ಮತ್ತೆ ಸುದ್ದಿಯಲ್ಲಿ ಪ್ರಾಮುಖ್ಯತೆ ಪಡೆದ ರೈತರ ಆತ್ಮಹತ್ಯೆ

ಉಮೇಶ ಗೌರಿ (ಯರಡಾಲ)

ಸುದ್ದಿ ಸದ್ದು ನ್ಯೂಸ್

ಕರ್ನಾಟಕ ದೇಶದಲ್ಲಿ ಎರಡನೆಯ ಸ್ಥಾನ ಎಂಬ ಮಾಹಿತಿ ತಿಳಿದು ಬಂದಿದೆ ಈಗಲಾದರೂ ಅನ್ನ ತಿನ್ನುವ ನಾವುಗಳು ಒಂದಷ್ಟು ಜವಾಬ್ದಾರಿ ವಹಿಸಿಕೊಳ್ಳೋಣ.

ನಾವು ಸಾಮಾನ್ಯರು, ಆಡಳಿತಗಾರರಲ್ಲ, ಅಧಿಕಾರಿಗಳಲ್ಲ, ಪತ್ರಕರ್ತರಲ್ಲ, ಸ್ವಾಮೀಜಿಗಳಲ್ಲ ರೈತರು ಬೆಳೆದ ಆಹಾರ ತಿನ್ನುವ ಋಣಭಾರದವರು. ಹಾಗಾದರೆ ನಾವು ಏನು ಮಾಡಬಹುದು.

ಸಾಮಾನ್ಯವಾಗಿ ರೈತರ ಆತ್ಮಹತ್ಯೆ ಸಂಭವಿಸುವುದು ಗ್ರಾಮೀಣ ಭಾಗದಲ್ಲಿಯೇ ಹೆಚ್ಚು.ಅದಕ್ಕೆ ಮುಖ್ಯವಾಗಿ ಹಣಕಾಸಿನ ತೊಂದರೆ ಮತ್ತು ಅದರಿಂದ ಆಗಬಹುದಾದ ಮಾನಹಾನಿ. ಮಾನಹಾನಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವುದು ಅತಿ ಹೆಚ್ಚು. ಇದನ್ನು ಗಮನದಲ್ಲಿಟ್ಟುಕೊಂಡು. ನಾವು ಒಂದಿಷ್ಟು ಕಾರ್ಯ ನಿರ್ವಹಿಸಬೇಕಾದ ಅವಶ್ಯಕತೆ ಇದೆ.

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಾನವೀಯ ಮೌಲ್ಯಗಳ ಬಗ್ಗೆ ಜಾಗೃತಿ ಇರುವವರು ಮತ್ತು ಸಾಮಾಜಿಕ ತುಡಿತ ಇರುವ ಕೆಲವು ಶಿಕ್ಷಕರು, ಪೋಲೀಸರು, ವೈದ್ಯರು, ಗ್ರಾಮ ಪಂಚಾಯತಿ ಸದಸ್ಯರು, ಪಶು ವೈದ್ಯರು, ಹೋರಾಟಗಾರರು ಮುಂತಾದವರು ಕನಿಷ್ಠ ಹದಿನೈದು ದಿನಗಳಿಗೆ ಒಮ್ಮೆ ಸಭೆ ಸೇರಿ ಒಂದು ಗಂಟೆ ಸಂವಾದ ಚರ್ಚೆ ನಡೆಸಿ ಉಳಿದ ಸುಮಾರು 6 ಗಂಟೆಗಳ ಸಮಯವನ್ನು ಯಾವುದಾದರೂ ಒಂದು ಹಳ್ಳಿಗೆ ಹೋಗಿ ರೈತರನ್ನು ಕುಟುಂಬ ಸಮೇತ ಸೇರಿಸಿ ಆತ್ಮಹತ್ಯೆಯ ಬಗ್ಗೆಯೇ ಒಂದು ಮಾತುಕತೆ ನಡೆಸುವುದು. ಅದರಲ್ಲೂ ಸಾಲ ಇರುವ ಕುಟುಂಬದವರನ್ನು ಕಡ್ಡಾಯವಾಗಿ ಸೇರಿಸುವುದು.

ಅಲ್ಲಿ ಎಲ್ಲಿಂದಲೋ ಬಂದ ಯಾರೋ ಸಂಪನ್ಮೂಲ ವ್ಯಕ್ತಿ ಭಾಷಣ ಮಾಡಬಾರದು. ರೈತರನ್ನೇ ಈ ಕುರಿತು ಮಾತನಾಡಿಸಬೇಕು. ಸ್ಥಳೀಯ ವ್ಯಕ್ತಿಗಳಿಗೇ ಆದ್ಯತೆ ಕೊಡಬೇಕು.

ವಿಷಯ : ಮಾನ ಮತ್ತು ಪ್ರಾಣ ಇದರಲ್ಲಿ ಯಾವುದು ಅತಿಮುಖ್ಯ

ಆತ್ಮಹತ್ಯೆಯಿಂದ ಮುಂದೆ ಅವರ ಕುಟುಂಬದಲ್ಲಿ ಆಗಬಹುದಾದ ಪರಿಣಾಮಗಳು.

ಬದುಕು ಮತ್ತು ಸಾವಿನ ನಡುವಿನ ವ್ಯತ್ಯಾಸಗಳು. ಪ್ರಕೃತಿಯ ಸಹಜ ನಿಯಮಗಳು.

ಇಲ್ಲಿ ಬುದ್ದಿಯ ಪ್ರದರ್ಶನ ಇರಬಾರದು. ಹೃದಯಗಳ ಸಂಭಾಷಣೆಯೇ ಮುಖ್ಯವಾಗಬೇಕು. ಮನಸ್ಸುಗಳಿಗೆ ನಾಟುವಂತೆ, ಮುಂದೆ ಎಂದಾದರೂ ಆತ್ಮಹತ್ಯೆಯ ಯೋಚನೆ ಬಂದಾಗ ಈ ಸಂವಾದ ಅವರಿಗೆ ನೆನಪಾಗಿ ತಮ್ಮ ಯೋಚನೆ ಬದುಕಿನ ಕಡೆಗೆ ಸಾಗುವಂತೆ ಮಾಡವಷ್ಟು ಪರಿಣಾಮವಾಗಿಸುವ ಪ್ರಯತ್ನ ಮಾಡಬೇಕು. ಈ ಸಂವಾದ ಯಾವುದೇ ಸಂಘ ಸಂಸ್ಥೆ ಪಕ್ಷ ಜಾತಿ ಧರ್ಮ ಭಾಷೆ ಲಿಂಗ ಚಳವಳಿ ಮುಂತಾದ ಯಾವುದಕ್ಕೂ ಒಳಪಡದೆ ಎಲ್ಲರೂ ಸೇರಿ ಮಾನವೀಯ ಮೌಲ್ಯಗಳ ಹಿನ್ನೆಲೆಯ ವಿಶಾಲತೆ ಹೊಂದಿರಬೇಕು. ಇಲ್ಲದಿದ್ದರೆ ಗುಂಪುಗಾರಿಕೆಯ ಕಾರಣ ಉದ್ದೇಶ ವಿಫಲವಾಗಬಹುದು. ಇಲ್ಲಿ ಸಂಯಮ ಅತಿಮುಖ್ಯ. ಯಾವುದೇ ನಿರೀಕ್ಷೆ, ಪ್ರತಿಫಲಾಪೇಕ್ಷೆ, ಸಾಧಿಸುವ ಛಲ, ಸೇವೆಯ ಅಹಂ ಯಾವುದೂ ಇರಬಾರದು. ಕೇವಲ ನಮ್ಮ ಕರ್ತವ್ಯ ಎಂದು ಮಾತ್ರ ಪರಿಗಣಿಸಿ ಮಾಡಬೇಕು. ಇನ್ನೊಬ್ಬರ ಒಳಗೊಳ್ಳುವಿಕೆ ಬೊಟ್ಟು ಮಾಡದೆ ನಮ್ಮ ಆತ್ಮಸಾಕ್ಷಿಯಂತೆ ನಡೆದುಕೊಳ್ಳಬೇಕು. ಇನ್ನೊಂದು ಮುಖ್ಯ ವಿಷಯ. ಇಲ್ಲಿ ಯಾವುದೇ ರೀತಿಯ ಹಣಕಾಸಿನ ವ್ಯವಹಾರ ಇರಬಾರದು. ಇದು ಸಂಪೂರ್ಣ ಉಚಿತ ಸೇವೆ. ಊಟ ಕಾಫಿ ತಿಂಡಿಯ ವಿಷಯದಲ್ಲಿ ಒಂದು ಮಿತಿಯೊಳಗೆ ಪರಿಚಿತರ ಸಹಾಯ ಪಡೆಯಬಹುದು.

ಪ್ರಶಸ್ತಿ ಪ್ರಚಾರ ಸನ್ಮಾನಗಳ ಮೋಹವನ್ನು ಮೀರಿದ ವ್ಯಕ್ತಿತ್ವ ತುಂಬಾ ಅವಶ್ಯಕ. ಕೊನೆಯದಾಗಿ, ಇದು ಅವರವರ ವಿವೇಚನೆಗೆ ಬಿಟ್ಟದ್ದು. ಯಾವುದೇ ಒತ್ತಡ ಇರುವುದಿಲ್ಲ. ಅನ್ನದಾತನ ಜೀವ ಉಳಿಸುವ ಒಂದು ಸಾಧ್ಯತೆಗಾಗಿ ನಮ್ಮ ಅಳಿಲು ಸೇವೆ ಮಾತ್ರ. ಸಮಾಜದ ಋಣ ತೀರಿಸುವ ಒಂದು ಅವಕಾಶ ಎಂದೂ ಭಾವಿಸಬಹುದು.

ಇದನ್ನು ಪ್ರಾಯೋಗಿಕವಾಗಿ ತಮ್ಮ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಮಾಡಲು ಇಚ್ಚಿಸುವವರು ಯಾವುದೇ ರೀತಿಯ ಮತ್ತಷ್ಟು ಸಲಹೆ ಬೇಕಿದ್ದರೆ ನಿಸ್ಸಂಕೋಚವಾಗಿ ನನ್ನ ಮೊಬೈಲ್ 9844013068 ನಂಬರಿಗೆ ಕಾಲ್ ಮಾಡಿ ಮತ್ತಷ್ಟು ಚರ್ಚೆ ನಡೆಸಬಹುದು ಅಥವಾ ಇದಕ್ಕಿಂತ ಉತ್ತಮ ಸಲಹೆ ಇದ್ದರೆ ಅದನ್ನು ಅನುಷ್ಠಾನ ಗೊಳಿಸಬಹುದು.

ಸುಮ್ಮನೆ ಗೊಣಗುತ್ತಾ ಇರುವ ಬದಲು ಪ್ರಯತ್ನ ಪಡುವುದು ಉತ್ತಮ.ಒಟ್ಟಿನಲ್ಲಿ ಒಂದಷ್ಟು ಜೀವ ಉಳಿಸಲು ನಮ್ಮ ಜವಾಬ್ದಾರಿ ನಿರ್ವಹಿಸೋಣ. ವ್ಯವಸ್ಥೆಯ ಸುಧಾರಣೆಯ ಮುಂದೆ. ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಸ್ಸುಗಳ ಅಂತರಂಗದ ಚಳವಳಿ ಇದಾಗಬೇಕು

ವಿವೇಕಾನಂದ ಹೆಚ್.ಕೆ

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";