ಬೈಲಹೊಂಗಲ: ಬದ್ಧತೆ, ಪ್ರಾಮಾಣಿಕತೆ, ನಿಷ್ಠೆಯಿಂದ ಪತ್ರಿಕಾ ಧರ್ಮವನ್ನು ಕಾಪಾಡಿಕೊಳ್ಳುತ್ತ ವಿಭಿನ್ನ ಹಾಗೂ ವಿಶಿಷ್ಟ ವರದಿಗಳಿಗೆ ಹೆಸರುವಾಸಿಯಾಗಿರುವ ಈಶ್ವರ ಹೋಟಿಯವರ ಸಾಮಾಜಿಕ ಕಳಕಳಿ ಪ್ರಶಂಸನೀಯವಾದದ್ದು ಎಂದು ಖ್ಯಾತ ಚಲನಚಿತ್ರ ನಟ-ನಿರ್ಮಾಪಕರಾದ ಶಿವರಂಜನ ಬೋಳಣ್ಣವರ ಹೇಳಿದರು. ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಂಗಸಂಸ್ಥೆಯಾದ ಹಾಗೂ ಕರ್ನಾಟಕ ಸರಕಾರದಿಂದ ಮಾನ್ಯತೆ ಪಡೆದಿರುವ ಏಕೈಕ ಬೃಹತ್ ಪ್ರಮಾಣದ ಪತ್ರಕರ್ತರ ಸಂಘಟನೆಯಾದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅತ್ಯುತ್ತಮ ಗ್ರಾಮಾಂತರ ವರದಿ (ಲೇಖನ)ಗಳಿಗೆ ಕೊಡಮಾಡುವ ಪ್ರತಿಷ್ಠಿತ ಜಿ. ನಾರಾಯಣಸ್ವಾಮಿ ಪ್ರಶಸ್ತಿಗೆ ಆಯ್ಕೆಯಾದ ವಿಜಯ ಕರ್ನಾಟಕ ದಿನಪತ್ರಿಕೆಯ ತಾಲೂಕಾ ಮುಖ್ಯ ವರದಿಗಾರರು ಹಾಗೂ ಹಿರಿಯ ಪತ್ರಕರ್ತರಾದ ಈಶ್ವರ ಹೋಟಿ ಅವರನ್ನು ಬೈಲಹೊಂಗಲದಲ್ಲಿ ಸನ್ಮಾನಿಸಿ ಅವರು ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಈಶ್ವರ ಹೋಟಿ ಪ್ರಶಸ್ತಿಯಿಂದ ಜವಾಬ್ದಾರಿ ಮತ್ತಷ್ಟು ಹೆಚ್ಚಿದ್ದು ಮಾಡುವ ಕಾರ್ಯ ಸಂತೃಪ್ತಿ ನೀಡಿದರೆ ಅದಕ್ಕಿಂತ ಮಿಗಿಲಾದ ಪ್ರಶಸ್ತಿ ಬೇರೆ ಇಲ್ಲ ಎಂದರು. ಬದುಕಿನಲ್ಲಿ ಜನರ ಪ್ರೀತಿ ವಿಶ್ವಾಸಕ್ಕಿಂತ ಬೇರೇನೂ ಮುಖ್ಯ ಅಲ್ಲ ಎಂದು ಅವರು ಹೇಳಿದರು. ಆಕಾಶವಾಣಿ-ದೂರದರ್ಶನ ಖ್ಯಾತ ಕಲಾವಿದರಾದ ಸಿ.ಕೆ ಮೆಕ್ಕೇದ ಮಾತನಾಡಿ ವೃತ್ತಿ ಜೀವನದಲ್ಲಿ ಎದುರಾಗುವ ಅನೇಕ ಸವಾಲುಗಳನ್ನು ಮೆಟ್ಟಿ ನಿಂತು ಹರಿತವಾದ ಲೇಖನಿಯಿಂದ ಜನಸಾಮಾನ್ಯರ ಹಾಗೂ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ವರದಿಗಳನ್ನು ಬರೆಯುವುದು ಹೋಟಿಯವರ ದಿಟ್ಟತನವನ್ನು ಎತ್ತಿ ತೋರಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೇಂದ್ರ ಬಸವ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರೂ, ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಮಾತನಾಡಿ ಹೋಟಿಯವರು ಸತ್ಯದ ಸಂಗಡ ಹೆಜ್ಜೆ ಹಾಕುತ್ತ ತಮ್ಮ ನೇರ ಹಾಗೂ ನಿಷ್ಠುರ ಲೇಖನಗಳಿಂದ ಬೈಲಹೊಂಗಲ ನಾಡಿನಲ್ಲಿ ಸಾಕಷ್ಟು ಒಳ್ಳೆಯ ಕಾರ್ಯಗಳಿಗೂ ಕಾರಣೀಭೂತರಾಗಿದ್ದಾರೆ ಎಂದು ಹೇಳಿದರು.
ಬೈಲಹೊಂಗಲ ಮರ್ಚಂಟ್ಸ್ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀಶೈಲ ಶರಣಪ್ಪನವರ ಮಾತನಾಡಿ ಮೌನಯೋಗಿಯಂತೆ ಸೇವೆ ಸಲ್ಲಿಸುತ್ತಿರುವ ಇವರ ಕಾಯಕನಿಷ್ಠೆ ಮೆಚ್ಚುವಂತದ್ದು ಎಂದು ಅಭಿಪ್ರಾಯಪಟ್ಟರು. ಬೂದಿಹಾಳದ ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಎನ್.ಆರ್.ಠಕ್ಕಾಯಿ ಮಾತನಾಡಿ ಶತಮಾನ ಪೂರೈಸಿದ ನಗರದ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕರಾಗಿ ಮಕ್ಕಳಿಗೆ ಪ್ರೀತಿ ಮತ್ತು ಕಾಳಜಿಯಿಂದ ಜ್ಞಾನಧಾರೆ ಎರೆಯುವುದರ ಜೊತೆಗೆ ಪತ್ರಿಕೋದ್ಯಮದಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿರುವುದು ಹೋಟಿಯವರ ವೈಶಿಷ್ಟ್ಯ ಎಂದು ಹೇಳಿದರು.
ಮಹಾಂತೇಶ ತುರಮರಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾ ಘಟಕದ ಮಾಜಿ ಅಧ್ಯಕ್ಷರಾಗಿ, ವಿವಿಧ ಕನ್ನಡಪರ ಸಂಘಟನೆಗಳ ಮಾರ್ಗದರ್ಶಕರಾಗಿ ನಾಡು ನುಡಿಯ ವಿಷಯದಲ್ಲಿ ಧನಾತ್ಮಕವಾಗಿ ಸ್ಪಂದಿಸುವ ಈಶ್ವರ ಅವರ ಪ್ರವೃತ್ತಿ ಎಲ್ಲರಿಗೂ ಇಷ್ಟವಾಗುತ್ತದೆ ಎಂದು ಹೇಳಿದರು. ಪಟ್ಟಿಹಾಳದ ಶ್ರೀ ಬಸವೇಶ್ವರ ಪ್ರೌಢಶಾಲೆಯ ಶಿಕ್ಷಕರಾದ ಎಸ್.ಎಂ ಪಾಟೀಲ ಮಾತನಾಡಿ ಅನೇಕ ವರ್ಷಗಳಿಂದ ತಮ್ಮ ವೃತ್ತಿ ಮತ್ತು ಪ್ರವೃತ್ತಿಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಹೋಟಿಯವರು ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದಾರ ಗುಣ ಹೊಂದಿದ್ದಾರೆ ಎಂದರು.
ಸ್ವಾವಲಂಬನ ಪ್ರತಿಷ್ಠಾನದ ಅಧ್ಯಕ್ಷ ಸಂತೋಷ ಕೊಳವಿ ಮಾತನಾಡಿ ಈಶ್ವರ ಹೋಟಿಯವರ ಸಾಧನೆ ನಮ್ಮ ನಾಡಿಗೆ ಕೀರ್ತಿಪ್ರಾಯವೆನಿಸಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ವೆಂಕಣ್ಣ, ಸಂತೋಷ ಪಿರಗೋಜಿ, ಉಪಸ್ಥಿತರಿದ್ದರು. ಪತ್ರಕರ್ತರಾದ ಚಂದ್ರಯ್ಯ ಯರಗಟ್ಟಿಮಠ ಸ್ವಾಗತಿಸಿದರು. ಪ್ರಕಾಶ ಬೆಳಗಾವಿ ವಂದಿಸಿದರು.