕಟ್ಟುನಿಟ್ಟಿನ ಬಳಕೆ ಆಗಬೇಕಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಗೆ ಬಾಲ್ಯ ವಿವಾಹ ತಡೆಗಟ್ಟಲು ಇರುವ ಅಧಿಕಾರದಂತೆಯೇ ಕಠಿಣವಾದ ಕ್ರಮಗಳನ್ನ ದೇವದಾಸಿ ಪದ್ದತಿಗೆ ಹೊಸದಾಗಿ ಮಹಿಳೆಯರನ್ನ ತಳ್ಳುವವರ ವಿರುದ್ದ ಕೈಗೊಳ್ಳಬೇಕು, ಇದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ದೇವದಾಸಿ ಪದ್ದತಿಯ ನಿಷೇದದ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಿ:

ಮಕ್ಕಳ ದೌರ್ಜನ್ಯ ತಡೆಗೆ ರಾಜ್ಯಾದ್ಯಾಂತ ವ್ಯಾಪಕ ಪ್ರಚಾರ ಕೈಗೊಳ್ಳಲಾಗುತ್ತಿದೆ. ಇದರಿಂದ ಬಾಲ್ಯವಿವಾಹದಂತಹ ಪ್ರಕರಣಗಳು ಬಹಳಷ್ಟು ಕಡಿಮೆಯಾಗಿವೆ. ಇದೇ ರೀತಿಯಲ್ಲಿ ದೇವದಾಸಿ ಪದ್ದತಿಯ ನಿಷೇಧದ ಬಗ್ಗೆ, ಕಾನೂನು ಬಾಹಿರವಾಗಿ ಮಹಿಳೆಯರನ್ನ ದೇವದಾಸಿಯನ್ನಾಗಿಸುವವ ವಿರುದ್ದ ಕೈಗೊಳ್ಳುವ ಕಠಿಣ ಶಿಕ್ಷೆಯ ಬಗ್ಗೆ, ದೇವದಾಸಿ ಪದ್ದತಿಗೆ ಒಳಗಾಗುತ್ತಿರುವವರ ರಕ್ಷಣೆಗೆ ಇರುವ ಕ್ರಮಗಳ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ಸೂಚಿಸಲಾಯಿತು. 

ಮಾಜಿ ದೇವದಾಸಿಯರ ಬಗ್ಗೆ ಸಮೀಕ್ಷೆ:

1993 ಮತ್ತು 94 ರಲ್ಲಿ ಹಾಗೂ 2007 ಮತ್ತು 08 ರಲ್ಲಿ ದೇವದಾಸಿಯರ ಬಗ್ಗೆ ಸಮೀಕ್ಷೆ ನಡೆಸಲಾಗಿದೆ. ವಲಸೆ, ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗುವ ಭಯದಂತಹ ಕಾರಣಗಳಿಂದ ಹಲವಾರು ದೇವದಾಸಿಯರು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿಲ್ಲ. ಈ ಹಿನ್ನಲೆಯಲ್ಲಿ ಇನ್ನೊಮ್ಮೆ ಸಮೀಕ್ಷೆ ನಡೆಸುವುದು ಸೂಕ್ತ. ಇದರಿಂದ ನಮ್ಮ ರಾಜ್ಯದಲ್ಲಿರುವ ಮಾಜಿ ದೇವದಾಸಿಯರ ಸಂಖ್ಯೆ, ದೇವದಾಸಿ ನಿಷೇಧ ಅಧಿನಿಯಮದ ಅನುಷ್ಠಾನದ ಪರಿಣಾಮಗಳನ್ನು ತಿಳಿದುಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಸಚಿವರು ಸೂಚನೆ ನೀಡಿದರು. 

ಶಿಕ್ಷಣ ಇಲಾಖೆಯ ನಮೂನೆಗಳಲ್ಲಿ ಮಾಜಿ ದೇವದಾಸಿಯರ ಮಕ್ಕಳ ತಂದೆ ಹೆಸರು ಕಡ್ಡಾಯವಾಗಿರದೆ, ಐಚ್ಚಿಕವಾಗಿರುವಂತೆ ಮಾಡುವ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸುವಂತೆ ಸಭೆಯಲ್ಲಿ ಚರ್ಚಿಸಲಾಯಿತು. 

ವಿದ್ಯಾರ್ಥಿಗಳ ವೇತನ, ಹಾಸ್ಟೆಲ್‌, ಶಾಲಾ, ಕಾಲೇಜಿನ ಸೀಟಿನಲ್ಲಿ ಮಾಜಿ ದೇವದಾಸಿ ಮಕ್ಕಳಿಗೆ ಒಳ ಮೀಸಲಾತಿಯನ್ನು ನೀಡಲು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದೆಂದು ಚರ್ಚಿಸಲಾಯಿತು. 

ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆಯಿಂದ ಈಗಾಗಲೇ ನಿವೇಶನ ರಹಿತ ಅಲೆಮಾರಿ ಸಮುದಾಯಕ್ಕೆ ನೀಡುತ್ತಿರುವ ವಸತಿ ಸೌಲಭ್ಯದ ಮಾದರಿಯಂತೆ ಮಾಜಿ ದೇವದಾಸಿಯರಿಗೆ ವಸತಿ ಸೌಲಭ್ಯ ಕಲ್ಪಿಸಲಾಗುವುದೆಂದು ಚರ್ಚಿಸಲಾಯಿತು. 

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಇಲಾಖೆ ಕಾರ್ಯದರ್ಶಿಗಳಾದ ಡಾ.ಎನ್‌. ಮಂಜುಳಾ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳ ಉಪಸ್ಥಿತರಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";