ಡಬಲ್ ಮರ್ಡರ್ ಕೇಸ್ ಭೇದಿಸಿದ ಗದಗ ಜಿಲ್ಲಾ ಪೋಲಿಸರು, ಆರೋಪಿಗಳ ಬಂಧನ

ಉಮೇಶ ಗೌರಿ (ಯರಡಾಲ)

ಗದಗ(ಅ.31): ಬಳ್ಳಾರಿ ಜಿಲ್ಲೆಯಲ್ಲಿ ಇತೀಚಿಗೆ ಎರಡು ಕೊಲೆ ನಡೆದಿದ್ದ ಪ್ರಕರಣಗಳನ್ನು ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ನಮ್ಮ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ ಎನ್‌ ಅವರು ಹೇಳಿದ್ದಾರೆ.

ಅವರು ಶನಿವಾರ ಸಂಜೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅ. 27ರಂದು ತಾಲೂಕಿನ ಅಸುಂಡಿ ಗ್ರಾಮದಲ್ಲಿ 14 ವರ್ಷದ ಬಾಲಕಿಯ ಕೊಲೆಗೆ ಸಂಬಂಧಿಸಿದಂತೆ ವಿಶೇಷ ತಂಡಗಳನ್ನು ರಚಿಸಿ ತನಿಖೆ ನಡೆಸಿದ್ದ ಎರಡು ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ಅಸುಂಡಿ ಗ್ರಾಮದಲ್ಲಿ ಕೊಲೆಯಾದ ಅಪ್ರಾಪ್ತ ಬಾಲಕಿ ಆರೋಪಿಯೊಂದಿಗೆ ಒಂದು ವರ್ಷದಿಂದ ಸ್ನೇಹ ಸಲುಗೆಯಿದ್ದು, ಬಾಲಕಿಯು ಬೇರೆ ಹುಡುಗರೊಂದಿಗೆ ಸಹ ಸಲುಗೆಯಿಂದಿರಬಹುದು ಎಂದು ಸಂಶಯಗೊಂಡು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಈ ವಿಷಯದ ಕುರಿತು ಬಾಲಕಿಯೊಂದಿಗೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋಗಿದ್ದರಿಂದ ಆರೋಪಿಯು ಬಾಲಕಿಯ ಕುತ್ತಿಗೆ ಹಿಚುಕಿ ಅರೆಪ್ರಜ್ಞಾವಸ್ಥೆಯಲ್ಲಿದ್ದಾಗ ಅವಳನ್ನು ಎತ್ತಿಕೊಂಡು ಹೋಗಿ ಹತ್ತಿರದ ಶೆಡ್ಡಿನಲ್ಲಿ ಹಾಕಿ ಟವೆಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ, ಅಲ್ಲದೆ ಶವದ ಗುರುತು ಸಿಗಬಾರದೆಂದು ಅದಕ್ಕೆ ಪ್ಲಾಸ್ಟಿಕ್‌ ಗೊಬ್ಬರ ಚೀಲದಿಂದ ಮುಚ್ಚಿರುವುದಾಗಿ ಆರೋಪಿಯು ತಿಳಿಸಿದ್ದಾನೆ ಎಂದರು.

ಅದೇ ರೀತಿ ಅ. 26ರಂದು ಮುಂಡರಗಿ ತಾಲೂಕಿನ ಹಳ್ಳಿಗುಡಿ ಗ್ರಾಮದಲ್ಲಿ ಮಹಿಳೆಯ ಕೊಲೆ ಪ್ರಕರಣಕ್ಕೆ ಓರ್ವನನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಮೃತ ಮಹಿಳೆ ಪಾರ್ವತಮ್ಮ ಮುದ್ಲಾಪುರ ಹಳ್ಳಿಗುಡಿ ಗ್ರಾಮದ ನಿವಾಸಿಯಾಗಿದ್ದು, ಹಳ್ಳಿಗುಡಿ-ಪೇಠಾಲೂರ ಗ್ರಾಮದ ಸರಹದ್ದಿನಲ್ಲಿರುವ ತನ್ನ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಪಕ್ಕದ ಹೊಲದಲ್ಲಿದ್ದ ಆರೋಪಿಯು ತನ್ನ ಹೊಲದಲ್ಲಿನ ಕಸವನ್ನು ಮೃತ ಮಹಿಳೆಯ ಹೊಲದ ಬದುವಿನಲ್ಲಿ ತಂದು ಸುರಿದ ಬಗ್ಗೆ ಪ್ರಶ್ನಿಸಿ ಆರೋಪಿಯೊಂದಿಗೆ ಮಾತಿಗೆ ಮಾತು ಬೆಳೆದಾಗ ಆರೋಪಿಯು ತನ್ನಲ್ಲಿದ್ದ ಕೊಡಲಿಯಿಂದ ಮೃತಳ ತಲೆಗೆ ಹೊಡೆದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದ ಪ್ರಕರಣದ ತನಿಖೆ ಮುಂದುವರೆದಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ ಎನ್‌. ಅವರು ಹೇಳಿದರು.

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";