ಸುದ್ದಿ ಸದ್ದು ನ್ಯೂಸ್
ಚಂಡೀಗಢ: ರೈತರು ಬಿಜೆಪಿ ಶಾಸಕರೊಬ್ಬರ ಬಟ್ಟೆ ಹರಿದು ಹಾಕಿ ಥಳಿಸಿದ್ದಲ್ಲದೆ ಅವರ ಮೇಲೆ ಕಪ್ಪು ಮಸಿ ಸುರಿದಿರುವ ಘಟನೆ ಪಂಜಾಬ್ನ ಮುಕ್ತ್ಸರ್ ಜಿಲ್ಲೆಯ ಮಲೌತ್ನಲ್ಲಿ ಶನಿವಾರ ನಡೆದಿದೆ. ಅಬೊಹರ್ ಕ್ಷೇತ್ರದ ಬಿಜೆಪಿ ಶಾಸಕ ಅರುಣ್ ನಾರಂಗ್ ಸೇರಿದಂತೆ ಇತರೆ ಸ್ಥಳೀಯ ಬಿಜೆಪಿ ನಾಯಕರನ್ನು ಪ್ರತಿಭಟನಾನಿರತ ರೈತರ ಗುಂಪೊಂದು ಸುತ್ತುವರೆದು ಮನಬಂದಂತೆ ಥಳಿಸಿದ್ದಾರೆ. ಈ ದುರ್ಘಟನೆಯ ಮಲೌತ್ನಲ್ಲಿ ಸುದ್ದಿಗೋಷ್ಠಿಯನ್ನು ಮಾಡಲು ಮುಂದಾದಾಗ ನಡೆದಿದೆ.
ಪ್ರತಿಭಟನಾ ನಿರತ ರೈತರು ಮೊದಲೇ ಶಾಸಕ ಅರುಣ್ ನಾರಂಗ್ ಆಗಮನಕ್ಕಾಗಿ ಬಿಜೆಪಿ ಕಚೇರಿಯ ಬಳಿ ಕಾಯುತ್ತಿದ್ದರು. ನಾರಂಗ್ ಬರುತ್ತಿದ್ದಂತೆ ಅವರ ಮತ್ತು ಅವರ ಕಾರಿನ ಮೇಲೆ ಕಪ್ಪು ಮಸಿ ಎಸೆದಿದ್ದಾರೆ. ಈ ವೇಳೆ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸರು ಶಾಸಕರನ್ನ ಮತ್ತು ಅವರ ಜೊತೆ ಇದ್ದ ಕೆಲ ನಾಯಕರನ್ನ ಹತ್ತಿರದಲ್ಲಿ ಇದ್ದ ಮಳಿಗೆಯೊಂದಕ್ಕೆ ಕರೆತಂದು ಹೆಚ್ಚಿನ ಅನಾಹುತವನ್ನು ತಪ್ಪಿಸಿದರು. ಕೆಲ ಸಮಯದ ನಂತರ ಅಂಗಡಿಯಿಂದ ಹೊರಬಂದಾಗ ಅರುಣ್ ನಾರಂಗ್ ಮತ್ತವರ ಬೆಂಬಲಿಗರನ್ನು ಹಿಡಿದು ರೈತರು ಥಳಿಸಿ, ಬಟ್ಟೆ ಹರಿದಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಕೊನೆಯಲ್ಲಿ ಹರಸಾಹಸ ಪಟ್ಟು ನಾರಂಗ್ ಅವರನ್ನ ಪೊಲೀಸರು ರೈತರ ಗುಂಪಿನಿಂದ ರಕ್ಷಿಸಿ ಬೇರೆ ಸ್ಥಳಕ್ಕೆ ಕರೆದೊಯ್ದರು.
ಶಾಸಕ ಅರುಣ್ ನಾರಂಗ್ ಅವರನ್ನ ರೈತರು ಥಳಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡಿದೆ.