ತಿಂಗಳಿಗೆ 35 ಸಾವಿರ ಸಂಬಳ ಪಡೆದ್ರೂ, ಸಂಡೇ ಮಾತ್ರ ಸರಗಳ್ಳತನಕ್ಕೆ ಕೈ ಹಾಕಿದ್ದ ಪದವೀಧರ

ಉಮೇಶ ಗೌರಿ (ಯರಡಾಲ)

ಹಾಸನ: ಮೈಸೂರಿನ ಮುಂಡೂರು ಗ್ರಾಮದ ಯುವಕನೋರ್ವ ಎಂ.ಕಾಂ. ಓದಿ, ಖಾಸಗಿ ಕಂಪನಿಯಲ್ಲಿ ತಿಂಗಳಿಗೆ 35 ಸಾವಿರ ವೇತನ ಪಡೆಯುತ್ತಿದ್ದನು. ಆದರೂ ಜೂಜಿನ ಚಟಕ್ಕೆ ಬಿದ್ದು, ಆನ್‍ಲೈನ್ ಕ್ರಿಕೆಟ್  ಬೆಟ್ಟಿಂಗ್, ರಮ್ಮಿ ಅಂತ ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದ.

ಆ ಸಾಲ ತೀರಿಸಲು ಆರೋಪಿ ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಚಿನ್ನ ಕದಿಯುವ ಮೂಲಕ ಕಳ್ಳತನದ ಹಾದಿಯನ್ನು ಹಿಡಿದಿದ್ದನು. ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗುತ್ತಿದ್ದವ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಆರೋಪಿಯನ್ನು ಅಭಿಷೇಕ್ ಎಂದು ಗುರುತಿಸಲಾಗಿದ್ದು, ವಾರವೆಲ್ಲ ರಮ್ಮಿ ಆಡಿ ಅಭಿಷೇಕ್ ಹಣ ಕಳೆದುಕೊಂಡಿದ್ದ. ಹೀಗಾಗಿ ಭಾನುವಾರ ಮಾತ್ರ ಸರಗಳ್ಳತನ ಮಾಡುತ್ತಿದ್ದ. ಹಾಸನ ಜಿಲ್ಲೆಯ ಕೊಣನೂರು, ಹೊಳೆನರಸೀಪುರ, ಗೊರೂರು, ಅರಕಲಗೂಡು, ದುದ್ದ ಪೊಲೀಸ್ ಠಾಣೆಗಳಲ್ಲಿ ಒಟ್ಟು ಏಳು ಕಡೆ ಸರಗಳ್ಳತನ ನಡೆದಿದ್ದು, 30 ರಿಂದ 40 ಕಿಲೋಮಿಟರ್ ವ್ಯಾಪ್ತಿಯಲ್ಲೇ ಕಳ್ಳವಾಗಿತ್ತು. ಈ ಏಳು ಪ್ರಕರಣಗಳು ಕೂಡ ಭಾನುವಾರವೇ ನಡೆದಿತ್ತು. ಎಲ್ಲ ಪ್ರಕರಣಗಳಲ್ಲೂ ಖದೀಮ ಹೆಲ್ಮೆಟ್ ಧರಿಸಿದ್ದನು. ಆದರೆ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯವನ್ನಾಧರಿಸಿ ಅಖಾಡಕ್ಕಿಳಿದ ಹಾಸನ ಪೊಲೀಸರು ಕೊನೆಗೂ ಅಭಿಷೇಕ್‍ನನ್ನು ಬಂಧಿಸಿದ್ದಾರೆ. 

ಬಂಧಿತ ಅಭಿಷೇಕ್‍ನಿಂದ ಆರು ಲಕ್ಷದ ಐವತ್ತು ಸಾವಿರ ಮೌಲ್ಯದ 135 ಗ್ರಾಂ ತೂಕದ ಏಳು ಚಿನ್ನದ ಸರಗಳನ್ನು ಪೊಲೀಸರು ವಶಕ್ಕೆ ಪಡೆದು ಇದೀಗ ತನಿಖೆ ಮುಂದುವರಿಸಿದ್ದಾರೆ. ಸರಗಳ್ಳತನ ಪ್ರಕರಣವನ್ನು ಭೇದಿಸಿದ ಸರ್ಕಲ್ ಇನ್ಸ್‍ಪೆಕ್ಟರ್ ಸುರೇಶ್ ಅವರ ತಂಡಕ್ಕೆ ಎಸ್‍ಪಿ ಹರಿರಾಂ ಶಂಕರ್ ಬಹುಮಾನ ಘೋಷಿಸಿದ್ದಾರೆ. ಒಟ್ಟಿನಲ್ಲಿ ದುಡ್ಡಿನ ಹಿಂದೆ ಬಿದ್ದ ಪದವೀಧರ ಈಗ ಜೈಲು ಕಂಬಿ ಎಣಿಸುವಂತಾಗಿದೆ. 

 

 

 

 

 

 

 

(Btv)

Share This Article
";