ಸರಕಾರಿ ಶಾಲಾ ಶಿಕ್ಷಕಿ ಮೇಲೆ ದೈವ! ಪರಿಶೀಲನಾಧಿಕಾರಿಗಳು ಕಕ್ಕಾಬಿಕ್ಕಿ.

ಉಮೇಶ ಗೌರಿ (ಯರಡಾಲ)

ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೆಟ್ಟಗೆರೆ ಸರಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕಿ ಮೈ ಮೇಲೆ ದೈವ ಬಂದಂತೆ ಮಾತನಾಡಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ. ಶಾಲೆ ಮುಖ್ಯ ಶಿಕ್ಷಕಿ ಕಣ್ಣು ಮುಚ್ಚಿಕೊಂಡು ‘ತಾನು ಅಧಿಕಾರಿಗಳನ್ನು ಯಾರನ್ನೂ ಬಿಡುವುದಿಲ್ಲ. ನಿಂಗಯ್ಯ ಅವರನ್ನಂತೂ ಬಲಿ ತೆಗೆದುಕೊಳ್ಳುತ್ತೇನೆ’ ಎಂದು ಹೇಳಿರುವ ವಿಡಿಯೊ ಸಾಮಾಜಿಕ ಜಾಲಾತಾಣದಲ್ಲಿ ವೈರಲ್‌ ಆಗಿದೆ.

ತಾಲೂಕಿನ ಬೆಟ್ಟಗೆರೆ ಸರಕಾರಿ ಶಾಲೆ ಮುಖ್ಯಶಿಕ್ಷಕಿ ಶಾಲೆಯ ಹಣ ದುರುಪಯೋಗ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡಸಿ ಕ್ರಮ ಕೈಗೊಳ್ಳಬೇಕು ಎಂದು ಬಿಇಒ ಹೇಮಂತರಾಜ್‌ ಅವರಿಗೆ ಎಸ್‌ಡಿಎಂಸಿ ಸದಸ್ಯರು ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಬಿಎಒ ಹೇಮಂತರಾಜ್‌ ಮತ್ತು ಸಿಬ್ಬಂದಿ ಪರಿಶೀಲನೆಗೆ ತೆರಳಿದ್ದ ಸಂದರ್ಭ ಮುಖ್ಯಶಿಕ್ಷಕಿ ತಮ್ಮ ಮೇಲೆ ದೈವ ಬಂದಂತೆ ವರ್ತನೆ ತೋರಿದ್ದು ಈ ಘಟನೆಯಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಕ್ಕಾಬಿಕ್ಕಿಯಾಗಿ ವಾಪಸ್‌ ತೆರಳಿಸಿದ್ದಾರೆ.

ವಿಡಿಯೊದಲ್ಲಿ ಏನಿದೆ?

ಗ್ರಾಮದಲ್ಲಿ ಯಾರು ಯಾರು ಇದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದು ಎಲ್ಲಾ ನನಗೆ ಗೊತ್ತು. ನನಗೆ ದೇವಸ್ಥಾನ ಕಟ್ಟಿಸಿ ಕೊಡಬೇಕು. ಅಲ್ಲಿಯವರೆಗೆ ಗ್ರಾಮಕ್ಕೆ ಬೆಂಕಿ ಹಾಕಿಕೊಂಡೇ ಕೂರುತ್ತೇನೆ. ಈ ಸ್ಕೂಲೂ ನಡೀಬಾರದು, ಯಾವ್ದೂ ನಡೀಬಾರದು ಹಾಗೆ ಮಾಡಿಬಿಡುವೆ. ಯಾರನ್ನೂ ಇಲ್ಲಿ ಬಿಟ್ಟುಕೊಳ್ಳೊಲ್ಲ ನಾನು. ನಾವು 9 ಮಂದಿ ಅಕ್ಕ-ತಂಗಿಯರಿದ್ದು 9 ಮಂದಿಯೂ ಬಿಸಿಲಿನಲ್ಲಿ ಅಳುತ್ತಾ ಕೂತಿದ್ದೇವೆ. 30 ವರ್ಷದಿಂದ ಅನ್ನ, ನೀರು ಕೊಡದೆ ಬಿಸಿಲಿನಲ್ಲಿ ಕೂರಿಸಿದ್ದಾರೆ.

ಇಲ್ಲಿ ಯಾರು ಏನೂ ಬಂದು ಹೇಳಿದರೂ ನಾನು ಮಾಡೊಕ್ಕೆ ಬಿಡೊಲ್ಲ ಅಂದ್ರೆ ಬಿಡೊಲ್ಲ. ನನಗೆ ಪದೇ ಪದೇ ತೊಂದರೆ ಕೊಟ್ರೆ ನಿಮಗೂ ತೊಂದ್ರೆ ಕೊಡ್ತೀನಿ. ನನಗೆ ತೊಂದರೆ ಕೊಡಕೂಡದು. ನನ್ನ ಜಾಗಕ್ಕೆ ಯಾರೂ ಬರಕೂಡದು. ಏನು ಮಾಡಬೇಕೆಂದು ನನಗೆ ಗೊತ್ತು. ಇದು ನನ್ನ ಜಾಗ, ಇದರ ಮೇಲೆ ನನಗೆ ಅಧಿಕಾರವಿದೆ. ಇವತ್ತು ನನ್ನ ಪೂಜೆ ಆಗಬೇಕಿತ್ತು. ಇವತ್ತಿನ ವರೆಗೂ ನನ್ನ ಪೂಜೆ ಮಾಡಿಸಿಲ್ಲ ಇವರು. ಅದಕ್ಕೆ ನಾನು ಏನು ಮಾಡಬೇಕೋ ಮಾಡ್ತೀನಿ.

ನನಗೆ ಊಟ ಇಲ್ಲದ ಹಾಗೆ ಕೂರಿಸಿದ್ದಾರೆ. ಅದು ಗೊತ್ತಾ ನಿಮಗೆ? ನಿಮ್ಮನ್ನು ಕೂರೊಕ್ಕೂ ಬಿಡೊಲ್ಲ ನಿಲ್ಲೊಕ್ಕೂ ಬಿಡೊಲ್ಲ. ಅವಳನ್ನು ಏನು ಮಾಡ್ಬೇಕೋ ಮಾಡಿ ಕಳಿಸ್ತೀನಿ ನಾನು. ನೀವು ಏನು ಆರ್ಡರ್ ಕೊಡ್ಬೇಕೋ ಆರ್ಡರ್ ಕೊಡಿ. ಇವತ್ತಲ್ಲ ಅವಳು ಬಂದ ದಿನದಿಂದಲೂ ಅವಳ ಅವಳ ಜೊತೆಗೇ ಇದ್ದೀನಿ. ಅವಳು ಏನು ಮಾಡ್ಬೇಕು, ಏನು ಮಾಡ್ಬಾರ್ದು ಅನ್ನೋದನ್ನು ನಾನು ತೀರ್ಮಾನ ಮಾಡೋಳು, ನೀವಲ್ಲ. ನಾನು ಮಾಡಿಸ್ತೀನಿ. ನನಗೆ ಗೊತ್ತಿದೆ. ಒಂದು ಕಟ್ಟಡ ಕಟ್ಟಿ ಕೊಡಿ ಅಂದ್ರೆ ಒಬ್ರೂ ಈವರೆಗೆ ಕಟ್ಟಡ ಕಟ್ಟಿ ಕೊಡ್ಲಿಲ್ಲ ನಂಗೆ. ಈ ಶಾಲೆ ಮುಂದೆ ಹೋಗಲು ಬಿಡಲ್ಲ. ಮಕ್ಕಳು, ಶಿಕ್ಷಕರು ಯಾರೂ ಇಲ್ಲದ ಹಾಗೆ ಮಾಡುತ್ತೇನೆ!. ನನ್ನ ತೀರ್ಮಾನದ ಮುಂದೆ ಯಾರ ತೀರ್ಮಾನವೂ ಇಲ್ಲಎಂದು ಹೇಳಿರುವುದು ವಿಡಿಯೋದಲ್ಲಿದೆ.

ಈ ಮಾತುಗಳನ್ನು ಕೇಳಿಸಿಕೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿ ಏನು ಹೇಳಬೇಕೆಂದು ತಿಳಿಯದೆ ವಾಪಸ್ ಆಗಿದ್ದಾರೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";