ಸುದ್ದಿ ಸದ್ದು ನ್ಯೂಸ್
ಚನ್ನಮ್ಮನ ಕಿತ್ತೂರು: ನ26: ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ಉಳಿದುಕೊಂಡಿದ್ದ ಚನ್ನಮ್ಮನ ಕಿತ್ತೂರು ಕ್ಷೇತ್ರದ ಮಾಜಿ ಶಾಸಕರು ಮಾಜಿ ಸಚವರೂ ಆಗಿರುವ ಡಿ.ಬಿ.ಇನಾಮದಾರ (ಧಣಿ) ಅವರು ಇಂದು ಕಿತ್ತೂರು ಕ್ಷೇತ್ರಕ್ಕೆ ಆಗಮಿಸಿದ್ದು ಅವರ ಅಸಂಖ್ಯಾತ ಅಭಿಮಾನಿಗಳು ಕಾಂಗ್ರೆಸ್ ಕಾರ್ಯಕರ್ತರು ಹಿತೈಷಿಗಳು ಕಿತ್ತೂರು ಪಟ್ಟಣದಲ್ಲಿ ಅದ್ದೂರಿಯಾಗಿ ಸ್ವಾಗತ ಮಾಡಿಕೊಂಡಿದ್ದು ಈ ದಿನವನ್ನು ಹಬ್ಬದಂತೆ ಸಂಭ್ರಮಿಸಿದ್ದಾರೆ.
ಕಿತ್ತೂರು ಕಾಂಗ್ರೆಸ್ ಈಗಾಗಲೇ ಒಡೆದ ಮನೆಯಾಗಿದ್ದು ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡ ಬಾಬಾಸಾಹೇಬ ಪಾಟೀಲ ಅವರ ಸ್ಪರ್ಧೆಯಿಂದಾಗಿ ಕಿತ್ತೂರು ಕಾಂಗ್ರೆಸ್‌ಗೆ ಅಪಾರ ಹಿನ್ನಡೆಯುಂಟಾಗಿದ್ದು ಬಾಬಾಸಾಹೇಬ ಪಾಟೀಲ ಮತ್ತು ಡಿ.ಬಿ.ಇನಾಮದಾರ ಅವರ ಮಧ್ಯ ಬಿರುಕು ಉಂಟಾಗಿದ್ದು ಇವರಿಬ್ಬರ ನಡುವಿನ ಭಿನ್ನಮತ ಈಗಲೂ ಹಾಗೆಯೇ ಇರುವುದು ಕ್ಷೇತ್ರದಲ್ಲಿ ಸದಾ ಚರ್ಚೆಯಲ್ಲಿರುವ ಸುದ್ದಿಯಾಗಿದೆ.
ಮತ್ತೋರ್ವ ಮುಖಂಡ ಹಬೀಬ ಶಿಲೇದಾರ ಕಾಂಗ್ರೆಸ್ ಪಕ್ಷದ ಮುಂದಿನ ಚುನಾವಣೆಯ ನಾಯಕ ಅಂತ ಕ್ಷೇತ್ರದಲ್ಲಿ ಸುದ್ದಿಯಾಗುತ್ತಿದ್ದು ಕಾಂಗ್ರೆಸ್‌ನಲ್ಲಿ ಮೂರು ಬಣಗಳಾಗಿ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗಿದೆ. ಒಂದು ಹಂತದಲ್ಲಿ ಕಿತ್ತೂರಿನಲ್ಲಿ ಕಾಂಗ್ರೆಸ್ ಮುಳುಗಿದ ಹಡಗು ಎಂಬ ಚರ್ಚೆ ನಡೆಯುತ್ತಿದ್ದು ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಇಂದು ಮಾಜಿ ಸಚಿವ ಡಿ ಬಿ ಇನಾಮದಾರ ಮತ್ತೇ ಕ್ಷೇತ್ರ ಸಂಚಾರ ಕೈಗೊಂಡಿದ್ದು ಕೈ ಕಾರ್ಯಕರ್ತರಲ್ಲಿ ಹೊಸ ಸಂಚಲನ ಮೂಡಿದೆ.
ಮಾಜಿ ಜಿ.ಪಂ ಸದಸ್ಯ ಹಿರಿಯ ಕಾಂಗ್ರೆಸ್ ಮುಖಂಡ ಶಂಕರ ಹೊಳಿ,ಹಬೀಬ ಶಿಲೇದಾರ,ಮಾಜಿ ಕಿತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜು ಲೋಕಾಪೂರ, ಕುಮಾರ ಬಿಕ್ಕಣ್ಣವರ, ಪುಂಡಲೀಕ ನೀರಲಕಟ್ಟಿ,ಚಂದ್ರು ಮಾಳಗಿ, ಸೇರಿದಂತೆ ನೇಸರಗಿ, ಎಂ.ಕೆ.ಹುಬ್ಬಳ್ಳಿ ಕಿತ್ತೂರು, ನೇಗಿನಹಾಳ ಸುತ್ತಮುತ್ತಲಿನ ಕಾರ್ಯಕರ್ತರು ಹಾಗೂ ಅಪಾರ ಪ್ರಮಾಣದ ಕಾರ್ಯಕರ್ತರು ಅಭಿಮಾನಿಗಳು ಇನಾಮದಾರ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿಕೊಂಡರು.
ಪಟ್ಟಣದ ಶಿವಾ ಪೆಟ್ರೊಲ್ ಪಂಪ್ ನಲ್ಲಿ ಜಮಾವಣೆಗೊಂಡ ಅಭಿಮಾನಿಗಳು ಸಂಜೆ ಹೊತ್ತಿಗೆ ಗುರುವಾರ ಪೇಟೆಯ ರಾಣಿ ಚನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.
ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ವೈದ್ಯರ ಸಲಹೆ ಹಾಗೂ ಕಟ್ಟುನಿಟ್ಟಾದ ನಿರ್ದೇಶನದ ಮೇರೆಗೆ ನಾನು ಕ್ಷೇತ್ರಕ್ಕೆ ಬರಲಾಗಲಿಲ್ಲ ಕೋವಿಡ್ ಮಹಾಮಾರಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದು ಸದ್ಯ ಅದರ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ತಾವುಗಳು ಇಂತಹ ಸಂದರ್ಭದಲ್ಲಿಯೂ ಹಬ್ಬದಂತೆ ಸಂಭ್ರಮಿಸಿ ನನ್ನನ್ನು ಸ್ವಾಗತ ಮಾಡಲು ಇಷ್ಟೊಂದು ಸಂಖ್ಯೆಯಲ್ಲಿ ಸೇರಿದ್ದಕ್ಕೆ ತಮಗೆಲ್ಲ ಋಣಿಯಾಗಿದ್ದೇನೆ ಎಂದು ಭೂಮಿತಾಯಿಯನ್ನು ಮುಟ್ಟಿ ನಮಸ್ಕರಿಸಿದರು.
ಆ ನಂತರ ಅವರ ಅಭಿಮಾನಿಗಳೊಂದಿಗೆ ಸ್ವಗ್ರಾಮ ನೇಗಿನಹಾಳಕ್ಕೆ ತೆರಳಿದರು.
ಒಟ್ಟಾರೆ ಮನೆಯೊಂದು ಮೂರು ಬಾಗಿಲಾಗಿದ್ದ ಕಾಂಗ್ರೆಸ್ ಧಣಿಗಳ ಆಗಮನದಿಂದ ಮತ್ತೇ ಚೇತರಿಸಿಕೊಂಡಿದ್ದು ಮುಂದೇನಾಗುತ್ತೋ ಕಾದು ನೋಡಬೇಕಿದೆ.