ಮೇಕೆ ದಾಟಲಿದು ಸಮಯವಲ್ಲ – ಕೇವಲ ಡಿ.ಕೆ. ವೈಭವೀಕರಣ

ಉಮೇಶ ಗೌರಿ (ಯರಡಾಲ)

ಲೇಖಕರು:ಸಿದ್ದು ಯಾಪಲಪರವಿ.

ಕಾಂಗ್ರೆಸ್ ಪಾದಯಾತ್ರೆ ನಿಲ್ಲಿಸಲೆಂದೇ ವೀಕ್ ಎಂಡ್ ಕರ್ಫ್ಯೂ. ಮೈಲೇಜ್ ಪಡೆಯಲೆಂದೇ ಆರಂಭವಾದ ಪಾದಯಾತ್ರೆ. ಇವು ಇವತ್ತಿನ ಹೈಲೈಟ್ಸ್. ಮೇಕೆದಾಟು ಯೋಜನೆ ಕಾರ್ಯಗತಗೊಳಿಸಲು ಇರಬಹುದಾದ ತಾಂತ್ರಿಕ ಮತ್ತು ಕಾನೂನಾತ್ಮಕ ತೊಡಕುಗಳು, ಕಾರಣಗಳನ್ನು ಹುಡುಕಿ ಪರಿಹರಿಸಿದರೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ ಎಂಬುದು ಎಲ್ಲರ ಅಂಬೋಣ.

ಆದರೆ ಇಂತಹ ಅಪಾಯಕಾರಿ ಕರೋನ ಸಂದರ್ಭದಲ್ಲಿ, ಸೂಕ್ತ ಸಮಯವಲ್ಲ ಎಂಬ ಮಾತೂ ಇದೆ.ಹೌದು ಆದರೆ ಈ ಕುರಿತು ಡಿ.ಕೆ. ಕೇಂದ್ರಿತ ಕಾಂಗ್ರೆಸ್ಸಿಗರು ಪಾದಯಾತ್ರೆಯ ನಿರ್ಣಯ ಮಾಡಿದ್ದು ಮೇಲ್ನೋಟಕ್ಕೆ ಸ್ವಾಗತಿಸಲಾಯಿತು.ಕಾಂಗ್ರೆಸ್ ಪಕ್ಷ ತನ್ನ ಒಗ್ಗಟ್ಟು ಪ್ರದರ್ಶನ ಮಾಡುವ ಸದಾವಕಾಶ ಇದು ಎಂಬ ಮಾತು ಕೂಡ ಕಾಂಗ್ರೆಸ್ ಕಾರಿಡಾರಿನಲ್ಲಿ ಕೇಳಿ ಬಂತು.

ಕೆ.ಪಿ.ಸಿ.ಸಿ.ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮತ್ತು ಸಿದ್ರಾಮಯ್ಯ ಅವರ ಗುಂಪುಗಾರಿಕೆ ಮತ್ತು ಆಂತರಿಕ ಕಲಹ ಬೂದಿ ಮುಚ್ಚಿದ ಕೆಂಡ. ಮೂಲ ಮತ್ತು ವಲಸಿಗರು ಎಂಬ ರೋಗ ಈಗ ಎಲ್ಲಾ ಪಕ್ಷಗಳಲ್ಲಿ ಸಾಮಾನ್ಯ.

ಮೂಲ ಕಾಂಗ್ರೆಸ್ಸಿನ ಅತ್ಯಂತ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರೀಯ ರಾಜಕಾರಣದ ಮೇಲ್ಮನೆ ವಿರೋಧ ಪಕ್ಷದ ನಾಯಕರು, ವಲಸೆ ಕಾಂಗ್ರೆಸ್ ನಾಯಕರಾದ ಸಿದ್ರಾಮಯ್ಯ ವಿರೋಧ ಪಕ್ಷದ ನಾಯಕರು. ಮುಂದೆ ಮುಖ್ಯಮಂತ್ರಿ ಕುರ್ಚಿಯ ರೇಸಿನಲ್ಲಿರುವ ಡಿ.ಕೆ. ಒಟ್ಟಾಗಿ ಸೇರಿ ಪಾದಯಾತ್ರೆ ಆರಂಭಿಸಿರುವುದು ಮಾತ್ರ ವಿಶೇಷ.

ಪಾದಯಾತ್ರೆಯ ಫಲಶೃತಿ ರಾಜಕಾರಣದಲ್ಲಿ ಪಾದಯಾತ್ರೆಗೆ ತನ್ನದೇ ಆದ ಇತಿಹಾಸವಿದೆ. ಪಾದಯಾತ್ರೆಯ ರೂವಾರಿ ಮಹಾತ್ಮ ಗಾಂಧೀಜಿಯವರು ಇಡೀ ದೇಶಕ್ಕೆ ಆದರ್ಶ. ಆದರೆ ನಂತರದ ದಿನಗಳಲ್ಲಿ ಪಾದಯಾತ್ರೆ ತನ್ನ ಸ್ವರೂಪ ಬದಲಿಸಿಕೊಂಡು ಹೈಟೆಕ್ ಸ್ವರೂಪ ಪಡೆದುಕೊಂಡಿತು. ಸರಳತೆ,ಪ್ರಾಮಾಣಿಕತೆ ಮಾಯವಾಗಿ ಕೇವಲ ರಾಜಕೀಯ ಗೆಲುವಿನ ವಾಸನೆ ದಟ್ಟವಾಗತೊಡಗಿತು.

ಎರಡು ದಶಕದ ಹಿಂದೆ ಎಸ್.ಎಂ.ಕೃಷ್ಣ ಆರಂಭಿಸಿದ ಪಾಂಚಜನ್ಯ ಯಾತ್ರೆ ಮತ್ತು ಕಳೆದ ದಶಕದ ಸಿದ್ರಾಮಯ್ಯನವರ ಬಳ್ಳಾರಿ ಪಾದಯಾತ್ರೆ ಕಾಂಗ್ರೆಸ್ ಅಧಿಕಾರ ಹಿಡಿಯಲು ಮುಖ್ಯ ಕಾರಣ.ಆಳುವ ಪಕ್ಷಗಳ ವಿರೋಧಿ ಅಲೆಯ ಲಾಭ ಪಡೆಯಲು ಈ ಪಾದಯಾತ್ರೆಗಳು ಉಪಯೋಗಕ್ಕೆ ಬರುತ್ತವೆ ಎಂಬ ಸೂತ್ರ ರಾಜಕೀಯ ಪಕ್ಷಗಳಿಗೆ ಅರ್ಥವಾಗಿದೆ. ಈ ಸೂತ್ರದ ಎಳೆ ಹಿಡಿದು ಡಿ.ಕೆ. ತುಂಬಾ ಪ್ರೊಫೆಷನಲ್ ಮತ್ತು ಹೈಟೆಕ್ ಈವೆಂಟ್ ತರಹದ ಪಾದಯಾತ್ರೆ ಆರಂಭಿಸಿ, ಒಂದು ಹಂತದ ಯಶಸ್ಸು ಪಡೆದಿದ್ದಾರೆ.
ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಪಾದಯಾತ್ರಿಕರಿಗೆ ಅದ್ಭುತ ವ್ಯವಸ್ಥೆ ಕಲ್ಪಿಸಿದ್ದಾರೆ.

ವೈಯಕ್ತಿಕ ರಾಜಕೀಯ ಜ್ಞಾನ ಮತ್ತು ವರ್ಚಸ್ಸಿಗೆ ಮಿಗಿಲಾದ ವ್ಯವಹಾರ ಜ್ಞಾನ ಅವರಿಗಿದೆ. ಬಾಡಿ ಲಾಂಗ್ವೇಜ್, ಇತ್ಯಾದಿ ವಿಷಯಗಳನ್ನು ಗಂಭೀರವಾಗಿ ತೆಗೆದುಕೊಳ್ಳದೆ ಕಾಂಗ್ರೆಸ್ ಪಕ್ಷದ ಒಂದು ಗುಂಪು ಡಿ.ಕೆ. ಶೈಲಿಯನ್ನು ಆರಾಧನೆ ಮಾಡುತ್ತದೆ. ಅದಕ್ಕೆ ಬೇಕಾಗಿರುವ ಎಲ್ಲಾ ಅರ್ಹತೆ ಅವರಿಗಿದೆ ಆದರೆ ಇದು ಮುಖ್ಯಮಂತ್ರಿ ಕುರ್ಚಿಯ ಸನಿಹಕ್ಕೆ ಕೊಂಡೊಯ್ಯಬಹುದೆ? ಎಂಬುದನ್ನು ಸದ್ಯ ಹೇಳಲಾಗದು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಖರ್ಗೆ ಅವರು ರೇಸಿನಲ್ಲಿದ್ದಾರೆ ಎಂಬುದನ್ನು ಮರೆಯಲಾಗದು. ಮತ್ತು ಸಿದ್ರಾಮಯ್ಯ ಅವರ ಬೆಂಬಲವಿಲ್ಲದೆ ಅಧಿಕಾರ ಹಿಡಿಯುವುದು ಸುಲಭವಲ್ಲ.

ಮೇಕೆದಾಟು ಪಾದಯಾತ್ರೆಯಲ್ಲಿ ಉಪಸ್ಥಿತರಿದ್ದ ಗಣ್ಯರು

ಈ ಎಲ್ಲಾ ಹೌದು-ಅಲ್ಲಗಳ ಆಚೆಗೆ ಪಾದಯಾತ್ರೆ ಪಕ್ಷಕ್ಕೆ ಜೀವ ತುಂಬಿದೆ.
ಕರೋನ ಲಾಕ್ ಡೌನ್ ನೆಪದಲ್ಲಿ ಪಾದಯಾತ್ರೆ ತಡೆಯುವ ಉದ್ದೇಶವನ್ನು ಆಳುವ ಸರಕಾರ ಹೊಂದಿತ್ತು. ಆದರೆ ತನ್ನ ನಿರ್ಣಯ ಬದಲಿಸಿ ಅವಕಾಶ ಮಾಡಿಕೊಟ್ಟಿದೆ. ‘ತಡೆದರು ಲಾಭ, ನಡೆದರೂ ಲಾಭ’ ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಪಕ್ಷ ಇತ್ತು.ಆದರೆ ಈಗ ನಡೆದು ಕಾಂಗ್ರೆಸ್ ಗೆದ್ದಿದೆ. ಡಿ.ಕೆ. ತಾತ್ಕಾಲಿಕ ಮೈಲೇಜ್ ಪಡೆದುಕೊಂಡಿದ್ದಾರೆ. ಜ್ವರದ ಕಾರಣದಿಂದ ಸಿದ್ರಾಮಯ್ಯ ಬೆಂಗಳೂರಿಗೆ ಮರಳಿದ್ದಾರೆ.
ನಾಳೆ ಪಾದಯಾತ್ರೆ ಮುಗಿಯುತ್ತದೆ ಮುಂದೇನು? ಇಂತಹ ನೂರಾರು ಪ್ರಶ್ನೆಗಳ ಮೂಲ ಉದ್ದೇಶ ಅಧಿಕಾರ ಹಿಡಿಯುವುದು ಅಷ್ಟೇ. ಮುಂದೆ ಹತ್ತಾರು ಕಾರಣಗಳು ಅಧಿಕಾರ ಹಿಡಿಯಲು ನೆರವಾಗಬಹುದು. ಕಾಲದ ನಿರ್ಣಯಕ್ಕೆ ಪಾದಯಾತ್ರೆ ಕಿಡಿ ಹೊತ್ತಿಸಿದೆ.

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";