ಯಾತ ನೀರಾವರಿ ಯೋಜನೆಯನ್ನು ಅಭಿವೃದ್ಧಿ ಪಡಿಸುವಂತೆ  ಆಗ್ರಹಿಸಿ ಪಾದಯಾತ್ರೆ! ವಿಶೇಷವಾಗಿ ಷಷ್ಟ್ಯಬ್ದಿ ‌ಆಚರಿಸಿಕೊಳ್ಳಲು: ಮಾಜಿ ಜಿ.ಪಂ ಸದಸ್ಯ ಚಿಕ್ಕನಗೌಡರ ನಿರ್ಧಾರ

ಬಿ.ಎಂ.ಚಿಕ್ಕನಗೌಡರ
ಉಮೇಶ ಗೌರಿ (ಯರಡಾಲ)

ಬೈಲಹೊಂಗಲ: 11 ಯಾತ ನೀರಾವರಿ ಯೋಜನೆಗೆ ಅನುದಾನಕ್ಕೆ ಆಗ್ರಹಿಸಿ ಪಾದಯಾತ್ರೆ ಮಾಡುವುದರ ಮೂಲಕ ಇದೇ ಮಾರ್ಚ 09 ರಂದು ಮಾಜಿ ಜಿ.ಪಂ ಸದಸ್ಯ, ಸಮಸ್ತ ಲಿಂಗಾಯತ ಹೋರಾಟ ವೇದಿಕೆ ಮುಖ್ಯ ಸಂಘಟಕರಾದ ಬಿ.ಎಂ ಚಿಕ್ಕನಗೌಡರ ಅವರು ತಮ್ಮ 60 ನೆಯ ಹುಟ್ಟುಹಬ್ಬದ ನಿಮಿತ್ತ ‘ಷಷ್ಟ್ಯಬ್ದಿ’ವನ್ನು ವಿಶೇಷವಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ.

ಮಲಪ್ರಭಾ ನದಿಯ ಮೇಲ್ಬಾಗದ ಎರಡು ಬದಿಗೆ ಅಳವಡಿಸಿದ 11 ಯಾತ ನೀರಾವರಿ ಯೋಜನೆಗಳು 12 ವರ್ಷಗಳಿಂದ ಸ್ಥಗಿತಗೊಂಡಿವೆ.1975-76 ರಲ್ಲಿ ಕಾರ್ಯಾರಂಭ ಆಗಿದ್ದು, ಅವು ಸುಮಾರು 55 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿಯನ್ನು ಒದಗಿಸಿದ್ದವು.

2009-10 ರಲ್ಲಿ ಇಂದಿನ ಮುಖ್ಯ ಮಂತ್ರಿಗಳಾದ
ಬೊಮ್ಮಾಯಿಯವರು ಅದೇ ಚೆಂಬರ್‌ದಿಂದ ಟೇಲ್‌ಯಂಡ್‌ದವರೆಗೆ ರಸ್ತೆ ಮತ್ತು ಕಾಲುವೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿದ್ದರು. ನದಿಯಿಂದ ನೀರನ್ನು ಮೇಲೆತ್ತುವ ಬಲವಾದ ಪಂಪುಗಳು ಸುಮಾರು 48 ವರ್ಷಗಳಷ್ಟು ಹಳೆಯದಾಗಿದ್ದು ಗುಜರಿ ಹಂತವನ್ನು ಮೀರಿರುತ್ತವೆ.

ಅಂತಹ ಪಂಪುಗಳನ್ನು ಬದಲಾಯಿಸಿ
ಜಾಕ್ವಾಲ್‌ನಿಂದ ಚೆಂಬರ್‌ವರೆಗೆ ಸ್ಟೀಲ್ ಪೈಪುಗಳನ್ನು ಜೋಡನೆ ಮಾಡಿದಲ್ಲಿ ಮತ್ತೆ ನಮ್ಮ ಭಾಗದ 55 ಸಾವಿರ ಎಕರೆ ನೀರಾವರಿ ಯಥಾಪ್ರಕಾರ ಮುಂದುವರೆಯುತ್ತದೆ.

ಆದರೆ ಇದೇ ಮಾರ್ಚ 2022 ರ ಬಜೆಟ್‌ನಲ್ಲಿ ಈ 11 ಯಾತ ನೀರಾವರಿಗೆ ಸಂಬಂಧಿಸಿದಂತೆ ಯಾವುದೇ ಹಣಕಾಸು ನಿಧಿಯನ್ನು ನೀಡದಿರುವ ಹಿನ್ನೆಲೆಯಲ್ಲಿ ಯಾತ ನೀರಾವರಿ ಯೋಜನೆಯನ್ನು ಅಭಿವೃದ್ಧಿ ಪಡಿಸುವಂತೆ ಆಗ್ರಹಿಸಿ ಯಾತ ನೀರಾವರಿ ವಂಚಿತ ನೀರು ಬಳಕೆದಾರ ರೈತರ ಜೊತೆ ಬೈಲಹೊಂಗಲದ ವೀರಭದ್ರೇಶ್ವರ ಕಲ್ಯಾಣ ಮಂಟಪದಿಂದ ಕಿತ್ತೂರ ಚನ್ನಮ್ಮಾಜಿ ಪುತ್ಥಳಿಯವರೆಗೆ ಪಾದಯಾತ್ರೆ ಮುಖಾಂತರ ಬೈಲಹೊಂಗಲ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಕೊಡುವ ಕಾರ್ಯಕ್ರಮದೊಂದಿಗೆ ಬಿ ಎಮ್ ಚಿಕ್ಕನಗೌಡರ ಅವರು ‘ಷಷ್ಟ್ಯಬ್ದಿ’ ಆಚರಿಸುವುದಾಗಿ ತಿಳಿಸಿದ್ದಾರೆ.

ಈ ಪಾದಯಾತ್ರೆಯಲ್ಲಿ ಉತ್ತರ ಕರ್ನಾಟಕದ ನೀರಾವರಿ ತಜ್ಞ ಸಂಗಮೇಶ ನಿರಾಣಿ ಮತ್ತು ಕಳಸಾ ಬಂಡೂರಿ ಹೋರಾಟದ ಪ್ರಮುಖ ಹೋರಾಟಗಾರ ವಿಜಯ ಕುಲಕರ್ಣಿ, ನರಗುಂದ ಹಾಗೂ ಜಿಲ್ಲೆಯ ಎಲ್ಲ ರೈತ ಸಂಘಟನೆಗಳು ಹಾಗೂ 11 ಯಾತ ನೀರಾವರಿ ಬಳಕೆದಾರರ ಸಂಘಗಳು ಹಾಗೂ ನಾಡಿನ ಎಲ್ಲ ಶ್ರೀಗಳು ಭಾಗವಹಿಸಲಿದ್ದಾರೆ.

Share This Article
";