ಹುಬ್ಬಳ್ಳಿ (ಸೆ,25): ವಾಣಿಜ್ಯ ನಗರಿಯಲ್ಲಿ ಸೆಪ್ಟೆಂಬರ್ 26 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪೌರ ಸನ್ಮಾನ ಮಾಡಲಾಗುತ್ತದೆ. ಕಾರ್ಯಕ್ರಮಕ್ಕಾಗಿ ಈಗಾಗಲೇ ಸಿದ್ಧತೆಗಳು ಭರದಿಂದ ಸಾಗಿವೆ. ಕಾರ್ಯಕ್ರಮದಲ್ಲಿ ಜಗದೀಶ್ ಶೆಟ್ಟರ್ ಅವರಿಗೆ ವೇದಿಕೆಯ ಮೇಲೆ ಸ್ಥಾನ ನೀಡದಿರುವ ಬಗ್ಗೆ ಬಿಜೆಪಿ ವಲಯದಲ್ಲಿ ತೀವ್ರ ಆಕ್ಷೇಪ ಕೇಳಿಬಂದಿದೆ. ವೇದಿಕೆ ಮೇಲಿನ ಗಣ್ಯರ ಪಟ್ಟಿಯಲ್ಲಿ ಜಗದೀಶ್ ಶೆಟ್ಟರ್ ಅವರ ಹೆಸರನ್ನು ಕೈಬಿಡಲಾಗಿದೆ. ಉದ್ದೇಶಪೂರ್ವಕವಾಗಿಯೇ ಹೀಗೆ ಮಾಡಿರಬಹುದು ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದ ವಿವರಗಳು ಬಹಿರಂಗಗೊಂಡಿದ್ದು, ವೇದಿಕೆಯಲ್ಲಿ ಒಟ್ಟು 9 ಜನರಿಗೆ ಸ್ಥಾನವನ್ನು ಕಲ್ಪಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವರಾದ ಸಿ. ಎನ್. ಅಶ್ವತ್ಥ್ ನಾರಾಯಣ, ಶಂಕರ್ ಪಾಟೀಲ್ ಮುನೇನಕೊಪ್ಪ, ಬೈರತಿ ಬಸವರಾಜ, ಹಾಲಪ್ಪ ಆಚಾರ್ ಹುಬ್ಬಳ್ಳಿ ಧಾರವಾಡ ಮೇಯರ್ ಈರೇಶ್ ಅಂಚಟಗೇರಿ ಅವರಿಗೆ ಮಾತ್ರ ವೇದಿಕೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ. ವೇದಿಕೆಯ ಮೇಲೆ ಜಗದೀಶ್ ಶೆಟ್ಟರ್‌ಗೂ ಅವಕಾಶ ಸಿಗಬೇಕಿತ್ತು ಎನ್ನುವುದು ಬಿಜೆಪಿ ಪಕ್ಷದ ಕಾರ್ಯಕರ್ತರ ಆಗ್ರಹವಾಗಿದೆ.
ಕಾರ್ಯಕ್ರಮದಲ್ಲಿ ಯಾರಿಗೆಲ್ಲಾ ಅವಕಾಶ? ಧಾರವಾಡ ಜಿಲ್ಲೆಗೆ ಈ ಹಿಂದೆಯೂ ಹಲವು ರಾಷ್ಟ್ರಪತಿಗಳು ಭೇಟಿ ನೀಡಿದ್ದರು. ದ್ರೌಪದಿ ಮುರ್ಮು ಅವರು ಜಿಲ್ಲೆಗೆ ಭೇಟಿ ನೀಡುತ್ತಿರುವ 5ನೇ ರಾಷ್ಟ್ರಪತಿ ಆಗಲಿದ್ದಾರೆ. ಈ ಮೊದಲು ಸರ್ವಪಲ್ಲಿ ರಾಧಾಕೃಷ್ಣನ್, ಗ್ಯಾನಿ ಜೇಲ್‍ಸಿಂಗ್, ಡಾ.ಅಬ್ದುಲ್ ಕಲಾಂ, ಪ್ರಣವ್ ಮುಖರ್ಜಿ ಅವರು ಧಾರವಾಡ ಜಿಲ್ಲೆಗೆ ಬಂದಿದ್ದರು. ರಾಷ್ಟ್ರಪತಿ ಕಾರ್ಯಕ್ರಮವು ಸುಮಾರು ಒಂದೂವರೆ ಗಂಟೆಗಳ ಕಾಲ ನಡೆಯಲಿದೆ. ಸಿದ್ದಾರೂಢರ ಬೆಳ್ಳಿ ಪ್ರತಿಮೆ, ಪುಸ್ತಕ, ಧಾರವಾಡ ಪೇಡಾವನ್ನು ನೆನಪಿನ ಕಾಣಿಕೆಯಾಗಿ ರಾಷ್ಟ್ರಪತಿಯವರಿಗೆ ನೀಡಲಾಗುವುದು. ನಂತರ ಪಾಲಿಕೆಯ 81 ಸದಸ್ಯರೊಂದಿಗೆ ಗ್ರೂಪ್ ಫೋಟೊ ತೆಗೆಯಲಾಗುವುದು. ಕಾರ್ಯಕ್ರಮದಲ್ಲಿ 5,000 ಜನರು ಪಾಲ್ಗೊಳ್ಳಲು ಅವಕಾಶವಿದೆ. 500 ಪೌರಕಾರ್ಮಿಕರು ಪಾಲ್ಗೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ. ಬಳಿಕ ಧಾರವಾಡದ ಐಐಐಟಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು 400 ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಮೇಯರ್ ಈರೇಶ ಅಂಚಟಗೇರಿ ಮಾಹಿತಿಯನ್ನು ನೀಡಿದ್ದಾರೆ.
ರಾಷ್ಟ್ರಪತಿಯವರಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಪೌರಸನ್ಮಾನ ಏರ್ಪಡಿಸಲಾಗಿದೆ. ರಾಷ್ಟ್ರಪತಿಗಳಿಗೆ ನೆನಪಿನ ಕಾಣಿಕೆಯಾಗಿ ಸಿದ್ಧಾರೂಢರ 1.5 ಕೆಜಿ ಬೆಳ್ಳಿಯ ಮೂರ್ತಿಯನ್ನು ನೀಡಲಾಗುತ್ತದೆ. ಬೆಳಗ್ಗೆ 11 ಗಂಟೆಗೆ ಹುಬ್ಬಳ್ಳಿಯ ಜಿಮ್‌ಖಾನಾ ಮೈದಾನದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.