ಸಮಾಜ ಅಧ್ಯಯನದ ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಗೆ ಈ ವಿದ್ಯಾರ್ಥಿ ಉತ್ತರವನ್ನೇನೋ ಬರೆದನು. ಆದರೆ ಶಿಕ್ಷಕರು ಸೊನ್ನೆ ಕೊಟ್ಟರು. ಯಾಕೆ ಕೊಟ್ಟರು, ನಿಮಗೂ ನಗು ತರುತ್ತಿದೆಯೇ ಈ ವಿಷಯ? ನೆಟ್ಟಿಗರಂತೂ ಬಿದ್ದುಬಿದ್ದು ನಗುತ್ತಿದ್ದಾರೆ.
ಮದುವೆ ಎಂದರೇನು? ಪ್ರಶ್ನೆಗೆ ಹತ್ತು ಅಂಕಗಳು. ಕೇಳಿರುವ ಪ್ರಶ್ನೆಗೆ ಸಂಕ್ಷಿಪ್ತವಾಗಿ ಉತ್ತರ ಬರೆಯಬೇಕು. ಎಲ್ಲ ವಿದ್ಯಾರ್ಥಿಗಳು ಅವರವರ ತಿಳಿವಳಿಕೆಗೆ ಅನುಸಾರ ಉತ್ತರ ಬರೆದರು. ತಕ್ಕಮಟ್ಟಿಗೆ ಉತ್ತರಗಳಿಗೆ ಅಂಕಗಳನ್ನೂ ಪಡೆದುಕೊಂಡರು. ಆದರೆ ಒಬ್ಬ ವಿದ್ಯಾರ್ಥಿ/ವಿದ್ಯಾರ್ಥಿನಿ ಮಾತ್ರ ಹತ್ತು ಅಂಕಕ್ಕೆ ಸೊನ್ನೆ ಗಳಿಸಿದನು/ಳು. ಆ ಉತ್ತರ ಪತ್ರಿಕೆ ಇದೀಗ ವೈರಲ್ ಆಗುತ್ತಿದೆ. ಕಾರಣವೇನು? ನೆಟ್ಟಿಗರೆಲ್ಲ ಬಿದ್ದುಬಿದ್ದು ನಗುತ್ತಿದ್ದಾರೆ. ಆದರೆ ಹೀಗೆ ಇದು ನಕ್ಕು ಹಗುರಾಗುವಂಥ ವಿಷಯವೇ?
ನೀನೀಗ ದೊಡ್ಡ ಹೆಣ್ಣುಮಗಳು, ನಿನ್ನನ್ನು ಪೋಷಿಸಲು ನಮಗೆ ಆಗದು, ಹಾಗಾಗಿ ನೀನೇ ನಿನ್ನ ಹುಡುಗನನ್ನು ಹುಡುಕಿಕೋ ಎಂದು ಹುಡುಗಿಯ ಅಪ್ಪ ಅಮ್ಮ ಹೇಳುತ್ತಾರೆ. ನೀನೀಗ ದೊಡ್ಡವನಾಗಿದ್ದೀಯಾ ಹೋಗು ಮದುವೆಯಾಗು ಎಂದು ತಮ್ಮ ಮಗನ ಮೇಲೆ ಕೂಗಾಡುತ್ತಿರುವ ತಂದೆತಾಯಿಗಳ ಬಳಿ ಆಕೆ ಹೋಗುತ್ತಾಳೆ. ಹುಡುಗ ಮತ್ತು ಹುಡುಗಿ ಪರಸ್ಪರ ಖುಷಿಯಿಂದ ಒಪ್ಪಿಕೊಂಡು ಒಟ್ಟಿಗೆ ಬಾಳಲು ತೀರ್ಮಾನಿಸುತ್ತಾರೆ. ಇದೇ ಮದುವೆ. ಇದು ಮದುವೆಯ ಬಗ್ಗೆ ವಿದ್ಯಾರ್ಥಿ/ವಿದ್ಯಾರ್ಥಿನಿ ವ್ಯಾಖ್ಯಾನಿಸಿದುದರ ಸಾರಾಂಶ. ಓದಿದಾಗ ನಗು ಬರುವುದು ಸಹಜ. ಆದರೆ ಮದುವೆಯಂತಹ ಸಂಕೀರ್ಣ ವಿಷಯವನ್ನು ಗ್ರಹಿಸುವುದು, ವಿವರಿಸುವುದು ನಿಜಕ್ಕೂ ಇಂದಿನ ಕಾಲಮಾನದಲ್ಲಿ ಸುಲಭವಲ್ಲ. ಅದರಲ್ಲೂ ವಿದ್ಯಾರ್ಥಿಗಳಿಗೆ!
ಎಲ್ಲರಂತೆ ಪಠ್ಯದಲ್ಲಿಯ ವ್ಯಾಖ್ಯಾನವನ್ನಷ್ಟೇ ಬಾಯಿಪಾಠ ಮಾಡಿ ಬರೆದಿದ್ದರೆ ಆ ವಿದ್ಯಾರ್ಥಿ ಶಭಾಷ್ ಎನ್ನಿಸಿಕೊಳ್ಳುತ್ತಿದ್ದನು.ಅದು ವೈರಲ್ ಆಗುತ್ತಿರಲಿಲ್ಲ. ವೈರಲ್ ಆಗಿದೆ ಎಂದರೆ ಅದು ಯಾರ ಜವಾಬ್ದಾರಿ?
ಈ ಉತ್ತರದಲ್ಲಿ ಪ್ರಕ್ಷುಬ್ಧತೆ ಇದೆ. ಹೀಗೆ ಉತ್ತರ ಬರೆದಿದ್ದೂ ತಪ್ಪಲ್ಲ. ಪಠ್ಯದಲ್ಲಿರುವ ಸಾಮಾನ್ಯ ಗ್ರಹಿಕೆಯ ಸ್ವಂತ ವ್ಯಾಖ್ಯಾನವನ್ನು ನಿರೀಕ್ಷಿಸಿದ್ದೂ ಶಿಕ್ಷಕರ ತಪ್ಪಲ್ಲ. ಆದರೆ ಓದಿ ನಕ್ಕಿದ್ದು ಮಾತ್ರ ತಪ್ಪು. ಇದು ಗಂಭೀರ ಮತ್ತು ಸೂಕ್ಷ್ಮ ವಿಷಯ ಅಲ್ಲವೇ? ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಯಾವ ತಿಳಿವಳಿಕೆಗಳನ್ನು ಹೇಗೆ ನೀಡಬೇಕು ಎನ್ನುವುದು ಪೋಷಕರ ಮತ್ತು ಶಿಕ್ಷಕರ ಜವಾಬ್ದಾರಿ. ಇಲ್ಲವಾದಲ್ಲಿ ಕಂಡದ್ದೆ ಸತ್ಯ, ಗ್ರಹಿಸಿದ್ದೇ ತಿಳಿವಳಿಕೆ.
(tv9)