ಬೆಂಗಳೂರು (ಅ.17) :ಗುರುವಾರದಿಂದ ಮಧ್ಯಾಹ್ನದ ಬಿಸಿಯೂಟ ಆರಂಭವಾಗಲಿದೆ.ಕೊರೋನಾ ಕಾರಣದಿಂದ ಬಿಸಿಯೂಟ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿತು.ಇದರ ಹಿನ್ನೆಲೆ ಅಡುಗೆ ಕೋಣೆ,ದಾಸ್ತಾನು ಕೊಠಡಿ, ಕುಡಿಯುವ ನೀರಿನ ಸ್ಥಳಗಳನ್ನು ಸ್ವಚ್ಛಗೊಳಿಸುವುದು ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಸೂಚನೆ ನೀಡಿದೆ.
ಅಕ್ಷರ ದಾಸೋಹ ಕಾರ್ಯಕ್ರಮದ ಅನುದಾನ ಬಳಸಿಕೊಂಡು ಸ್ಟೌವ್ ರಿಪೇರಿ ಇದ್ದರೆ ಮಾಡಿಸಿಕೊಳ್ಳಿ. ಆಹಾರ ಧಾನ್ಯ ದಾಸ್ತಾನು ಪರಿಶೀಲಿಸಿಕೊಳ್ಳಿ.ಅವಧಿ ಮೀರಿದ ಪದಾರ್ಥಗಳನ್ನು ಬಳಕೆ ಮಾಡಬೇಡಿ. ಅಕ್ಟೋಬರ್ 21 ರೊಳಗೆ ಅಕ್ಕಿ ಮತ್ತು ಗೋದಿ ಸರಬರಾಜಾಗಲಿದೆ.ಇನ್ನೂ ವಿದ್ಯಾರ್ಥಿಗಳ ಪರಿವರ್ತನಾ ವೆಚ್ಚ ಬಳಸಿಕೊಳ್ಳಿಕೊಂಡು ಉಳಿದ ಆಹಾರ ಪದಾರ್ಥಗಳನ್ನು ಖರೀದಿ ಮಾಡಿಕೊಳ್ಳಿ ಎಂದು ಸೂಚಿಸಲಾಗಿದೆ.
ಶಾಲಾ ಸಿಬ್ಬಂದಿಯು ‘ಅ.20 ರೊಳಗೆ ನಿಗದಿಪಡಿಸಿರುವಂತೆ ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲಿಸಿದ ಮಾಹಿತಿಯನ್ನು ಪಡೆದುಕೊಳ್ಳಬೇಕು.ಇಲ್ಲದಿದ್ದರೆ ಮುಖ್ಯ ಶಿಕ್ಷಕರನ್ನೇ ಹೊಣೆ ಮಾಡಲಾಗುವುದು.ಇದಲ್ಲದೇ ಮುಖ್ಯ ಹಾಗೂ ಸಹಾಯಕ ಅಡುಗೆಯವರು ಕಡ್ಡಾಯವಾಗಿ ಎರಡೂ ಕೋವಿಡ್ ಡೋಸ್ ಪಡೆದುಕೊಂಡಿರಬೇಕು’ ಎಂದು ವಿವರಿಸಲಾಗಿದೆ.
ಕಳೆದ ವರ್ಷ ಕೋವಿಡ್ ಕಾರಣದಿಂದ ಶಾಲೆಗಳು ಭೌತಿಕವಾಗಿ ನಡೆಯದ ಕಾರಣ ಮಧ್ಯಾಹ್ನದ ಬಿಸಿಯೂಟ ಯೋಜನೆ ಸ್ಥಗಿತವಾಗಿತ್ತು. ಇದಕ್ಕೆ ಪರ್ಯಾಯವಾಗಿ ಆಹಾರ ಧಾನ್ಯಗಳನ್ನು ಮಕ್ಕಳ ಮನೆಬಾಗಿಲಿಗೇ ಇಲಾಖೆ ತಲುಪಿಸಿತ್ತು. ಅದೇ ರೀತಿ ಪ್ರತೀ ವರ್ಷ ಬೇಸಿಗೆ ರಜೆ ಅವಧಿಯಲ್ಲೂ ಮಕ್ಕಳಿಗೆ ಬಿಸಿಯೂಟ ನೀಡಲಾಗಿತ್ತು.
ಕೊವೀಡ್ ಹಿನ್ನೆಲೆ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು.ಕೊರೋನಾ ನಿಯಂತ್ರಣಕ್ಕೆ ಬಂದಿರುವುದರಿಂದ ಬಿಸಿಯೂಟವನ್ನು ಪುನರಾರಂಭಿಸಲಾಗುತ್ತಿದೆ.ಇದೀಗ 6 ರಿಂದ 10 ನೇ ತರಗತಿ ವರೆಗೆ ಶಾಲೆಗಳು ಆರಂಭವಾಗಿವೆ.1 ರಿಂದ 5 ನೇ ತರಗತಿಯೂ ಶೀಘ್ರದಲ್ಲೇ ಆರಂಭವಾಗುವ ಸಾಧ್ಯತೆ ಇದೆ.
ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ 2021ರ ಮೇ ಮತ್ತು ಜೂನ್ ತಿಂಗಳ ಬೇಸಿಗೆ ರಜೆಯ ಆಹಾರ ಭದ್ರತಾ ಭತ್ಯೆಯ ಪರಿವರ್ತನಾ ವೆಚ್ಚವನ್ನು (ಕುಕಿಂಗ್ ಕಾಸ್ಟ್) 1ರಿಂದ 8ನೇ ತರಗತಿ ವರೆಗಿನ ಸರ್ಕಾರಿ ಶಾಲಾ ಮಕ್ಕಳಿಗೆ ನಗದು ರೂಪದಲ್ಲಿ ನೀಡಲು ಸರ್ಕಾರ ನಿರ್ಧರಿಸಿದೆ.
ಈ ಸಂಬಂಧ ನಗದನ್ನು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ನೇರ ವರ್ಗಾವಣೆಗೆ ತೀರ್ಮಾನಿಸಿದ್ದು, ಸಂಬಂಧಿಸಿದ ಎಲ್ಲ ಮಕ್ಕಳ ಬ್ಯಾಂಕ್ ಖಾತೆಗಳ ಮಾಹಿತಿ ಸಂಗ್ರಹಿಸಿ ನೀಡುವಂತೆ ರಾಜ್ಯದ ಎಲ್ಲಾ ಉಪ ನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಇಲಾಖೆಯ ಆಯುಕ್ತ ವಿ.ಅನ್ಬುಕುಮಾರ್ ಸೂಚನೆ ನೀಡಿದ್ದಾರೆ.